ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಟಾಕಿ ಸಿಡಿಸಲು ಸಮಯ ನಿಗದಿ ಪಡಿಸಿ ತಾನೇ ಹೊರಡಿಸಿದ್ದ ಆದೇಶವನ್ನು ಇಂದು ಮಾರ್ಪಡಿಸಿರುವ ಸುಪ್ರೀಂ ಕೋರ್ಟ್, ದೀಪಾವಳಿಯಂತಹ ದೊಡ್ಡ ಹಬ್ಬಗಳಿಗೆ ಪಟಾಕಿ ಸಿಡಿಸುವ ಸಮಯ ನಿಗದಿಯ ನಿರ್ಧಾರದ ಚೆಂಡನ್ನು ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಬಿಟ್ಟಿದೆ.
ದೀಪಾವಳಿ ವೇಳೆ ಪಟಾಕಿ ಸಿಡಿಸಲು ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೂ ಸಮಯ ನಿಗದಿ ಪಡಿಸಿ ಸುಪ್ರೀಂ ಕೋರ್ಟ್ ಕಳೆದವಾರ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶವನ್ನು ಮಾರ್ಪಡಿಸಿರುವ ನ್ಯಾಯಾಲಯ ಸಮಯ ನಿಗದಿಯನ್ನು ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಬಿಟ್ಟಿದೆ.
ಆದರೆ, ರಾಜ್ಯ ಸರ್ಕಾರಗಳು ನಿರ್ಧರಿಸುವ ಕಾಲಾವಧಿ ಪ್ರತಿದಿನಕ್ಕೆ ಎರಡು ಗಂಟೆ ಮೀರುವಂತಿಲ್ಲ ಎಂದಿರುವ ನ್ಯಾಯಾಲಯ, ಪರಿಸರಕ್ಕೆ ಹಾನಿಯಾಗದ ರೀತಿಯ ಪಟಾಕಿಗಳನ್ನು ಸಿಡಿಸಲು ಅಡ್ಡಿಯಿಲ್ಲ ಎಂದಿದೆ.
ಪಟಾಕಿ ಸಿಡಿಸುವ ಸಮಯ ನಿಗದಿಯ ವಿಚಾರದಲ್ಲಿ ತಮಿಳುನಾಡು ಸರ್ಕಾರ ಸುಪ್ರೀಂಗೆ ಅರ್ಜಿ ಸಲ್ಲಿಸಿ, ತಮಿಳುನಾಡು ಸಂಪ್ರದಾಯದ ಪ್ರಕಾರ ದೀಪಾವಳಿಯ ದಿನಗಳಲ್ಲಿ ಮುಂಜಾನೆಯೂ ಸಹ ಪಟಾಕಿ ಸಿಡಿಸುವ ಕ್ರಮವಿದೆ. ಹೀಗಾಗಿ, ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು ಎಂದು ಕೋರಿತ್ತು.
ಈ ಹಿನ್ನೆಲೆಯಲ್ಲಿ ದೀಪಾವಳಿಯ ವೇಳೆಯಲ್ಲಿ ಮುಂಜಾನೆ 4.30ರಿಂದ 6.30ರವರೆಗೂ ಸಮಯ ನಿಗದಿ ಮಾಡಬಹುದು ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.
Discussion about this post