ಮಲೆನಾಡು ಈ ದೇಶದ ವಿವಿಧ ಕ್ಷೇತ್ರಗಳಿಗೆ ತನ್ನದೇ ವಿಶಿಷ್ಟ ವ್ಯಕ್ತಿ ಹಾಗೂ ಪ್ರತಿಭೆಗಳನ್ನು ಕೊಡುಗೆಯಾಗಿ ಕೊಟ್ಟಂತಹ ಪ್ರದೇಶ. ಇಂತಹ ಮಲೆನಾಡಿನ ಆ ಪ್ರತಿಭೆ ಸಾಕಷ್ಟು ಕನಸುಗಳನ್ನು ಹೊತ್ತು ಸಂಗೀತ ಕ್ಷೇತ್ರದಲ್ಲಿ ಕಾಲಿಟ್ಟು, ಇಂದು ಕಮರ್ಷಿಯಲ್ ಚಿತ್ರವೊಂದಕ್ಕೆ ಸ್ವತಂತ್ರ ಸಂಗೀತ ನಿರ್ದೇಶಕನಾಗಿ ಬೆಳೆದ ಬಗ್ಗೆ ಹೇಳಲೇಬೇಕು ಎಂಬ ಕಾರಣಕ್ಕಾಗಿ ಈ ಲೇಖನ.
ನೀವು ಯೂಟ್ಯೂಬ್‌ನಲ್ಲಿ ಹೆಚ್ಚು ಸಕ್ರಿಯವಾಗಿದ್ದರೆ ಸಂಕಷ್ಟಕರ ಗಣಪತಿ ಎಂಬ ಹೊಸ ಚಿತ್ರವೊಂದರ ಟ್ರೇಲರ್ ನೋಡಿರುತ್ತೀರಿ… ಆ ಟ್ರೇಲರ್ ಹೇಗಿದೆ ಎಂದರೆ, ಒಮ್ಮೆ ಅದನ್ನು ನೋಡಿದವರು ಚಿತ್ರವನ್ನೊಮ್ಮೆ ನೋಡಲೇಬೇಕು ಎಂಬ ಕುತೂಹಲ ಮೂಡಿಸಿಯೇ ಇರುತ್ತದೆ. ಆ ಟ್ರೇಲರ್ ಅನ್ನು ಯೂಟ್ಯೂಬ್‌ನಲ್ಲಿ ಹತ್ತಿರಹತ್ತಿರ 2 ಲಕ್ಷ ಮಂದಿ ವೀಕ್ಷಿಸಿದ್ದಾರೆ.
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅತ್ಯಂತ ಚೂಸಿ.. ಯಾವುದನ್ನೂ ಅಷ್ಟು ಸುಲಭವಾಗಿ ಓಕೆ ಮಾಡುವುದಿಲ್ಲ. ಇಂತಹ ಸ್ಟಾರ್ ನಟನನ್ನು ಚಿತ್ರದ ತಂಡ ಭೇಟಿಯಾಗಿ ಆಡಿಯೋ ಕೇಳಿಸುತ್ತದೆ. ಇದನ್ನು ಕೇಳಿದ ಪುನೀತ್ ಎಷ್ಟು ಎಂಪ್ರೆಸ್ ಆಗುತ್ತಾರೆ ಎಂದರೆ ಇದರ ಆಡಿಯೋ ಹಕ್ಕುಗಳನ್ನು ಸ್ವತಃ ತಾವೇ ತಮ್ಮ ಪಿಆರ್‌ಕೆ ಬ್ಯಾನರ್ ಅಡಿಯಲ್ಲಿ ಖರೀದಿಸುತ್ತಾರೆ.
ಭಾರೀ ವಿಶೇಷ ಎಂದರೆ, ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿ ಟೈಮ್ ನೀಡಿ, ಸ್ವಯಂ ಆಸಕ್ತಿಯಿಂದ ತಾವೇ ಕೈಯಾರೆ ಸಂಭ್ರಮದಿಂದ ಆಡಿಯೋ ರಿಲೀಸ್ ಮಾಡುತ್ತಾರೆ. ಸಾಮಾನ್ಯವಾಗಿ ಹೊಸಬರ ತಂಡಕ್ಕೆ ಪ್ರೋತ್ಸಾಹಗಳು ಕಡಿಮೆಯೇ. ಆದರೆ, ಈ ಚಿತ್ರ ತಂಡಕ್ಕೆ, ಆಡಿಯೋಗೆ ಪುನೀತ್ ಅವರಂತಹ ಚಿತ್ರ ಶಕ್ತಿಗಳು ಈ ರೀತಿ ಬೆಂಬಲ ದೊರೆಯುವಂತೆ ಮ್ಯಾಜಿಕ್ ಆಗಿದ್ದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿಯೇ ಮೂಡುತ್ತದೆ. ಇಲ್ಲಿದೆ ಉತ್ತರ..
