ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿ ಆಗಿರುವ ಯಕ್ಷಗಾನ ನಮ್ಮೂರಿನ ಹೆಮ್ಮೆಯ ಕಲೆ, ಆದರೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಗೆ ಈ ಯಕ್ಷಗಾನದ ಮೇಲೆ ಆಸಕ್ತಿ ತೋರದೆ ಇರುವುದು ತುಂಬಾ ಬೇಸರದ ಸಂಗತಿ.
ರೋಷನ್ ಗಿಳಿಯಾರು ಎನ್ನುವ ಈ ಪುಟ್ಟ ಪೋರ ಚಿಕ್ಕಂದಿನಿಂದಲೇ ಯಕ್ಷಗಾನದ ಬಗ್ಗೆ ಅತೀವ ಆಸಕ್ತಿಯಿಂದ ಯಕ್ಷರಂಗದ ಎಲ್ಲಾ ವಿಭಾಗಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾನೆ.
ಈ ಪುಟ್ಟ ಪೋರ ಕೋಟ ಗಿಳಿಯಾರಿನ ಕೆ. ಶಿವರಾಮ ಮತ್ತು ರಾಧಿಕಾ ಇವರ ಮುದ್ದಿನ ಮಗ, ಸೇವಾ ಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ ಇಲ್ಲಿ 6 ನೆಯ ತರಗತಿಯಲ್ಲಿ ಓದುತ್ತಿದ್ದು ತರಗತಿಗೆ ಪ್ರಥಮ.
ಆರಂಭದಲ್ಲಿ ಪ್ರಸಾದ್ ಮೊಗೆಬೆಟ್ಟು, ದೇವದಾಸ್ ಕೊಡ್ಲಿಯಂತಹ ಮಹಾನ್ ಕಲಾವಿದರಿಂದ ತರಬೇತಿ ಪಡೆದು, ಪ್ರಸ್ತುತ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆಯಲ್ಲಿ ರಾಜಶೇಖರ ಹೆಬ್ಬಾರ್ ಇವರ ನಿರ್ದೇಶನದಲ್ಲಿ ಗುಂಡ್ಮಿ ಸದಾನಂದ ಐತಾಳ್, ರಾಮಕೃಷ್ಣ ಭಟ್, ಉದಯ್ ಕುಮಾರ್ ಹೊಸಾಳ, ಕೇಶವ ಆಚಾರ್ಯ ಇವರ ತರಬೇತಿಯಲ್ಲಿ ಭಾಗವತಿಕೆ, ಚಂಡೆ, ಮದ್ದಳೆ ಅಭ್ಯಾಸ ಮಾಡುತ್ತಿದ್ದಾನೆ.
ಬರಿ ಯಕ್ಷಗಾನ ಮಾತ್ರವಲ್ಲದೆ ನಟನೆಯಲ್ಲೂ ಈ ಮಗು ಎತ್ತಿದ ಕೈ. ಈಗಾಗಲೇ ಜಿ. ಮೂರ್ತಿ ನಿರ್ದೇಶನದ ಚಿತ್ರ ಸುಗಂಧಿ ರಾಘವೇಂದ್ರ ಶಿರಿಯಾರ ನಿರ್ದೇಶನದ ಕಿರುಚಿತ್ರ ಅಜ್ಜಿಮನಿ ಅಲ್ಲದೆ ಕಟಕ ಖ್ಯಾತಿಯ ರವಿ ಬಸ್ರೂರ್ ನಿರ್ದೇಶನದ ಗಿರ್ಮಿಟ್ ಚಿತ್ರದಲ್ಲೂ ಅಭಿನಯಿಸಿದ್ದಾನೆ.
ತಂದೆ ತಾಯಿಯ ಪ್ರೋತ್ಸಾಹದಲ್ಲಿ ಬೆಳೆಯುತ್ತಿರುವ ಮಾ.ರೋಷನ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಕಲಾಮಾತೆಯ ಆಶೀರ್ವಾದ ಈ ಮಗುವಿನ ಮೇಲಿರಲಿ ಎನ್ನುವುದೇ ನಮ್ಮೆಲ್ಲರ ಆಶಯ.
ಲೇಖನ: ಪ್ರದೀಪ್ ಪುತ್ರನ್ ಕೋಟ
Discussion about this post