ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ವಯಸ್ಕ ಇಬ್ಬರು ಮಹಿಳೆಯರು ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಓರ್ವ ಬಲಿಯಾಗಿದ್ದು, ಮೂವರು ಬಿಜೆಪಿ ಕಾರ್ಯಕರ್ತರಿಗೆ ಚೂರಿಯಿಂದ ಇರಿಯಲಾಗಿದೆ.
ಇಂದು ಮುಂಜಾನೆಯಿಂದ ಪ್ರತಿಭಟನೆ ಜೋರಾಗಿದ್ದು, ಈ ವೇಳೆ 3 ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿಯಲಾಗಿದೆ. ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಎಸ್’ಡಿಪಿಐ ಕೈವಾಡವಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಇದಲ್ಲದೆ, ಪೊಲೀಸರು, ಮಾಧ್ಯಮದ ವರದಿಗಾರರು ಹಾಗೂ ಲೇಖಕರ ಮೇಲೆಯೂ ದಾಳಿಗಲು ನಡೆದಿರುವುದಾಗಿ ವರದಿಯಾಗಿದೆ.
ಪ್ರತಿಭಟನೆ ವೇಳೆ ಹಲವಾರು ಮಾಧ್ಯಮ ಪ್ರತಿನಿಧಿಗಳ ಮೇಲೆ ದಾಳಿ ನಡೆದಿದೆ. ಪಾಲಕ್ಕಾಡ್ ನಲ್ಲಿ ಟಿವಿ ಚಾನೆಲ್ ವೊಂದರ ಹಿರಿಯ ವರದಿಗಾರನ ಮೇಲೆ ದಾಳಿ ನಡೆಸಿದ್ದಾರೆ. ಮತ್ತೊಂದೆಡೆ ಹಲ್ಲೆಗೊಳಗಾದರೂ ಕಣ್ಣೀರು ಹಾಕುತ್ತಲೇ ಕರ್ತವ್ಯ ನಿರ್ವಹಿಸಿದ ಚಾನೆಲ್ ವೊಂದರ ಕ್ಯಾಮೆರಾಮನ್ ಫೋಟೋ ವೈರಲ್ ಆಗಿದೆ.
ಪ್ರತಿಭಟನೆ ವೇಳೆ 7 ಪೊಲೀಸ್ ವಾಹನಗಳು ಹಾಗೂ 79 ಸರ್ಕಾರಿ ಬಸ್ ಗಳನ್ನು ಧ್ವಂಸಗೊಳಿಸಿರುವುದಾಗಿ ವರದಿಯಾಗಿದ್ದು, ತಿರುವನಂತಪುರಂನ ನೆಡುಮಂಗಡುವಿನಲ್ಲಿ ಕೆಲ ದುಷ್ಕರ್ಮಿಗಳು ಬಾಂಬ್ ದಾಳಿಯನ್ನೂ ನಡೆಸಿದ್ದಾರೆ.
ಈ ನಡುವೆ ಮಾಧ್ಯಮ ವರದಿಗಾರರ ಮೇಲೆ ನಡೆದ ದಾಳಿಯನ್ನು ಕೇರಳ ಪತ್ರಕರ್ತ ಸಂಘಟನೆ ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಬಿಜೆಪಿ ಮುಖ್ಯಸ್ಥ ಶ್ರೀಧರನ್ ಪಿಳ್ಳೈ ಅವರ ಪತ್ರಿಕಾಗೋಷ್ಠಿಯನ್ನೂ ಬಹಿಷ್ಕರಿಸಿದೆ.
ಮಾಧ್ಯಮ ವರದಿಗಾರರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರೆ, ಆಯಾ ಜಿಲ್ಲಾ ಮುಖ್ಯಸ್ಥರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

















