ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ನಿನ್ನೆ ಇಡೀ ರಾಜ್ಯಕ್ಕೆ ಬರಸಿಡಿಲಿನಂತೆ ಬಂದೆರಗಿದ್ದು ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಸುದ್ದಿ!
ಈ ವಿಷಯ ಕಿವಿಗೆ ಬಿದ್ದಿದ್ದೇ ತಡ ಕನ್ನಡ ಚಿತ್ರರಂಗದ ಕುಟುಂಬ ಕಣ್ಣೀರಾಗಿತ್ತು. ಆಸ್ಪತ್ರೆಗೆ ಬಳಿಗೆ ಹಲವು ಕಲಾವಿದರು ಬಂದರೆ, ಇತ್ತ ಚಿರು ಮನೆ ಬಂಧುಗಳು, ಸ್ನೇಹಿತರು, ನಟನಟಿಯರ ಆಕ್ರಂದನಕ್ಕೆ ಸಾಕ್ಷಿಯಾಗಿತ್ತು.
ಈ ಹೊತ್ತಿಗೆ ಉಮ್ಮಳಿಸಿ ಬರುತ್ತಿದ್ದ ದುಃಖ ಒತ್ತಿ ಹಿಡಿಯಲು ಪ್ರಯತ್ನಿಸಿಯೂ ಸಾಧ್ಯವಾಗದೇ ಬಿಕ್ಕಳಿಸುತ್ತಾ ಆಸ್ಪತ್ರೆಗೆ ಬಂದದ್ದು ಹಿರಿಯ ನಟಿ ತಾರಾ. ಅಲ್ಲಿದ್ದವರೆಲ್ಲರೂ ಕಣ್ಣೀರಿನ ಮಡುವಿನಲ್ಲೇ ಇದ್ದದ್ದನ್ನು ಕಂಡ ಈ ತಾಯಿ ಅದೆಲ್ಲಿಂದ ಧೈರ್ಯ ಬಂತೋ ಗೊತ್ತಿಲ್ಲ. ಕಣ್ಣೀರನ್ನು ಕೈಯಲ್ಲಿ ಒರೆಸಿಕೊಳ್ಳುತ್ತಲೇ ನೇರ ವೈದ್ಯರ ಬಳಿ ಹೋದರು. ಈ ಹೊತ್ತಿಗಾಗಲೇ ಮಾಧ್ಯಮಗಳಲ್ಲಿ ಹೀಗಾಗಿರಬಹುದು, ಹಾಗಾಗಿರಬಹುದೆಂಬ ತರಹೇವಾರಿ ಊಹಾಪೋಹ ಹರಿದಾಡಲಾರಂಭಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಕೊರೋನಾದಿಂದ ಸತ್ತರೇ? ಎಂಬ ಪ್ರಶ್ನಾರ್ಥಕ ಚಿಹ್ನೆಗಳು ಎಳತೊಡಗಿದ್ದವು.
ನೇರ ವೈದ್ಯರ ಬಳಿಯಿಂದಲೇ ಏನೇನಾಯಿತು ಎಂದು ತಿಳಿದ ತಾರಾ, ಕೊರೋನಾದ ಪರೀಕ್ಷೆ ಮಾಡಲೇಬೇಕಾದ ಅನಿವಾರ್ಯತೆಯ ಬಗ್ಗೆಯೂ ಅರಿತರು. ಇನ್ನೊಂದೆಡೆ ಆಸ್ಪತ್ರೆಯತ್ತ ಧಾವಿಸಿ ಬರುತ್ತಿದ್ದ ಗಣ್ಯರು, ಅಭಿಮಾನಿಗಳು, ದುಃಖದ ಮಡುವಿನಲ್ಲಿದ್ದ ಚಿರು ಸರ್ಜಾ ತಂದೆ, ಧ್ರುವ ಸರ್ಜಾ!