ಇಷ್ಟೆಲ್ಲಾ ಮ್ಯಾಜಿಕ್‌ಗಳಿಗೆ ಕಾರಣವಾಗಿರುವ ಚಿತ್ರ ಶಕ್ತಿಗಳ ಪ್ರಮುಖವಾಗಿರುವುದು ನಮ್ಮ ಶಿವಮೊಗ್ಗದ ಕೂಸು, ಸಂಗೀತ ನಿರ್ದೇಶಕರಾಗಿ ತಮ್ಮ ಅಗಾಧವಾದ ಪ್ರತಿಭೆಯನ್ನು ಒರೆಗೆ ಹಚ್ಚಿ, ಅದರಲ್ಲಿ ಯಶಸ್ಸಿನ ಹಾದಿಯಲ್ಲಿದ್ದಾರೆ ನಮ್ಮ ಶಿವಮೊಗ್ಗದ ಪ್ರತಿಭೆ ಋತ್ವಿಕ್ ಮುರಳೀಧರ್…
ಶಿವಮೊಗ್ಗ ಕುವೆಂಪು ರಸ್ತೆಯಲ್ಲಿರುವ ಶಂಕರ್ ಸೈಕಲೋತ್ಸವ ಯಾರಿಗೆ ಗೊತ್ತಿಲ್ಲ ಹೇಳಿ. ಇದರ ಮಾಲಿಕ ಕೆ.ಎಸ್. ಮುರಳೀಧರ್ ಹಾಗೂ ಆರತಿ ಮುರಳೀಧರ್ ದಂಪತಿಗಳ ಪುತ್ರನೇ ಈ ಋತ್ವಿಕ್ ಮುರಳೀಧರ್.
ಬಾಲ್ಯದಿಂದಲೇ ಸಂಗೀತಾಭ್ಯಾಸ:
ಋತ್ವಿಕ್ ಗೆ ತಾಯಿ ಶಾರದೆ ಎಳೆಯ ವಯಸ್ಸಿನಲ್ಲೇ ದಯೆ ತೋರಿದ್ದಳು. ತಮ್ಮ ನಾಲ್ಕನೆಯ ವರ್ಷದಿಂದಲೇ ಶಾಸ್ತ್ರೀಯ ಸಂಗೀತ ಹಾಗೂ ಹಾರ್ಮೋನಿಯಂ ಅಭ್ಯಾಸಕ್ಕೆ ಮುನ್ನಡಿಯಿಟಿದ್ದ ಋತ್ವಿಕ್, ಆನಂತರ ಜಯಶ್ರೀ ನಾಗರಾಜ್ ಹಾಗೂ ಗುರುಗುಹ ಸಂಗೀತ ವಿದ್ಯಾಲಯದ ವಿದ್ವಾನ್ ಶೃಂಗೇರಿ ನಾಗರಾಜ್ ಅವರ ಶಿಷ್ಯರಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ಉಸಿರಾಗಿಸಿಕೊಂಡರು. ಶಾಲಾ ಕಾಲೇಜುಗಳ ಅವಧಿಯಲ್ಲಿ ಬಹಳಷ್ಟು ಸಂಗೀತ ಕಾರ್ಯಕ್ರಮ ಹಾಗೂ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಂಸೆ ಪಡೆದರು.
