ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ರಾಜಕಾರಣದ ಗಮನ ಸೆಳೆದಿರುವ ಮಂಡ್ಯ ಕ್ಷೇತ್ರಕ್ಕೆ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಇದಕ್ಕಾಗಿ ಸಿಆರ್’ಪಿಎಫ್ ಯೋಧರನ್ನು ನಿಯೋಜಿಸಲಾಗಿದೆ.
ಈ ಕುರಿತಂತೆ ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದ್ದು, ಫಲಿತಾಂಶದ ದಿನದಂದು ಮುಂಜಾಗ್ರಾತಾ ಕ್ರಮವಾಗಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 23ರಂದು 144 ಸೆಕ್ಷನ್ ಹೇರಲಾಗುತ್ತದೆ ಎಂದು ಹೇಳಲಾಗಿದ್ದರೂ, ಅಧಿಕೃತ ಮೂಲಗಳು ಇದನ್ನು ಖಚಿತಪಡಿಸಿಲ್ಲ.
ಮೇ 23 ಮತ್ತು 24ರಂದು ಯಾವುದೇ ಮೆರವಣಿಗೆ ಮಾಡುವುನ್ನು ಮತ್ತು ಪಟಾಕಿ ಸಿಡಿಸುವುದನ್ನು ಕೂಡಾ ತಡೆಯಬೇಕೆಂದು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಮಕ್ಕಳಿಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಎರಡು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆಗಳು ಕೂಡಾ ಇದೆ. ಸಿನಿಮಾ ಥಿಯೇಟರ್, ಮಾಲ್‌ಗಳು ಕ್ಲೋಸ್ ಆಗಲಿವೆ. ಕೆಎಸ್‌ಆರ್‌ಟಿಸಿ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಕೂಡಾ ಹೆಚ್ಚಿನ ಭದ್ರತೆಗೆ ಒತ್ತು ನೀಡಲಾಗುವುದು. ಚುನಾವಣಾ ಫಲಿತಾಂಶದ ಒಂದು ದಿನ ಮೊದಲೇ ಅಂದರೆ ಮೇ 22 ರಿಂದಲೇ ಮಂಡ್ಯ ಜಿಲ್ಲೆಯಾದ್ಯಂತ ಕರ್ನಾಟಕ ಪೊಲೀಸ್ ಮಾತ್ರವಲ್ಲದೆ ಸಿಆರ್‌ಪಿಎಫ್ ಅವರು ಗಸ್ತು ತಿರುಗಲಿದ್ದಾರೆ ಎಂದು ತಿಳಿದು ಬಂದಿದೆ.
ಮೇ 23ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸೆಕ್ಷನ್ 144 ಆದೇಶ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಡ್ಯದಲ್ಲಿ ಮೇ 22 ರಿಂದಲೇ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುವುದು. ಎರಡು ದಿನಗಳ ಕಾಲ ಮದ್ಯದಂಗಡಿಗಳನ್ನು ತೆರೆಯುವಂತಿಲ್ಲ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಬ್ಬರ ಸೃಷ್ಟಿಸಿದ ಮಂಡ್ಯದಲ್ಲಿ ಈಗ ಫಲಿತಾಂಶದ ದಿನ ಮಂಡ್ಯದ ಭದ್ರತೆಯ ಬಗ್ಗೆ ಚುನಾವಣಾ ಆಯೋಗ ಚಿಂತನೆ ನಡೆಸಬೇಕಾಗಿದೆ.
ಮೇ 23 ರಂದು ಮಂಡ್ಯದಲ್ಲಿ ಭದ್ರತೆಗಾಗಿ ಪೋಲಿಸ್ ಮಹಾನಿರ್ದೇಶಕರಿಂದ ಚುನಾವಣಾ ಆಯೋಗ ಮಾಹಿತಿಯನ್ನು ಕೇಳಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹೇಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಚರ್ಚೆ ನಡೆಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಮಂಡ್ಯಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲು ಸಿದ್ಧತೆ ನಡೆಸಲಾಗಿದೆ. ಒಂದು ದಿನ ಮುಂಚಿತವಾಗಿಯೇ ಭದ್ರತೆಯ ಬಗ್ಗೆ ಕ್ರಮಗಳನ್ನು ಕೈಗೊಳ್ಳಲು ಕೂಡಾ ಸಿದ್ಧತೆ ನಡೆದಿದೆ.
Discussion about this post