ಕಲ್ಪ ಮೀಡಿಯಾ ಹೌಸ್ | ಕೊಡೂರು |
ಪುರಾತನ ಆಚಾರ, ವಿಚಾರ ಹಾಗೂ ಆಚರಣೆಗಳು ಭಾರತೀಯರ ಬದುಕಿನ ಸಂಸ್ಕಾರ ಮತ್ತು ಸಂಸ್ಕೃತಿಯ ಬಹುಮುಖ್ಯ ಭಾಗವಾಗಿವೆ ಎಂದು ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲ ಆಶ್ರಮದ ಶ್ರೀ ಶ್ರೀ ಕುಮಾರದೇವರು ಅಭಿಪ್ರಾಯಪಟ್ಟರು.
ಅವರು ಬ್ಲಾಸಂ ಅಕಾಡೆಮಿ ಕೊಡೂರು ಮತ್ತು ಶ್ರೀ ವ್ಯಾಸ ಮಹರ್ಷಿ ಗುರುಕುಲಾಶ್ರಮ ಬಟ್ಟೆಮಲ್ಲಪ್ಪ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಲೀಲಾ ವೈಭವ ಮಕ್ಕಳ ಶ್ರೀ ಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಇಂದು ಆಧುನಿಕತೆಯ ಹೆಸರಿನಲ್ಲಿ ಪುರಾತನ ಆಚರಣೆ ಹಾಗೂ ನಮ್ಮ ಹಬ್ಬ ಹರಿದಿನಗಳನ್ನ ಅಲ್ಲಗಳೆಯುವ ಮಾನಸಿಕತೆ ಇಂದಿನ ಯುವ ಜನತೆಯಲ್ಲಿ ಹೆಚ್ಚುತ್ತಿದೆ. ಪೋಷಕರ ಮನಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಇದರಿಂದಾಗಿ ನಮ್ಮ ಮಕ್ಕಳಿಗೆ ನಾವು ಬೇಕು ಅಂದುಕೊಂಡಿರುವ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಲು ಸಾಧ್ಯವಾಗುತ್ತಿಲ್ಲ ಎಂದು ಶ್ರೀಗಳು ವಿಷಾದಿಸಿದರು.
ವಿಶೇಷವಾಗಿ ಭಾರತದಲ್ಲಿ ಋಷಿ ಪರಂಪರೆಯಿಂದ ಆರಂಭಗೊಂಡು, ಪುರಾಣ ಪುಣ್ಯ ಕಥೆಗಳ ಮೂಲಕ ಹೇಳಲ್ಪಟ್ಟ ವಿಚಾರಗಳು ವಿಜ್ಞಾನದಲ್ಲಿಯೂ ಕೂಡ ಸಿಂಧುಗೊಂಡಿವೆ. ಆದರೂ ನಾವು ಅವುಗಳನ್ನ ನಮ್ಮ ವೈಚಾರಿಕ ಹಿರಿಮೆ ಎಂಬಂತೆ ಪ್ರಶ್ನಿಸಿಕೊಂಡು, ಅಲ್ಲಗಳೆಯುತ್ತಾ ಮುನ್ನಡೆಯುತ್ತಿರುವುದು ಅತ್ಯಂತ ವಿಷಾದನೀಯ ಎಂದು ಶ್ರೀ ಕುಮಾರ ದೇವರು ಆತಂಕ ವ್ಯಕ್ತಪಡಿಸಿದರು.
