ಕಲ್ಪ ಮೀಡಿಯಾ ಹೌಸ್ | ಸಾಗರ |
ತವರು ಮನೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಮಾರಿಕಾಂಬಾ ಮೂರ್ತಿಯನ್ನು ಮಂಗಳವಾರ ರಾತ್ರಿ ಅದ್ಧೂರಿಯಾದ ಮೆರವಣಿಗೆ ಹಾಗೂ ರಾಜಬೀದಿ ಉತ್ಸವದ ಮುಖಾಂತರ ಗಂಡನ ಮನೆಗೆ ತರಲಾಯಿತು. ಸಾವಿರಾರು ಜನರು ತವರು ಮನೆ ದೇವಸ್ಥಾನದಲ್ಲಿ ಜಮಾಯಿಸಿದ್ದರು.
ಮಂಗಳವಾರ ರಾತ್ರಿ 11ಕ್ಕೆ ಮಹಾಮಂಗಳಾರತಿ ನಂತರ ಪೋತರಾಜನಿಂದ ಚಾವಟಿ ಸೇವೆ ನಡೆಯಿತು. ನಂತರ ಹೆಣ್ಣು ಒಪ್ಪಿಸುವ ಧಾರ್ಮಿಕ ಪೂಜಾ ವಿಧಾನಗಳು ನಡೆದವು. ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರಿಂದ ನೂಕು ನುಗ್ಗಲಾಯಿತು. ಶ್ರೀ ದೇವಿಯ ದಂಡಿನ ಮೆರವಣಿಗೆಯು ಪ್ರಸಿದ್ಧ ಕಲಾತಂಡಗಳ ಪಾಲ್ಗೊಳ್ಳುವಿಕೆಯ ಜತೆಯಲ್ಲಿ ನಡೆಯಿತು. ಭಕ್ತರು ದೇವಿಯ ದರ್ಶನ ಪಡೆದರು.
ಬೆಳ್ತಂಗಡಿಯ ಸೃಷ್ಠಿ ಆರ್ಟ್ಸ್‌ನ ಕಲಾವಿದರ ತಂಡ, ಕೀಲುಕುದುರೆ, ಕರಗ, ರಾಜ, ರಾಣಿ, ಸಿಂಹ ಸೇರಿದಂತೆ ವಿವಿಧ ವೇಷಧಾರಿಗಳು, ಹುಬ್ಬಳ್ಳಿಯ ಬ್ಯಾಂಡ್ ಬಳಗ, ಸಿರಸಿಯ ಮುಖೇಶ್ ಆರ್ಟ್ಸ್ ಬೇಡರ ವೇಷದ ಕಲಾವಿದರು, ಅರಸಿಕೇರೆಯ ಶ್ರೀ ರಾಮ ಯುವಕರ ಕಲಾಸಂಘದ ಸದಸ್ಯರು ಸೋಮನ ಕುಣಿತ, ನಂದಿಕೋಲು ನಡೆಸಿಕೊಟ್ಟರು.
ವಾದ್ಯಗಾರರು ಕಾಂತಾರ ಚಲನಚಿತ್ರದ ಗೀತೆಯನ್ನು ನುಡಿಸಿದರು. ಮಂಡ್ಯ ಕೆ.ಆರ್. ನಗರದ ಆದಿಶಕ್ತಿ ತಂಡವು ನಗಾರಿ, ಡೊಳ್ಳು ಕಲಾವಿದರು, ಚಂಡೆವಾದನ, ಮಂಗಳವಾದ್ಯ ಸೇರಿದಂತೆ ಮುಂತಾದ ಕಲಾತಂಡಗಳ ಸದಸ್ಯರು ರಾಜಬೀದಿ ಉತ್ಸವದಲ್ಲಿ ಭಾಗವಹಿಸಿದ್ದರು.
Also read: ಬಿಗ್ ಶಾಕ್! ಆರ್’ಬಿಐ ರೆಪೋ ದರ 6.5ಕ್ಕೆ ಹೆಚ್ಚಳ: ಯಾರಿಗೆ ಇದರ ಬಿಸಿ ತಟ್ಟಲಿದೆ ಗೊತ್ತಾ?
ಭವ್ಯರಥದಲ್ಲಿ ಶ್ರೀ ಮಾರಿಕಾಂಬೆಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಬುಧವಾರ ಬೆಳಗಿನ ಜಾವ ಗಂಡನ ಮನೆಗೆ ತರಲಾಯಿತು. ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಸಿದ್ಧಪಡಿಸಿದ್ದ ಬೃಹತ್ ವೇದಿಕೆಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಧಾರ್ಮಿಕ ಆಚರಣೆಗಳನ್ನು ನಡೆಸಲಾಯಿತು.
