ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ಪರಿಣಾಮ ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮಹಿಳೆಯರ ಜನ್ ಧನ್ ಖಾತೆಗೆ ಕೇಂದ್ರ ಸರ್ಕಾರ ಹಾಕಿರುವ 500 ರೂ. ಪಡೆಯಲು ನಗರದ ಹಲವು ಬ್ಯಾಂಕ್’ಗಳ ಮುಂದೆ ನಿನ್ನೆ ಹಾಗೂ ಇಂದು ನೂಕುನುಗ್ಗಲು ಉಂಟಾಗಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು ಹೈರಾಣಾಗಿದ್ದಾರೆ.
ನಗರದ ಸೌತ್ ಇಂಡಿಯನ್ ಬ್ಯಾಂಕ್, ವೀರಾಪುರದ ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್’ಗಳ ಮುಂದೆ ಬೆಳಗ್ಗೆ 9 ಗಂಟೆಯಿಂದಲೇ ಜನರು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ನೂಕುನುಗ್ಗಲಲ್ಲಿ ನಿಂತಿದ್ದರು.
ಈ ವಿಚಾರ ತಿಳಿದ ಪೊಲೀಸರು ಬ್ಯಾಂಕ್’ಗಳ ಮುಂದೆ ಜಮಾಯಿಸಿದ್ದ ಜನರನ್ನು ನಿಯಂತ್ರಿಸಲು ಹೈರಾಣಾದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಪೊಲೀಸರು ಎಷ್ಟು ಹೇಳಿದರೂ ಕೇಳದೇ ನುಗ್ಗುತ್ತಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸ್ವಲ್ಪ ಕಠಿಣವಾಗಿಯೇ ಮಾತನಾಡಿ, ಕೊಂಚ ಲಾಠಿ ರುಚಿ ತೋರಿಸಿಬೇಕಾಯಿತು.
ವೀರಾಪುರದ ಬ್ಯಾಂಕ್ ಬಳಿಯೂ ಸಹ ಇಂತಹುದ್ದೇ ಪರಿಸ್ಥಿತಿಯಿದ್ದು, ಹಣ ಪಡೆಯಲು ಸುಮಾರು 300 ಮೀಟರ್’ಗಳಷ್ಟು ದೂರ ಸಾಲುಗಟ್ಟಿ ನಿಂತಿದ್ದರೂ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬ್ಯಾಂಕ್ ಸಿಬ್ಬಂದಿಯೊಂದಿಗೆ ವಾಗ್ವಾದ
ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬ್ಯಾಂಕ್’ಗಳಲ್ಲಿ ಕೇವಲ ತುರ್ತು ಹಣ ಜಮಾ ಮಾಡುವುದು ಹಾಗೂ ತೆಗೆಯುವುದಕ್ಕೆ ಮಾತ್ರ ಅವಕಾಶವಿದ್ದು, ಬೇರಾವುದೇ ರೀತಿಯ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಕೆಲವು ಬ್ಯಾಂಕ್’ಗಳಲ್ಲಿ ಇದನ್ನು ಹೇಳಿದರೂ ಗ್ರಾಹಕರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿದ್ದ ದೃಶ್ಯ ಕಂಡು ಬಂದಿತು.
ಇನ್ನು, ಎಷ್ಟೋ ವರ್ಷದಿಂದ ವ್ಯವಹಾರ ನಡೆಸದೇ ಕಾರ್ಯಾಚರಣೆಯಲ್ಲಿ(ಡಾರ್ಮೆಟ್ ಅಕೌಂಟ್) ಇಲ್ಲದ ಖಾತೆಗಳಿಂದಲೂ ಸಹ ಹಣ ನೀಡಿ ಎಂದು ಬ್ಯಾಂಕ್ ಸಿಬ್ಬಂದಿಯೊಂದಿಗೆ ಕೆಲವು ಗ್ರಾಹಕರು ವಾಗ್ವಾದ ನಡೆಸುತ್ತಿದ್ದರು. ಆದರೆ, ಡಾರ್ಮೆಟ್ ಅಕೌಂಟ್’ನಿಂದ ಹಣ ತೆಗೆಯಲು ಬರುವುದಿಲ್ಲ. ಎಪ್ರಿಲ್ 15ರ ನಂತರ ದಾಖಲೆ ನೀಡಿ, ಖಾತೆ ಚಾಲನೆ ಮಾಡಿಕೊಂಡ ನಂತರವಷ್ಟೇ ಹಣ ತೆಗೆಯಲು ಸಾಧ್ಯ ಎಂದು ಸಿಬ್ಬಂದಿ ಎಷ್ಟು ಹೇಳಿದರೂ ಕೇಳದೇ, ಕೆಲವು ಗ್ರಾಹಕರು ಜಗಳಕ್ಕೇ ಇಳಿದಿದ್ದಾರೆ. ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು, ಲಾಠಿ ರುಚಿ ತೋರಿಸಿ, ಇಂತಹ ಗ್ರಾಹಕರನ್ನು ವಾಪಾಸ್ ಕಳುಹಿಸಬೇಕಾಯಿತು.
Get in Touch With Us info@kalpa.news Whatsapp: 9481252093
Discussion about this post