ನವದೆಹಲಿ: ಸೆಪ್ಟೆಂಬರ್ ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಶೇಷ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಮೂಲಗಳಿಂದ ಮಾಹಿತಿ ತಿಳಿದುಬಂದಿದ್ದು, ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲು ಬಹುತೇಕ ನಿರ್ಧರಿಸಲಾಗಿದೆ ಎನ್ನಲಾಗಿದೆ.
ಸೆ.17 ರಿಂದ 9ರವರೆಗೂ ನವದೆಹಲಿಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ರಾಹುಲ್ ಜೊತೆಯಲ್ಲಿ ಎಡರಂಗದ ಹಿರಿಯ ಮುಖಂಡ ಸೀತಾರಾಮ್ ಯೆಚೂರಿ ಅವರನ್ನೂ ಸಹ ಆಹ್ವಾನಿಸಲಾಗುತ್ತದೆ ಎನ್ನಲಾಗಿದೆ.
ಈ ನಿರ್ಧರಿತ ಕಾರ್ಯಕ್ರಮದಲ್ಲಿ ಭಾರತದ ಭವಿಷ್ಯ ಎಂಬ ವಿಷಯದ ಕುರಿತಾಗಿ ಆರ್ ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಮಾತನಾಡಲಿದ್ದಾರೆ.
ಸೈದ್ದಾಂತಿಕವಾಗಿ ಆರ್‌ಎಸ್‌ಎಸ್ ಅನ್ನು ವಿರೋಧಿಸುವ ರಾಹುಲ್ ಗಾಂಧಿಯವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂಬ ವಿಚಾರ ದೇಶದಲ್ಲಿ ತೀವ್ರ ಚರ್ಚೆ ಹಾಗೂ ಆಶ್ಚರ್ಯಕ್ಕೆ ಕಾರಣವಾಗಿದೆ.
ಇತ್ತೀಚಿಗಷ್ಟೇ ರಾಹುಲ್ ಗಾಂಧಿ, ಆರ್ ಎಸ್ ಎಸ್ ಅರಬ್ ರಾಷ್ಟ್ರಗಳಲ್ಲಿರುವ ಮುಸ್ಲಿಂ ಬ್ರದರ್ ಹುಡ್ ಸಂಘಟನೆಯ ಕಲ್ಪನೆಯನ್ನು ಹೋಲುತ್ತದೆ. ಅದು ಭಾರತದ ಸ್ವರೂಪವನ್ನೇ ಬದಲಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.
ಆರ್ ಎಸ್‌ಎಸ್ ಅನ್ನು ಐಎಸ್‌ಐಎಸ್ ಉಗ್ರ ಸಂಘಟನೆಗೆ ಹೋಲಿಸಿದ್ದ ರಾಹುಲ್ ಗಾಂಧಿ ವಿರುದ್ಧ ಆರ್ ಎಸ್‌ಎಸ್ ಪ್ರಚಾರ ಪ್ರಮುಖ ಅರುಣ್ ಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿಗೆ ದೇಶ ಮತ್ತು ಆರ್‌ಎಸ್‌ಎಸ್ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ನಾಗ್ ಪುರದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು.
ಆದರೆ, ಪ್ರಣವ್ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದ ಕಾಂಗ್ರೆಸ್, ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಬಹಳಷ್ಟು ಒತ್ತಡ ಹೇರಿತ್ತು. ಆದರೆ, ಆ ಕಾರ್ಯಕ್ರಮದಲ್ಲಿ ಪ್ರಣವ್ ದಾ ಪಾಲ್ಗೊಂಡು ಮಾತನಾಡಿದ್ದರು.
Discussion about this post