ಬುಧವಾರದದಿಂದ ಗಂಡನ ಮನೆ ಆವರಣದಲ್ಲಿ ಶ್ರೀ ಮಾರಿಕಾಂಬಾ ದೇವರ ದರ್ಶನಕ್ಕೆ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಗಂಡನ ಮನೆ ದೇವಸ್ಥಾನದಲ್ಲಿ ಶ್ರೀ ದೇವಿಯ ಘಟೇವು ಪ್ರವೇಶ ನಂತರ ಮಂಗಳಾರತಿ ನಡೆಸಲಾಯಿತು. ಫೆ. 15ರವರೆಗೂ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾರಿಕಾಂಬ ಜಾತ್ರೆಯ ಎರಡನೇ ದಿನವೂ ದೇವಿಯ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿ ಪೂಜೆ ಸಲ್ಲಿಸಿದರು.
ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್. ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಖಜಾಂಚಿ ನಾಗೇಂದ್ರ ಎಸ್.ಕುಮುಟಾ, ಪೋತರಾಜ ರವಿ, ಉಪಾಧ್ಯಕ್ಷರು, ಸಹ ಕಾರ್ಯದರ್ಶಿ, ವಿವಿಧ ಸಮಿತಿ ಸಂಚಾಲಕರು ಸೇರಿದಂತೆ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.
ಸಾಗರ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸಾಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನವನ್ನು ಸಾಗರ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿ, ಜಾತ್ರೆ ಅತ್ಯಂತ ವ್ಯವಸ್ಥಿತವಾಗಿ ನಡೆಯುವ ನಿಟ್ಟಿನಲ್ಲಿ ಜಾತ್ರಾ ಸಮಿತಿಯು ಸಕಲ ರೀತಿಯಲ್ಲಿ ಕ್ರಮ ಕೈಗೊಂಡಿದೆ. ನಗರಸಭೆ ವತಿಯಿಂದ ಜಾತ್ರೆಗೆ ಅವಶ್ಯವಿರುವ ಎಲ್ಲ ಸಹಕಾರ ನೀಡಲಾಗುತ್ತಿದೆ. ಜಾತ್ರೆ ಯಶಸ್ವಿಯಾಗಲು ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯ ಗಣೇಶ್ ಪ್ರಸಾದ್, ಲಿಂಗರಾಜ್, ಅರವಿಂದ ರಾಯ್ಕರ್, ಕಾಣಿಕೆ ಸಮಿತಿ ಸಂಚಾಲಕ ಸಂತೋಷ್ ಆರ್.ಶೇಟ್, ಪ್ರಮುಖರಾದ ಗೌತಮ್ ಮತ್ತಿತರರು ಹಾಜರಿದ್ದರು.
ಕಲಾಸಿರಿ ಕಾರ್ಯಕ್ರಮ ಫೆ. 9
ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ನಿರ್ಮಿಸಿರುವ ನಗರಸಭೆ ಆವರಣದ ಮಾರಿಕಾಂಬಾ ಕಲಾವೇದಿಕೆಯಲ್ಲಿ ಫೆ. 9ರಂದು ಸಂಜೆ ಕಲಾಸಿರಿ ಕಾರ್ಯಕ್ರಮ ನಡೆಯಲಿದೆ. ಫೆ. 9ರ ಸಂಜೆ 5.30ರಿಂದ 6ರವರೆಗೆ ಶಿವಶಕ್ತಿ ಡೊಳ್ಳು ಕಲಾತಂಡದಿಂದ ಡೊಳ್ಳು ಪ್ರದರ್ಶನ, ಸಂಜೆ 6ರಿಂದ 6.30ರವರೆಗೆ ಸಾಗರ ಜೈಗುರುದೇವ ಯೋಗ ಕೇಂದ್ರದಿಂದ ಯೋಗ ಪ್ರದರ್ಶನ, 7.15ರವರೆಗೆ ಕಾರಣಗಿರಿ ಎ.ವಿ.ಲಲಿತಾ ಅವರಿಂದ ಲಾವಣಿ ಜಾನಪದ ಗೀತೆ ದಾಸವಾಣಿ, ರಾತ್ರಿ 8ರಿಂದ 8.45ರವರೆಗೆ ಶ್ರೀ ಶಾರದೆ ಸಾಂಸ್ಕೃತಿಕ ವಿದ್ಯಾಕೇಂದ್ರದ ವಿದ್ವಾನ್ ಎಚ್.ಆರ್.ಅಶೋಕ್ ಕುಮಾರ್ ಅವರಿಂದ ಸುಗಮ ಸಂಗೀತ, 9.30ರವರೆಗೆ ಗೀತಾಂಜಲಿ ಕಲಾಕೇಂದ್ರದ ವಿದುಷಿ ವಿಜಯಲಕ್ಷ್ಮೀ ಹೆಗಡೆ ಅವರಿಂದ ಭರತನಾಟ್ಯ, 10ರವರೆಗೆ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಸಾಂಸ್ಕೃತಿಕ ವೇದಿಕೆಯಿಂದ ನೃತ್ಯ, ನಂತರ ಮಧುರ ಮೆಲೋಡಿಸ್ ಕುಂದಾಪುರ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post