Also read>> Mysuru Job Alert : Project Assistant Vacancy, 22,000 Salary, Apply by Oct 10
ಮತ್ತೊಂದೆಡೆ ಜೆನ್ ಜಿ ಹೆಸರಿನಲ್ಲಿ ನಮ್ಮ ನಿಜ ಬದುಕಿನ ಮಹತ್ವವನ್ನೇ ಪ್ರಶ್ನಿಸಿಕೊಳ್ಳುವ ಮೂಲಕ ಬೇರೆಯದೇ ದಾರಿಯಲ್ಲಿ ನಡೆಯುವ ಪ್ರಯತ್ನ ಇಂದಿನ ಯುವ ಜನತೆ ಮಾಡುತ್ತಿದೆ. ಇದರಿಂದ ದೇಶಕ್ಕೆ ಮುಂದೆ ಬಹುದೊಡ್ಡ ಗಂಡಾಂತರ ಉಂಟಾಗಬಹುದು. ಹೀಗಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಯಂತಹ ಹಬ್ಬ – ಹರಿದಿನಗಳು ಮತ್ತು ಆಚಾರ ವಿಚಾರಗಳ ಜೊತೆಗೆ ಪರಿಸರದ ಪಾಠಗಳ ಮೂಲಕ ಭಾರತೀಯ ಪರಂಪರೆಯ ಮಹತ್ವವನ್ನ ಹೆಚ್ಚೆಚ್ಚು ಕಲಿಸುವುದರೊಂದಿಗೆ ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಕೂಡ ಗಟ್ಟಿಗೊಳಿಸಬೇಕಿರುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಶ್ರೀ ಕುಮಾರ ದೇವರು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಸುಮಂತ್ ಕೋಹಿಮಾ, ಇಂದು ಮಕ್ಕಳ ಶಿಕ್ಷಣ ಮೊಬೈಲ್ ಗಳಿಂದ ಆಗುತ್ತಿದೆ. ಇದು ಅತ್ಯಂತ ಅಪಾಯಕಾರಿ. ಇದರ ಬದಲಾಗಿ ನಾವು ಮಕ್ಕಳ ಶಿಕ್ಷಣವನ್ನು ಕಲೆ ಸಾಹಿತ್ಯ ಹಾಗೂ ನಮ್ಮ ವಿಶಿಷ್ಟ ಆಚರಣೆಗಳ ಮೂಲಕ ನೀಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಮೊಬೈಲ್ ಗಳು ಕ್ಷಣಿಕ ಉತ್ತೇಜನದ ಮೂಲಕ ಮಕ್ಕಳಿಗೆ ಅತಿ ವೇಗದ ಅಪಾಯಕಾರಿ ಬದುಕಿನೆಡೆಗೆ ಕೊಂಡೊಯ್ಯುತ್ತಿದೆ. ಇದಕ್ಕೆ ಬದಲಾಗಿ ಮಕ್ಕಳಿಗೆ ನಾಟಕ, ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಶಿಕ್ಷಣವನ್ನು ಕೂಡ ಬೆರೆಸಿ ಕಲಿಸಿದಾಗ ಮಕ್ಕಳಲ್ಲಿ ಅತ್ಯುತ್ತಮವಾದ ಸಾಧನೆ ಕಾಣಲು ಸಾಧ್ಯ. ಇಂದು ಪೋಷಕರಲ್ಲಿ ಅತಿ ವೇಗದ ಸಾಧನೆ ಮಕ್ಕಳಲ್ಲಿ ಆಂಟಿಬಯೋಟಿಕ್ ನಂತೆ ಕೆಲಸ ಮಾಡುತ್ತಿದೆ. ಇದರಿಂದ ಮಕ್ಕಳಲ್ಲಿ ಮಾನಸಿಕ ರೋಗನಿರೋಧಕ ಶಕ್ತಿ ಕುಂದುವ ಅಪಾಯ ಕೂಡ ಹೆಚ್ಚಿದೆ. ದೇಹಕ್ಕಾಗಲಿ ಮನಸ್ಸಿಗಾಗಲಿ ಅತಿಯಾದ ಆಂಟಿಬಯೋಟಿಕ್ ಅಪಾಯಕಾರಿ ಎಂದು ಸುಮಂತ್ ಕೊಹಿಮ ಪೋಷಕರನ್ನು ಎಚ್ಚರಿಸಿದರು.
ಮಕ್ಕಳಿಗೆ ಕಷ್ಟಗಳ ಅನುಭವವೇ ಆಗದಂತೆ ಬೆಳೆಸುವ ಪೋಷಕರ ಮನಸ್ಥಿತಿಯಿಂದಾಗಿ ಮಕ್ಕಳು ಭವಿಷ್ಯದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಗೆ ತಳ್ಳುವ ಆತಂಕ ಹೆಚ್ಚಿದೆ ಎಂದು ಶಿವಮೊಗ್ಗ ಗಂಗೋತ್ರಿ ಪಿಯು ಕಾಲೇಜ್ ನ ಕಾರ್ಯದರ್ಶಿ, ಹಾಗೂ ಹಿರಿಯ ಪತ್ರಕರ್ತ ಜಗದೀಶ್ ಸಂಪಳ್ಳಿ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅವರು, ಮಾತನಾಡಿ ಮಕ್ಕಳಿಗೆ ಅತಿಯಾದ ಪ್ರೀತಿ ವಿಷಕಾರಿಯಾಗಿ ಪರಿಣಮಿಸುತ್ತಿದೆ. ಇದನ್ನು ಪೋಷಕರು ಆದಷ್ಟು ಬೇಗ ಮನಗಣಬೇಕು. ಮಕ್ಕಳಿಗೆ ಸುಖ ದುಃಖಗಳನ್ನ ಸಮ ಪ್ರಮಾಣದಲ್ಲಿ ಬೆರೆಸಿ, ಕಲಿಸಿ ಬೆಳೆಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು. ಒಂದು ವೇಳೆ ತಂದೆ ತಾಯಿ ಅಥವಾ ಪೋಷಕರು ಹಾಗೂ ಶಿಕ್ಷಕರು ಸರಿಯಾದ ಪಾಠವನ್ನು ತಿದ್ದಿ ತೀಡಿ ಹೇಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಸಮಾಜ ತನ್ನದೇ ರೀತಿಯಲ್ಲಿ ಪಾಠ ಕಲಿಸಲಿದೆ. ಇದನ್ನು ಪೋಷಕರು ಮನಗಾಣಬೇಕು ಎಂದು ಜಗದೀಶ್ ಸಂಪಳ್ಳಿ ಹೇಳಿದರು.