ಈ ಹೊತ್ತಿಗಾಗಲೇ ಆ ಹೊತ್ತಿನ ಅಗತ್ಯ ಜವಾಬ್ದಾರಿಯ ಹೆಗಲ ಮೇಲೆ ಹೊರಲು ಸಿದ್ದರಾಗಿದ್ದ ತಾರಾ ನೇರ ಫೋನ್ ಮಾಡಿದ್ದು ಈ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ. ತಾರ ಫೋನ್ ಮಾಡಿದ್ದೇ ಗೃಹ ಸಚಿವ ಬೊಮ್ಮಾಯಿ ಅಕ್ಷರಶಃ ಅಣ್ಣನಂತೆ ಸ್ಪಂದಿಸಿ ಮಾತನಾಡಿದರು. ನನ್ನಿಂದ ಏನೇನಾಗಬೇಕು ಹೇಳಿ, ಅಂದರು.
ತಾರ ಮನವಿಯಂತೆ ತತಕ್ಷಣ ಸ್ಥಳಕ್ಕೆ ಸ್ಥಳೀಯ ಡಿಸಿಪಿ ರೋಹಿಣಿ ಕಟೋಚ್ ಅವರನ್ನು ಕಳುಹಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಪಡೆದರು. ಮನೆಯ ಬಳಿಯೂ ಬ್ಯಾರಿಕೇಡ್’ಗಳ ಹಾಕಿಸಿ ಟ್ರಾಫಿಕ್ ಪೊಲೀಸರ ಕಳುಹಿಸಿ ಅಗತ್ಯ ವ್ಯವಸ್ಥೆ ಮಾಡಿದರು. ತಾರಾ ಅವರಿಗೇ ಧೈರ್ಯ ತುಂಬಿದ ಗೃಹ ಸಚಿವ ಬೊಮ್ಮಾಯಿಯವರು, ಯಾರಿಗೂ ತಿಳಿಯದ, ಚಿರು ಸರ್ಜಾ ಕುಟುಂಬಕ್ಕೂ ಹೇಳದ ಒಂದು ವಿಷಯ ತಾರಾ ಅವರಿಗೆ ಹೇಳಿದ್ರು!!
ಅದೇನೆಂದರೆ ಒಂದು ವೇಳೆ ಚಿರು ಸರ್ಜಾ ಕೋವಿಡ್ 19 ಪರೀಕ್ಷಾ ವರದಿ ಪಾಸಿಟಿವ್ ಅಥವಾ ಡೌಟ್ ಫುಲ್ ಅಂತ ಬಂದರೂ ಸಹ ಮೂರು ದಿನ ಪಾರ್ಥಿವ ಶರೀರವನ್ನು ವೈದ್ಯರು ಆಸ್ಪತ್ರೆಯಿಂದ ಕಳುಹಿಸಲ್ಲ ಅಂದು ಬಿಟ್ಟರು! ಬರಸಿಡಿಲಿನಂತೆ ಬಂದ ಈ ವಿಚಾರವನ್ನು ಆಕ್ರಂದನದ ಮಡುವಿನಲ್ಲಿದ್ದ ಚಿರು ಸರ್ಜಾ ಫ್ಯಾಮಿಲಿಗೆ ಸಹಿಸುವ ಶಕ್ತಿ ಇಲ್ಲ ಎಂದು ಅರಿತ ತಾರಾ ಈ ವಿಷಯವನ್ನು ತಮ್ಮ ಎದೆಯೊಳಗೇ ಮುಚ್ಚಿಟ್ಟುಕೊಂಡರು.