ಝೀ ಕನ್ನಡದ ವೇದಿಕೆ:
ಅದು ಋತ್ವಿಕ್ ಪಿಯುಸಿ ಓದುತ್ತಿದ್ದ ವೇಳೆ.. ಝೀ ಕನ್ನಡ ವಾಹಿನಿಯು ಆರಂಭಿಸಿದ ಸರಿಗಮಪ ಸೀಸನ್ 1ರಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತು, ಟಾಪ್ 5ರವರೆಗೂ ತಲುಪಿದರು. ಅಂದು ಇಡಿಯ ಶಿವಮೊಗ್ಗ ಇವರ ಬಗ್ಗೆ ಹೆಮ್ಮೆ ಪಟ್ಟಿತ್ತು. ಈ ವೇಳೆ ಸ್ಪರ್ಧೆಯ ಕುರಿತಾಗಿ ಆಸಕ್ತಿ ಹೆಚ್ಚಿದ್ದರಿಂದ ಶಿಕ್ಷಣಕ್ಕೂ ಸಹ ಅಡ್ಡಿಯಾಯಿತು. ಇದೇ ವೇಳೆ ಸ್ಫರ್ಧೆಯನ್ನು ಹಿನ್ನಡೆ ಅನುಭವಿಸಿದ ಅವರು ಎಲಿಮಿನೇಟ್ ಆಗಬೇಕಾಯಿತು.
ಅಲ್ಲಿಂದ ಬಿಬಿಎಂ ಮುಗಿಸಿ, ಎಂಬಿಎಗಾಗಿ ಬೆಂಗಳೂರಿಗೆ ತೆರಳಿದ ಋತ್ವಿಕ್ ಮನಸ್ಸಿನಲ್ಲಿ ಮಾತ್ರ ಸಂಗೀತ ಕ್ಷೇತ್ರದ ಅಲೆಗಳು ಏಳುತ್ತಲೇ ಇದ್ದವು. ಎಲೆಕ್ಟ್ರಾನಿಕ್ ಮ್ಯೂಸಿಕ್ ಪ್ರೊಡಕ್ಷನ್‌ಗಳೆಡೆಗೆ ಚಿತ್ತ ಹರಿದು, ಇದರ ಕಲಿಕೆಯನ್ನು ಗಂಭೀರವಾಗಿ ಆರಂಭಿಸಿದ ಋತ್ವಿಕ್, ನಿಧಾನವಾಗಿ ವೀಡಿಯೋ ಜಿಂಗಲ್‌ಸ್, ಸಣ್ಣ ಜಾಹೀರಾತುಗಳಿಗೆ ಸಂಗೀತ ನೀಡುವ ಮೂಲಕ ರಾಜಧಾನಿಯಲ್ಲಿ ತಮ್ಮ ಕಲಾ ಸೇವೆಯನ್ನು ಆರಂಭಿಸಿ, ಇದಕ್ಕೆ ಪೂರಕವಾಗಿ ಸಣ್ಣದೊಂದು ಸ್ಟುಡಿಯೋ ರೀತಿಯ ವ್ಯವಸ್ಥೆ ಮಾಡಿಕೊಂಡು, ಕವರ್ ಸಾಂಗ್‌ಸ್ ಮಾಡಲು ಆರಂಭಿಸಿದರು.
ಇವರ ಎದೆಯೊಳಗಿನ ತುಡಿತ ಇಂಡಸ್ಟ್ರಿ ಕಡೆ ಸೆಳೆಯುತ್ತಾ ಹೋಗಿ ಇದೇ ಕ್ಷೇತ್ರದ ಹಲವಾರು ಜನರ ಪರಿಚಯವಾಯಿತು. ಇದರಿಂದಾಗಿ, ಒಂದು ಸಿನೆಮಾಗೆ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕಾಗಿ ಕೆಲಸ ಮಾಡುವ ಅವಕಾಶ ದೊರೆತು, ಚಿತ್ರವೂ ಆರಂಭವಾಯಿತು. ಆದರೆ, ಕಾರಣಾಂತರಗಳಿಂದ ಚಿತ್ರ ಅರ್ಧದಲ್ಲಿಯೇ ಸ್ಥಗಿತಗೊಂಡಿತು.
