ಕಲ್ಪ ಮೀಡಿಯಾ ಹೌಸ್ | ಸಾಗರ |
ಇಲ್ಲಿನ ಶ್ರೀ ಮಾರಿಕಾಂಬಾ ಜಾತ್ರೆಯ #MarikambaJatre ವಿಧಿವಿಧಾನಗಳು ಪ್ರಾರಂಭಗೊಂಡಿದೆ. ಫೆ. 3ರಿಂದ ಫೆ. 11ರವರೆಗೆ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಅಂಕೆ ಹಾಕುವ ಶಾಸ್ತ್ರ ನಡೆಯಿತು. ಛಲವಾದಿ ಸಮಾಜದ ವತಿಯಿಂದ ಕೋಣನ ಪೂಜೆ ನಡೆಯಿತು.
ನಂತರ ಕೋಣವನ್ನು ಮೆರವಣಿಗೆ ಮೂಲಕ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಕರೆ ತರಲಾಯಿತು. ಅಲ್ಲಿಂದ ಉಪ್ಪಾರ ಕೇರಿಯಲ್ಲಿರುವ ಪೋತರಾಜನ ಮನೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಉಪ್ಪಾರ ಕೇರಿಯ ಪೋತರಾಜನ #Potaraja ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪೋತರಾಜನು ಆವೇಶಕ್ಕೆ ಒಳಗಾಗಿ ಚಾಟಿಯನ್ನು ಒಡೆದು ಕೊಳ್ಳುತ್ತಾ ತವರುಮನೆ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ದೇವಸ್ಥಾನದಲ್ಲಿ ಮಂಡಲಕ್ಕೆ ಅಂಕೆ ಹಾಕುವ ಶಾಸ್ತ್ರ, ಊರಿನ ಗಡಿಗಳಿಗೆ ಅಂಕೆ ಹಾಕುವ ಶಾಸ್ತ್ರ, ಕಂಕಣ ಕಟ್ಟುವುದು ಹಾಗೂ ಪ್ರಮಾಣ ವಚನ ಸ್ವೀಕಾರ ಶಾಸ್ತ್ರ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ಅಧ್ಯಕ್ಷ ಕೆ.ಎನ್. ನಾಗೇಂದ್ರ, ಮಾರಿಕಾಂಬಾ ದೇವಿಯ ಜಾತ್ರೆಯ ಅಂಕೆ ಹಾಕುವ ಶಾಸ್ತ್ರದ ಮೂಲಕ ಧಾರ್ಮಿಕ ಕಾರ್ಯಗಳು ವಿದ್ಯುಕ್ತವಾಗಿ ಆರಂಭಗೊಂಡಿದೆ. ಕೋಣವನ್ನು ಶಾಸ್ತ್ರೋಕ್ತವಾಗಿ ಕರೆತಂದು ಪೋತರಾಜನ ಮನೆಯಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ ಧಾರ್ಮಿಕ ವಿಧಿವಿಧಾನ ಪೂರೈಸಲಾಗಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದಾರೆ. ಜಾತ್ರೆಯ ಒಂಬತ್ತು ದಿನಗಳು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ಪೂಜಾ ಸಮಿತಿಯ ಸಂಚಾಲಕ ಬಸವರಾಜ್ ಮಾತನಾಡಿ, ಅಂಕೆಹಾಕುವ ಮೂಲಕ ನಾವು ಜಾತ್ರೆ ಮುಗಿಯುವವರೆಗೂ ಬೇರೆ ಊರಿಗೆ ಹೋದರೆ ಉಳಿಯುವುದಿಲ್ಲ. ವಾಪಾಸ್ ನಮ್ಮೂರಿಗೆ ಬರುತ್ತೇವೆ. ಜಾತ್ರೆಯನ್ನು ಯಾವುದೇ ತೊಡಕಿಲ್ಲದೆ ಮಾಡುತ್ತೇವೆ ಎಂದು ಸಂಕಲ್ಪ ಕೈಗೊಳ್ಳಲಾಗಿದೆ. ನಮ್ಮ ಹಿರಿಯರ ಕಾಲದಿಂದಲೂ ಈ ಕಾರ್ಯ ಅತ್ಯಂತ ಶ್ರದ್ಧಾಭಕ್ತಿಯಿಂದ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಂಡನಮನೆ ದೇವಸ್ಥಾನದ ಪ್ರಧಾನ ಅರ್ಚಕ ರವಿ ಪೋತರಾಜ, ತವರುಮನೆ ದೇವಸ್ಥಾನದ ಅರ್ಚಕ ಮಧುಕರ್ ಭಟ್, ದೇವಸ್ಥಾನ ಸಮಿತಿಯ ಗಿರಿಧರ ರಾವ್, ಸುಂದರ ಸಿಂಗ್, ನಾಗೇಂದ್ರ ಕುಮಟಾ, ನಾರಾಯಣ ಅರಮನೆಕೇರಿ, ಸೋಮಶೇಖರ್, ನಾಗೇಂದ್ರ, ಕೆ.ಸಿ. ನವೀನ್, ಪುರುಷೋತ್ತಮ, ರವಿನಾಯ್ಡು, ಆರ್. ಚಂದ್ರು, ಜಯರಾಮ, ರಾಮು, ಲೋಕೇಶ್ ಕುಮಾರ್, ಗಂಗಾಧರ ಜಂಬಿಗೆ, ಉಮೇಶ್ ಚೌಟಗಿ, ಬಸವರಾಜ್, ಮನು ಪೂಜಾರಿ ಇನ್ನಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