ಚಿರಂಜೀವಿ ಸರ್ಜಾ ಕುಟುಂಬಕ್ಕಷ್ಟೇ ಅಲ್ಲ, ಯಾರಿಗೂ ಈ ವಿಷಯ ಹೇಳದೇ ಮುಂದೆ ಮಾಡಬೇಕಾದ್ದೇನು ಎಂಬುದರತ್ತ ಆ ನೋವಿನ ನಡುವೆಯೂ ಚಿತ್ತ ಹರಿಸಿದರು. ಗೃಹ ಸಚಿವ ಬೊಮ್ಮಾಯಿ ಹಾಗೂ ರಾಜ್ಯ ಸರ್ಕಾರದ ಜೊತೆ ಸತತ ಸಂಪರ್ಕದಲ್ಲಿದ್ದ ತಾರಾ ಬೊಮ್ಮಾಯಿಯವರ ಬಳಿ ಆದಷ್ಟು ಬೇಗ ವರದಿ ಬರುವಂತೆ ಮಾಡಿ ಅಂತ ಮನವಿ ಮಾಡಿದರು. ದೇವರನ್ನು ಮನಸ್ಸಲ್ಲೇ ಪ್ರಾರ್ಥಿಸುತ್ತಾ ಚಿರು ಸರ್ಜಾ ಮನೆಗೆ ತೆರಳಿ ಅಲ್ಲಿ ಮೇಘನಾರಾಜ್’ಗೆ ಧೈರ್ಯ ತುಂಬುವ ಜೊತೆಗೆ ಅಲ್ಲಿಗೆ ಬಂದಿದ್ದ ಗಣ್ಯರ ನಿರ್ವಹಣೆ ಮಾಡಿದರು.
ಕೆಲವು ಹೊತ್ತಲ್ಲಿ ಬರುವ ಕೋವಿಡ್ 19 ಕುರಿತ ವರದಿ ಯಾವುದೇ ಆಘಾತ ನೀಡದಿರಲಿ ಎಂದು ಪ್ರಾರ್ಥಿಸುತ್ತಲೇ ಎಂತಹ ಗಣ್ಯರೇ ಆದರೂ ಬ್ಯಾರಿಕೇಡ್’ನಿಂದ ಆಚೆಯೇ ನಿಲ್ಲುವಂತೆ ಕಾಳಜಿ ವಹಿಸಿದರು. ಈ ನಡುವೆ ರಾಜ್ಯ ಸರ್ಕಾರದ ಜತೆ ನಿರಂತರವಾಗಿ ಸಂವಹನ ನಡೆಸಿ ಸಾಧ್ಯವಾದಷ್ಟು ಬೇಗ ಚಿರಂಜೀವಿ ಸರ್ಜಾ ಗಂಟಲು ದ್ರವದ ಕೋವಿಡ್ 19 ಪರೀಕ್ಷಾ ವರದಿ ತರಿಸಿದರು. ಕೆಲ ಹೊತ್ತಲ್ಲಿ ಬಂದ ಚಿರು ಸರ್ಜಾ ಕೋವಿಡ್ 19 ರಿಪೋರ್ಟ್ ನಲ್ಲಿ ಕೋವಿಡ್ 19 ನೆಗೆಟಿವ್ ಅಂತ ಬರೆದಿದ್ದನ್ನು ಓದಿದಾಗಲೇ ತಾರಾ ನಿಟ್ಟುಸಿರು ಬಿಟ್ಟಿದ್ದು.
ಈ ನಡುವಿನ ಅವಧಿಯಲ್ಲಿ ತಾರ ಬಳಿ ಸಂಪರ್ಕದಲ್ಲಿದ್ದು ತಾರಾ ಅವರಿಗೆ ಧೈರ್ಯ ತುಂಬಿದ್ದು ಅಣ್ಣನಂತೆ ಬೆನ್ನಿಗೆ ನಿಂತವರು ಗೃಹ ಸಚಿವ ಬಸವರಾಜ ಬೊಮ್ಮಾಯಿ. ಅಧಿಕಾರದಲ್ಲಿದ್ದವರು ಹೃದಯದಿಂದ ಸ್ಪಂದಿಸುವ ಗುಣ ಇದ್ದಾಗ ಮಾತ್ರ ಇಂತಹ ಕಠಿಣ ಸಮಯವನ್ನು ಎದುರಿಸುವ ಶಕ್ತಿ ಬರಲು ಸಾಧ್ಯ ಅಲ್ಲವೇ!
-ಡಿ.ಎಲ್. ಹರೀಶ್
Get In Touch With Us info@kalpa.news Whatsapp: 9481252093
Discussion about this post