ಬ್ರೇಕ್ ನೀಡಿದ ಪನ್ಮಂಡ್ರಿ ಕ್ರಾಸ್
ಆದರೆ, ಈ ಬೆಳವಣಿಗೆಯಿಂದ ಋತ್ವಿಕ್ ಧೃತಿಗೆಡಲಿಲ್ಲ. ತಮ್ಮ ಸ್ನೇಹಿತರಾದ ಉದಯ್, ವಿಜೇತ್ ಹಾಗೂ ಅರ್ಜುನ್ ಅವರೊಂದಿಗೆ ತಂಡ ಕಟ್ಟಿಕೊಂಡು ಪನ್ಮಂಡ್ರಿಕ್ರಾಸ್ ಎಂಬ ಕಿರುಚಿತ್ರ ರೂಪಿಸಿದರು. ಹುಡುಗರ ಈ ಪ್ರಯತ್ನಕ್ಕೆ ದೇವರು ಅನುಗ್ರಹಿಸಿದ್ದ. ಈ ಕಿರುಚಿತ್ರಕ್ಕೆ ಸೈಮಾ ಪ್ರಶಸ್ತಿ ದೊರಕಿತ್ತು. ಈ ಹಂತದಲ್ಲಿ ಸಂಗೀತ ಲೋಕದಲ್ಲಿ ಸಂಚಲನ ಸೃಷ್ಠಿಸಿರುವ ರಘು ದೀಕ್ಷಿತ್ ಹಾಗೂ ಚೌಕದಂತಹ ಚಿತ್ರದ ಸಂಗೀತ ನಿರ್ದೇಶಕರುಗಳು ಸೇರಿದಂತೆ ಐದು ಜನ ಸಂಗೀತ ಕ್ಷೇತ್ರದ ಘಟಾನುಘಟಿಗಳು ನಾಮಿನೇಟ್ ಆಗಿದ್ದ ಸೈಮಾ ಸಾಲಿನಲ್ಲಿ ಋತ್ವಿಕ್ ಸಹ ನಾಮಿನೇಟ್ ಆಗದ್ದರು ಎಂದರೆ ಇವರ ಅಂತಃಸತ್ವ ಎಂತಹದ್ದು, ಇವರ ಸಾಧನೆಯ ಹಾದಿಯ ಹೆಜ್ಜೆ ಎಂತಹದ್ದು ಎಂಬುದು ಗೊತ್ತಾಗುತ್ತದೆ.
ಸಾಮಾನ್ಯವಾಗಿ ಶಾರ್ಟ್ ಸಿನೆಮಾಗಳು ಸಾಲು ಸಾಲಾಗಿ ಬರುತ್ತವೆ. ಆದರೆ, ಇಷ್ಟರ ನಡುವೆಯೇ ಸೈಮಾ ಹಂತಕ್ಕೆ ತಲುಪಿ, ಇವರು ಪ್ರಶಸ್ತಿ ಸ್ವೀಕರಿಸಿದ್ದು ಯಾರ ಕೈಯಿಂದ ಗೊತ್ತಾ? ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿ ಯಲ್ಲಿನ ಬಲ್ಲಾಳದೇವ ಪಾತ್ರಧಾರಿ ರಾಣಾ ದಗ್ಗುಬಟ್ಟಿ ಅವರಂತಹ ಘಾಟಾನುಘಟಿಗಳಿಂದ ಎಂದರೆ ಇವರ ಸಾಧನೆಯ ಹಾದಿಯ ಅಂತಃಸತ್ವ ಎಷ್ಟಿದೆ ಎಂಬುದು ವೇದ್ಯವಾಗುತ್ತದೆ.
ಅಲ್ಲಿಗೆ ಪನ್ಮಂಡ್ರಿ ಕ್ರಾಸ್ ಕಿರುಚಿತ್ರ ಇವರಿಗೆ ಮತ್ತೆ ಸ್ಯಾಂಡಲ್ ವುಡ್‌ನಲ್ಲಿ ಪೂರ್ಣಪ್ರಮಾಣದ ಅವಕಾಶದ ದ್ವಾರವನ್ನು ತೆರೆಯಿತು. ಸಂಕಷ್ಟಕರ ಗಣಪತಿ ಚಿತ್ರಕ್ಕೆ ಪೂರ್ಣಪ್ರಮಾಣದ ಸಂಗೀತ ನಿರ್ದೇಶಕರಾಗಿ ಹಾಗೂ ಹಿನ್ನೆಲೆ ಸಂಗೀತಕಾರರಾಗಿ ಕೆಲಸ ಮಾಡುವ ಮೂಲಕ ಹೊಸ ಇನ್ನಿಂಗ್‌ಸ್ ಆರಂಭಿಸಿದರು.
