ಪ್ರಪಂಚದಲ್ಲಿರುವ ಹಲವಾರು ರೀತಿಯ ಸಮಸ್ಯೆಗಳಲ್ಲಿ ಭಿಕ್ಷಾಟನೆಯೂ ಒಂದು. ಅಸಹಾಯಕತೆಗಾಗಿ ಆರಂಭವಾದ ಭಿಕ್ಷೆ ಬೇಡುವುದು ಒಂದು ವೃತ್ತಿಯಾಗಿ ಬದಲಾಗಿ, ಅದೊಂದು ಮಾಫಿಯಾ ಆಗಿ, ತನ್ನದೇ ಆದ ಕರಾಳಮುಖವನ್ನು ಬೆಳೆಸಿಕೊಂಡಿದೆ.
ಇಂತಹ ಭೀಕರ ಸಮಸ್ಯೆಗೆ ರಾಷ್ಟ್ರ, ರಾಜ್ಯದ ಪ್ರಮುಖ ನಗರಗಳು ಸಾಕ್ಷಿಯಾಗಿದ್ದು ಮಾತ್ರವಲ್ಲದೇ, ಇಂತಹ ಒಂದು ವಿಷವರ್ತುಲ ಶಿವಮೊಗ್ಗ ನಗರಕ್ಕೂ ವ್ಯಾಪಿಸಿದೆ.
ಇಂತಹ ಭಿಕ್ಷಾಟನೆಯ ಕರಾಳ ಮುಖ ನಗರದಲ್ಲಿ ಹೇಗೆ ವ್ಯಾಪಿಸಿದೆ ಎಂಬುದನ್ನು ನೋಡಿ.
ದೃಶ್ಯ 1:
(ಸ್ಥಳ: ಶಿವಮೊಗ್ಗ ನಗರದ ಗಾಂಧಿ ಬಜಾರ್, ನೆಹರೂ ರಸ್ತೆ, ಬಸ್ ಸ್ಟಾಂಡ್ ಮುಂತಾದ ಜನನಿಬಿಡ ರಸ್ತೆ)
ಕಡು ಬಿಸಿಲು, ಕಾದ ರಸ್ತೆ/ಮಳೆಯಿಂದಾಗಿ ಕೊಚ್ಚೆಯಾಗಿರುವ ರಸ್ತೆ….. ಅದರ ಮೇಲೆಯೇ ಅರಬೆತ್ತಲೆ ಸ್ಥಿತಿಯಲ್ಲಿರುವ ವಯಸ್ಸಾದ ಮುದುಕಿ ತೆವಳುತ್ತಾ ರಸ್ತೆಯ ಮೇಲೆ ಹೋಗುವ ಸಾರ್ವಜನಿಕರಲ್ಲಿ ಭಿಕ್ಷೆಗಾಗಿ ಗೋಗರೆಯುತ್ತದೆ. ಸನಿಹದಲ್ಲೇ ಇನ್ನೊಂದು ಮುದುಕಿ ಸಹ ಊರುಗೋಲಿನ ಸಹಾಯದಿಂದ ಕಷ್ಟಪಟ್ಟು ನಡೆಯುತ್ತಾ ಭಿಕ್ಷೆ ಕೇಳುತ್ತದೆ…. ಅಣ್ಣಾ 20 ರೂಪಾಯಿ ನೀಡಿ… ಹತ್ತು ರೂಪಾಯಿ ಕೊಡಿ… ಎಂದು.
