ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಜನಿವಾರ, ಪವಿತ್ರದಾರ, ಶಿವದಾರ, ರುದ್ರಾಕ್ಷಿ, ಪೇಟ ಅಥವಾ ಟರ್ಬನ್, ತಲೆ ವಸ್ತ್ರ ಹಾಗೂ ಹಿಜಾಬ್ ಧರಿಸಲು ಅವಕಾಶ ನೀಡಿದ್ದು, ಕೇಸರಿ ಶಾಲು ಧರಿಸುವುದನ್ನು ನಿಷೇಧಿಸಲಾಗಿದೆ.
ಈ ಕುರಿತಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸಮವಸ್ತ್ರ ವಿಚಾರವಾಗಿ 2022ರ ಆದೇಶ ಹಿಂಪಡೆದು ಹೊಸ ಆದೇಶ ಹೊರಡಿಸಲಾಗಿದೆ. ಜನಿವಾರ ಮತ್ತು ಹಿಜಾಬ್ ಸೇರಿದಂತೆ ಧಾರ್ಮಿಕ ಪದ್ಧತಿಗೆ ಅನುಗುಣವಾದ ಸಮವಸ್ತ್ರ ಧರಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಶಿಕ್ಷಣ ಕಾಯ್ದೆ, 1983 ರ ಅಡಿಯಲ್ಲಿ ಹೊರಡಿಸಲಾದ ಹೊಸ ಸರ್ಕಾರಿ ಆದೇಶದಲ್ಲಿ, ಮೇ 13 ರಂದು ರಾಜ್ಯವು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ಆದೇಶ ಹೊರಡಿಸಿದೆ.
ಕೋರಮಂಗಲದ ಕಾಲೇಜಿನಲ್ಲಿ ಏಪ್ರಿಲ್ 24ರಂದು ಸಿಇಟಿ ಸಮಯದಲ್ಲಿ ಪರೀಕ್ಷಾ ಹಾಲ್’ಗೆ ಪ್ರವೇಶಿಸುವ ಮೊದಲು ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯುವಂತೆ ಹೇಳಿ, ಕತ್ತರಿಯಿಂದ ತುಂಡು ಮಾಡಿದ ವಿವಾದ ಸೃಷ್ಠಿಯಾದ ವಾರಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಯಾವುದೇ ವಿದ್ಯಾರ್ಥಿಯು ಅಂತಹ ಅನುಮತಿಸಲಾದ ಚಿಹ್ನೆಗಳನ್ನು ಧರಿಸಿದ್ದಕ್ಕಾಗಿ ತರಗತಿ ಕೊಠಡಿಗಳು, ಪರೀಕ್ಷಾ ಸಭಾಂಗಣಗಳು ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶವನ್ನು ನಿರಾಕರಿಸಬಾರದು. ಯಾವುದೇ ವಿದ್ಯಾರ್ಥಿಯನ್ನು ಅಂತಹ ಚಿಹ್ನೆಗಳನ್ನು ಧರಿಸಲು ಅಥವಾ ತೆಗೆದುಹಾಕಲು ಒತ್ತಾಯಿಸಲಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದರು.
ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಮಾಡಿದ್ದೇವೆ. ಜನಿವಾರ ಘಟನೆ ಇತ್ತೀಚೆಗೆ ಆಗಿತ್ತು. ಇದರಿಂದ ಮಕ್ಕಳಿಗೆ ಸಮಸ್ಯೆ ಆಗ್ತಿತ್ತು. ಮಾನಸಿಕ ಹಿಂಸೆ ಆಗುತ್ತಿತ್ತು. ಆದ್ದರಿಂದ ಧಾರ್ಮಿಕ ವಸ್ತ್ರಗಳಿಗೆ ಶಾಲಾ-ಕಾಲೇಜುಗಳಿಗೆ ಅವಕಾಶ ನೀಡಲಾಗಿದೆ ಎಂದರು.
ಜನಿವಾರ, ಶಿವಧಾರ ಸೇರಿ ಧಾರ್ಮಿಕ ವಸ್ತುಗಳಿಗೆ ಅವಕಾಶ ನೀಡಲಾಗಿದೆ. 1-12ನೇ ತರಗತಿವರೆಗೂ ಇದು ಅನ್ವಯವಾಗಲಿದೆ. ಎಲ್ಲಾ ಧರ್ಮದ ಧಾರ್ಮಿಕ, ಸಂಪ್ರದಾಯದ ವಸ್ತುಗಳಿಗೂ ಅವಕಾಶ ಕೊಡಲಾಗಿದೆ ಎಂದು ತಿಳಿಸಿದರು.
ಹಿಜಾಬ್ ಧರಿಸಲು ಅವಕಾಶ
ಇನ್ನು ಹಿಂದಿನ ಸರ್ಕಾರದ ಆದೇಶವನ್ನು ಹಿಂಪಡೆಯಲಾಗಿದ್ದು, ಹೊಸ ಆದೇಶದಂತೆ ಶಾಲಾ – ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕಲ್ಪಿಸಲಾಗಿದ್ದು, ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ ಎಂದರು.
ಇವುಗಳಿಗೆ ಅವಕಾಶ
ವಿದ್ಯಾರ್ಥಿಗಳು ಸಾಮಾನ್ಯವಾಗಿ ಧರಿಸುವ ಪೇಟ/ಟರ್ಬನ್, ಜನಿವಾರ/ಪವಿತ್ರ ದಾರ, ಶಿವದಾರ, ರುದ್ರಾಕ್ಷಿ ತಲೆವಸ್ತ್ರ/ಹಿಜಬ್’ಗೆ ಅವಕಾಶ ಕಲ್ಪಿಸಲಾಗಿದೆ.
ಕೇಸರಿ ಶಾಲು ನಿಷೇಧ
ಕೇಸರಿ ಶಾಲು ಧಾರ್ಮಿಕ ಎಂದು ಬರುವುದಿಲ್ಲ. ಆದ್ದರಿಂದ ಕೇಸರಿ ಶಾಲಿಗೆ ಶಾಲಾ – ಕಾಲೇಜುಗಳಲ್ಲಿ ಅವಕಾಶ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