ಶಿಕ್ಷಣ ತಜ್ಞ, ಸಾಮಾಜಿಕ ಕಾರ್ಯಕರ್ತ ಬ್ಯಾಡಗಿಯ ಎಂ ಎಸ್ ಪಾಟೀಲ್ ಮಾತನಾಡಿ, ಶಿಕ್ಷಣ ಸಂಸ್ಥೆಗಳಿಗೆ ಕೇವಲ ಶುಲ್ಕ ಪಾವತಿಸುವುದರಿಂದ ಮಕ್ಕಳ ಜವಾಬ್ದಾರಿ ಮುಗಿಯುವುದಿಲ್ಲ, ಹಾಗೂ ಶಿಕ್ಷಣ ಪೂರ್ಣಗೊಳ್ಳುವುದಿಲ್ಲ. ಬದಲಾಗಿ ತಮ್ಮ ಮಕ್ಕಳನ್ನು ಅತ್ಯಂತ ಜವಾಬ್ದಾರಿಯಿಂದ ಬೆಳೆಸಲು ಶಿಕ್ಷಣ ಸಂಸ್ಥೆಗಳಿಗೆ, ಶಿಕ್ಷಕರಿಗೆ ತಮ್ಮ ಮಕ್ಕಳ ಮೇಲಿನ ಪೂರ್ಣ ಕಲಿಕೆಯ ಹಕ್ಕನ್ನು, ಕಲಿಸುವ ಹಕ್ಕನ್ನು ಶಿಕ್ಷಕರಿಗೆ ನೀಡಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಶ್ರೀ ಅನಂತೇಶ್ವರ ಜ್ಯುವೆಲ್ಲರಿ ಹೊಸನಗರ, ಕೆಫೆ ಜೋನ್ ರಿಪ್ಪನ್ ಪೇಟೆ ಹಾಗೂ ಶ್ರೀ ಸದ್ಗುರು ಸೂಪರ್ ಮಾರ್ಕೆಟ್ ಹೊಸನಗರ ಇವರುಗಳು ಕಾರ್ಯಕ್ರಮದ ಸಹ ಪ್ರಾಯೋಜಕರಾಗಿದ್ದರು.
ಕಾರ್ಯಕ್ರಮದಲ್ಲಿ ಉದ್ಯಮಿ ಮಹೇಶ್, ತೀರ್ಪುಗಾರರಾಗಿ ಭಾಗವಹಿಸಿದ್ದ ಎ. ಆರ್ ಗಣಪತಿ ಭಟ್ ಪುರಪ್ಪೆ ಮನೆ, ಉಷಾರಾಣಿ, ಅಶ್ವಿನಿ ಪಂಡಿತ್, ಸಂಗೀತ ಗುರು ಮಾಧುರಿ ದೇವಾನಂದ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಥಾಮಸ್ ವಹಿಸಿದ್ದರು. ತೀರ್ಪುಗಾರರಾದ ಕಲಾವಿದ ನೀಲ್, ಡ್ರಾಮಾ ಜೂನಿಯರ್ ಖ್ಯಾತಿಯ ಪ್ರಣಿತ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತ ಅಧಿಕಾರಿ ಮಂಜುನಾಥ್ ಬ್ಯಾಣದ ಸ್ವಾಗತಿಸಿ, ಪ್ರಾಸ್ತವಿಕ ನುಡಿಗಳನ್ನಾಡಿದರು. ಅಶ್ವಿನಿ ಪ್ರಾರ್ಥಿಸಿ, ಉಪ ಪ್ರಾಚಾರ್ಯ ಪ್ರಕಾಶ್ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ನೂರಕ್ಕಿಂತ ಹೆಚ್ಚು ಮಕ್ಕಳು ಕೃಷ್ಣವೇಶ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







