ಉಡುಪಿ: ನಮ್ಮ ದೇಶದ ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಒಮ್ಮೆ ಉಡುಪಿಗೆ ಕಳುಹಿಸಿಕೊಡಿ. ನಾವು ಅವರಿಗೆ ಸನ್ಮಾನ ಮಾಡಬೇಕು ಎಂದು ಪರ್ಯಾಯ ಪಲಿಮಾರು ಶ್ರೀಗಳು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಕೃಷ್ಣನ ದರ್ಶನ ಪಡೆದು, ಶ್ರೀಗಳ ದರ್ಶನ ಪಡೆದು ಆರ್ಶೀವಾದ ಪಡೆದರು.
ಈ ವೇಳೆ ಮಾತನಾಡಿದ ಶ್ರೀಗಳು, ಉಡುಪಿಗೆ ಅಭಿನಂದನ್ ವರ್ಧಮಾನ್ ಅವರನ್ನು ಕಳುಹಿಸಿಕೊಡಿ. ಅಭಿನಂದನ್ ಪರಾಕ್ರಮ ನಮಗೆ ಬಹಳ ಮೆಚ್ಚುಗೆಯಾಗಿದೆ. ಪಾಕಿಸ್ಥಾನದ ನೆಲದಲ್ಲೂ ಎದೆಗುಂದದೆ ದೇಶದ ಗೌರವ ಕಾಪಾಡಿದ್ದಾರೆ. ಅಭಿನಂದನ್ ದಿಟ್ಟತನವನ್ನು ವಿಶ್ವವೇ ಕೊಂಡಾಡಿದೆ. ಕೃಷ್ಣಮಠದಲ್ಲಿ ಅಭಿನಂದನ್ ಗೆ ಗೌರವಾರ್ಪಣೆ ಮಾಡಬೇಕು ಎಂಬ ಇಚ್ಛೆಯಿದೆ ಎಂದರು.
ಕೃಷ್ಣ ಮಠಕ್ಕೆ ಚಿನ್ನದ ಮಹಡಿಯ ನಿರ್ಮಾಣ ಆಗುತ್ತಿದೆ. ಬ್ರಹ್ಮಕಲಶೋತ್ಸವ ಸಂದರ್ಭ ಅಭಿನಂದನ್ ಅವರಿಗೆ ಮಠದ ಗೌರವ ಕೊಡುವ ಆಕಾಂಕ್ಷೆಯಿದೆ ಎಂದು ಶ್ರೀಗಳು ಹೇಳಿದ್ದಾರೆ.
ನಿಮ್ಮ ಕಾಲಾವಧಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಮಹತ್ವದ್ದು. ಉಗ್ರರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡುವ ಅಗತ್ಯ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಇಲಾಖೆಗೆ ಕಾನೂನಾತ್ಮಕ ಅಡೆ ತಡೆ ಇಲ್ಲದಿದ್ದರೆ ಕಳುಹಿಸಿಕೊಡುತ್ತೇವೆ. ರಕ್ಷಣಾ ಇಲಾಖೆಗೆ ಈ ಬಗ್ಗೆ ಒಂದು ಪತ್ರ ಬರೆಯಿರಿ ಎಂದರು. ಅಧ್ಯಾತ್ಮಿಕ ಶ್ರೀಗಳಲ್ಲಿ ನನ್ನ ಲೌಕಿಕ ವಿನಂತಿಯಿದೆ. ಈ ಬಾರಿ ಕೃಷ್ಣನಲ್ಲಿ ದೇಶಕ್ಕಾಗಿ ಪ್ರಾರ್ಥಿಸಬೇಕು. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು ಎಂದು ಪ್ರಾರ್ಥಿಸಿದರು.
Discussion about this post