ಸುಮಾರು ಒಂದೂವರೆ ವರ್ಷಗಳ ಕಾಲ ಈ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸಿದ ಋತ್ವಿಕ್ ಇದಕ್ಕಾಗಿ ಸುಮಾರು 35 ವಿಭಿನ್ನ ಟ್ಯೂನ್‌ಗಳನ್ನು ಸಿದ್ದಪಡಿಸಿದ್ದರು. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ರಘು ದೀಕ್ಷಿತ್, ಗುರುಕಿರಣ್, ಅನನ್ಯ ಭಟ್ ರಂತಹ ಘಟಾನುಘಟಿಗಳೊಂದಿಗೆ ಮೆಹಬೂಬ್ ಸಾಬ್, ದೀಪಕ್ ಈಶ, ರಕ್ಷಿತಾ, ಸಂಜಿತ್ ಹೆಗಡೆ ಅವರುಗಳು ಸಹ ಋತ್ವಿಕ್ ಸಂಗೀತಕ್ಕೆ ಧ್ವನಿಯಾಗಿದ್ದಾರೆ.
ದೇವರು ಕೈಹಿಡಿದ ಪ್ರತಿಭೆ:
ಇವರ ಪ್ರಾಮಾಣಿಕ ಸಾಧನೆಗೆ ದೇವರು ಅನ್ಯಾಯ ಮಾಡಲಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಂಕಷ್ಟಕರ ಗಣಪತಿ ಚಿತ್ರದ ಆಡಿಯೋ ರೈಟ್‌ಸ್ಗಳನ್ನು ತಮ್ಮ ಪಿಆರ್‌ಕೆ ಬ್ಯಾನರ್ ಅಡಿಯಲ್ಲಿ ತೆಗೆದುಕೊಂಡು, ಸ್ವತಃ ಆಡಿಯೋ ರಿಲೀಸ್ ಮಾಡಿದ್ದಾರೆ.
ಇದರ ಬೆನ್ನಲ್ಲೇ, ಕಿಚ್ಚ ಸುದೀಪ್ ಟ್ವೀಟ್ ಮಾಡಿ, ಇವರ ಶ್ರಮಕ್ಕೆ ಶುಭ ಹಾರೈಸಿ, ಬೆನ್ನು ತಟ್ಟಿದ್ದಾರೆ.
ಈ ನಡುವೆಯೇ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಎಂಬ ಚಿತ್ರಕ್ಕೆ ಇವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಋತ್ವಿಕ್‌ಗೆ ಯಾವುದೇ ರೀತಿಯ ಗಾಡ್‌ಫಾದರ್‌ಗಳಿಲ್ಲ ಎಂಬುದು ಗಮನಾರ್ಹ ಅಂಶವಾದರೆ, ಬಾಲ್ಯದಿಂದಲೇ ಕಲಿತು, ರೂಢಿಸಿಕೊಂಡು ಬಂದ ಸಂಗೀತವೇ ಇವರಿಗೆ ಮೂಲಾಧಾರವಾಗಿ, ಸ್ವಯಂ ಆಗಿ ಇವರನ್ನು ಕೆತ್ತನೆ ಮಾಡುತ್ತಿದೆ.
ಸ್ಟಾರ್ ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಹಾಗೂ ಎ.ಆರ್. ರೆಹಮಾನ್ ಇವರ ರೋಲ್ ಮಾಡೆಲ್‌ಗಳಾಗಿದ್ದರೆ, ವಿ. ಹರಿಕೃಷ್ಣ ಅವರ ಹಾಡುಗಳು ಎಂದರೆ ಇವರಿಗೆ ಪಂಚಪ್ರಾಣ.
ವಿಭಿನ್ನ ಹಾಗೂ ವಿಶಿಷ್ಟ ಸಂಗೀತವನ್ನು ಜನರಿಗೆ ನೀಡಬೇಕು ಎಂದು ಬಯಸುವ ಋತ್ವಿಕ್, ಲಂಡನ್‌ಗೆ ತೆರಳಿ ಅಲ್ಲಿನ ಆರ್ಕೆಸ್ಟ್ರಾ ಸೆಟ್ ಜೊತೆಯಲ್ಲಿ ಮ್ಯೂಸಿಕ್ ಮಾಡಬೇಕು ಎಂಬ ಅಗಾಧವಾದ ಕನಸನ್ನು ಹೊತ್ತಿದ್ದು, ಇದಕ್ಕೆ ಬಹಳಷ್ಟು ಸಹಕಾರ ದೊರೆಯಬೇಕಿದೆ.
