ಕಲ್ಪ ಮೀಡಿಯಾ ಹೌಸ್
ಸಾಗರ: ಸೊರಬ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ನಿವಾಸಿಗಳು ಆಡಳಿತಕ್ಕೆ ಸಹಕಾರ ನೀಡಬೇಕು. ನ್ಯಾಯಾಲಯ ಇನ್ನಿತರೆ ಮೊರೆ ಹೋದರೆ ರಸ್ತೆ ನಿರ್ಮಾಣ ವಿಳಂಬವಾಗುವ ಜೊತೆಗೆ ನಿಮಗೂ ತೊಂದರೆ ಆಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ನಗರಸಭೆ ವತಿಯಿಂದ ಸಾಗರ-ಹಾವೇರಿ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಕರೆಯಲಾಗಿದ್ದ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಜಿಲ್ಲಾಧಿಕಾರಿಗಳು ಪ್ರತಿ ಚದರಡಿಗೆ ರೂ. 47.37ರೂಪಾಯಿ ಭೂಸ್ವಾಧೀನ ಪ್ರಕ್ರಿಯೆಗೆ ನಿಗಧಿ ಮಾಡಿದ್ದಾರೆ. ಇದು ಅತಿಹೆಚ್ಚಿನ ದರವಾಗಿದ್ದು, ಬೇರೆಬೇರೆ ಭೂಸ್ವಾಧೀನ ಪ್ರಕ್ರಿಯೆಯಲ್ಲೂ ಇಷ್ಟೊಂದು ಪರಿಹಾರ ಕೊಟ್ಟಿಲ್ಲ ಎಂದು ಹೇಳಿದರು.
ರಸ್ತೆ ಅಗಲೀಕರಣದಿಂದ ನಿಮ್ಮ ಜಾಗಕ್ಕೆ ಹೆಚ್ಚಿನ ಬೆಲೆ ಬರುತ್ತದೆ. ಜೊತೆಗೆ ವ್ಯವಹಾರಿಕ ದೃಷ್ಟಿಯಿಂದಲೂ ಅನುಕೂಲವಾಗುತ್ತದೆ. ಅಭಿವೃದ್ಧಿ ದೃಷ್ಟಿಯಿಂದ ಆಡಳಿತ ಮತ್ತು ನಿವಾಸಿಗಳ ನಡುವೆ ಸಹಮತ ಅಗತ್ಯ. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕೆಲವರಿಗೆ ಸಣ್ಣಪುಟ್ಟ ಸಮಸ್ಯೆಯಾಗುತ್ತದೆ. ಸರ್ಕಾರ ಈಗಾಗಲೇ 30ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಎಲ್ಲರೂ ಸಹಕಾರ ನೀಡಿದರೆ ಒಂದು ತಿಂಗಳಿನೊಳಗೆ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟ ಪ್ರಕ್ರಿಯೆ ಪ್ರಾರಂಭ ಮಾಡಬಹುದು ಎಂದರು.
ಈಗಾಗಲೇ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಸ್ವತ್ತು ಕಳೆದುಕೊಳ್ಳುವ ನಿವಾಸಿಗಳ ಹಿತರಕ್ಷಣೆಗೆ ಅಗತ್ಯವಾದ ಯೋಜನೆಯನ್ನು ಶಾಸಕರ ಮಾರ್ಗದರ್ಶನದಲ್ಲಿ ಸ್ಥಳೀಯ ನಗರಸಭೆ ಕೈಗೊಂಡಿದೆ. ಸ್ಥಳೀಯರು ಅನಗತ್ಯ ತಕರಾರು ಮಾಡದೆ ಅಗಲೀಕರಣಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post