ಅವರ ಸ್ಥಿತಿ ನೋಡಿ ನಿಮಗೆ ಕರಳು ಕಿವುಚಿದಂತಾಗುತ್ತದೆ. ಹತ್ತೋ, ಇಪ್ಪತ್ತೋ ರೂಪಾಯಿ ನೋಟು ಕೈಗಿತ್ತು ಕಷ್ಟದಲ್ಲಿರುವ ಹಿರಿಯ ಜೀವಕ್ಕೆ ಸಹಾಯ ನೀಡಿದ ತೃಪ್ತಿಯೊಂದಿಗೆ ಮುಂದೆ ಸಾಗುತ್ತೀರಿ…
ದೃಶ್ಯ 2 :
ಸುಮಾರು ಹತ್ತು ಮಾರು ದೂರದಲ್ಲಿ ಗಟ್ಟಿಮುಟ್ಟಾದ ಹೆಂಗಸೊಂದು ನೆರಳಿನಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿರುತ್ತದೆ ಮತ್ತು ಇಡೀ ಚಿತ್ರಣವನ್ನು ನಿಯಂತ್ರಿಸುತ್ತಿರುತ್ತದೆ. ಭಿಕ್ಷುಕಿಯರ ಸಂಗ್ರಹ ಹಣ ತುಂಬುತ್ತಿರುವಂತೆಯೇ ಯಾರೂ ಗಮನಿಸದ ರೀತಿಯಲ್ಲಿ ಎತ್ತಿಕೊಂಡು ತಂಪಾದ ನೆರಳಿನಲ್ಲಿ ಹಣವನ್ನು ಲೆಕ್ಕ ಮಾಡಿ ಒಳಗಡೆ ಸೇರಿಸುತ್ತದೆ.
ಇದೇ ವೇಳೆ ತಿನ್ನಲು ಏನೂ ಸಿಗದ ಸ್ಥಿತಿಯಲ್ಲಿರುವ ಮುದುಕಿಯ ಭಿಕ್ಷೆಯ ಆರ್ತನಾದ ನೈಸರ್ಗಿಕವಾಗಿ ಮೂಡಿಬರುತ್ತದೆ… ಭಿಕ್ಷಾಟನೆ ವೃತ್ತಿ ಕರುಣಿಸಿದ ಮಹಿಳೆಯ ದಿನದ ದುಡಿಮೆ ಸಾವಿರ ದಾಟುತ್ತದೆ…
ಭಿಕ್ಷಾಟನೆ ನಿಷೇಧಿಸಿ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಮಾಡಿದ್ದರೂ ಸುಲಭ ಆದಾಯದ ಮಾರ್ಗವಾಗಿ ಕರಾಳಮುಖಗಳು ಕಾಣದಂತೆ ಕೆಲಸ ಮಾಡುತ್ತಲೇ ಇದೆ.
ಇನ್ನು, ಮಧ್ಯವಯಸ್ಸಿನ ಮಹಿಳೆಯರು ಪುಟ್ಟ ಮಕ್ಕಳನ್ನು ಸೊಂಟದಲ್ಲಿ ಕಟ್ಟಿಕೊಂಡು, ಬಸ್ ನಿಲ್ದಾಣ, ಬಿಎಚ್ ರಸ್ತೆ, ನೆಹರೂ ರಸ್ತೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಭಿಕ್ಷೆ ನೀಡುವಂತೆ ಜನರನ್ನು ಪೀಡಿಸುವುದೂ ಸಹ ಒಂದು ದಂಧೆಯಾಗಿದೆ.
ಇಂತಹ, ಭಿಕ್ಷಾಟನೆಯನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ನಿಯಂತ್ರಿಸಬೇಕು. ಆದರೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪಾಲಿಕೆ ಸೇರಿದಂತೆ ಯಾವುದೇ ಇಲಾಖೆಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಿದ್ದೇ ಇಲ್ಲ. ಇನ್ನು ಮುಂದಾದರೂ ಅಧಿಕಾರಿಗಳು ಎಚ್ಚೆತ್ತು ನಗರ ಹಾಗೂ ಜಿಲ್ಲೆಯಲ್ಲಿ ಭಿಕ್ಷಾಟನೆಗೆ ಕಡಿವಾಣ ಹಾಕುವ ಕ್ರಮಕೈಗೊಳ್ಳಬೇಕಿದೆ.
(ವರದಿ: ತ್ಯಾಗರಾಜ ಮಿತ್ಯಾಂತ, ಶಿವಮೊಗ್ಗ)
Discussion about this post