ಹಣವಲ್ಲ, ಗುಣಮಟ್ಟ ಮುಖ್ಯ:
ಸಾಲು ಸಾಲು ಸಿನೆಮಾಗಳಿಗೆ ಸಂಗೀತ ನೀಡಿ ಹಣ ಮಾಡಬೇಕು ಎಂಬುದರಲ್ಲೇನಿದೆ. ಕಷ್ಟಪಟ್ಟು ಶ್ರಮ ವಹಿಸಿ, ಗುಣಮಟ್ಟದ ಸಂಗೀತ ನೀಡಬೇಕು. ನಾವು ನೀಡುವ ಸಂಗೀತ ಕೇಳುಗರ ಮನಸ್ಸಿನಲ್ಲಿ ಅಚ್ಚಳಿಯಬೇಕು ಎನ್ನುತ್ತಾರೆ ಋತ್ವಿಕ್.
ಒಟ್ಟಿನಲ್ಲಿ ಆರಂಭದಲ್ಲಿಯೇ ಹೇಳಿದ ಹಾಗೆ ನೂರಾರು ಪ್ರತಿಭೆಗಳನ್ನು ದೇಶಕ್ಕೆ ನೀಡಿರುವ ಶಿವಮೊಗ್ಗ ಜಿಲ್ಲೆ ಈಗ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರಕ್ಕೆ ಋತ್ವಿಕ್ ಎಂಬ ಸಂಗೀತ ಸೇವಕನನ್ನು ನೀಡಿದೆ. ಸಂಕಷ್ಟಕರ ಗಣಪತಿ ಚಿತ್ರದ ಹಾಡುಗಳು ಇವರ ಪ್ರತಿಭೆಗೆ ಸಾಕ್ಷಿಯಾಗಿದ್ದು, ಇವರ ಸಾಧನೆ ಮುಗಿಲೆತ್ತರಕ್ಕೆ ಹಾರಲಿ. ಆ ಮೂಲಕ ಮಲೆನಾಡಿನ ಮತ್ತೊಂದು ಕುಡಿ ಹೆಮ್ಮೆರವಾಗಿ ಬೆಳೆಯಲಿ…
ಋತ್ವಿಕ್ ಹೇಳುತ್ತಾರೆ…
ಶಿಕ್ಷಣದ ನಂತರ ಮಾಡುತ್ತಿದ್ದ ವೃತ್ತಿಯನ್ನು ತ್ಯಜಿಸಿದ ನಾನು ಸುಮಾರು ನಾಲ್ಕು ವರ್ಷಗಳ ಕಾಲ ಸಂಗೀತ, ಸಿನೆಮಾ ಕ್ಷೇತ್ರದಲ್ಲೇ ಭವಿಷ್ಯ ರೂಪಿಸಿಕೊಳ್ಳಲು ಶ್ರಮಿಸಿದೆ. ಈ ಸಮಯದಲ್ಲಿ ಒಂದು ಬಿಡಿಗಾಸನ್ನೂ ನಾನು ದುಡಿಯಲಿಲ್ಲ. ಇಂತಹ ಸಂದರ್ಭದಲ್ಲಿ ಹಣಕಾಸು ಸೇರಿದಂತೆ ಸರ್ವ ರೀತಿಯಲ್ಲೂ ನನ್ನ ಬೆನ್ನಿಗೆ ನಿಂತಿದ್ದು ನನ್ನ ತಂದೆ ಮುರಳೀಧರ್ ಹಾಗೂ ತಾಯಿ ಆರತಿ. ಅವರ ಬೆಂಬಲ ಹಾಗೂ ಆಶೀರ್ವಾದ ಇಲ್ಲದೇ ಹೋಗಿದ್ದರೆ ನನ್ನ ಬೆಳವಣಿಗೆಯ ಹಾದಿ ಸಾಗುತ್ತಿರಲಿಲ್ಲ.













Discussion about this post