ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಚಿಮೂ ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನ, ಹಿರಿಯ ಸಾಹಿತಿ ಡಾ.ಎಂ. ಚಿದಾನಂದ ಮೂರ್ತಿ(88) ಇಂದು ಮುಂಜಾನೆ ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಚಿಮೂ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
1930ರ ಮೇ 10ರಂದು ಶಿವಮೊಗ್ಗ ಜಿಲ್ಲೆ, ಚನ್ನಗಿರಿ ತಾಲೂಕಿನ ಹಿರೆಕೋಗಲೂರಿನಲ್ಲಿ ಜನಿಸಿದ ಇವರು, ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಕೋಗಲೂರು, ಸಂತೆಬೆನ್ನೂರುಗಳಲ್ಲಿ ಪಡೆದರು. ಇಂಟರ್’ಮೀಡಿಯೇಟ್ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಹತ್ತನೆಯ ಸ್ಥಾನ ಗಳಿಸಿದ ಚಿಮೂ, ಕನ್ನಡ ಆನರ್ಸ್ ಸೇರಿದರು.
ಅಂದಿನ ಪ್ರಸಿದ್ಧ ಅಧ್ಯಾಪಕರ ಮಾರ್ಗದರ್ಶನ ಮತ್ತು ಸುತ್ತೂರು ಸಂಸ್ಥಾನದ ಉಚಿತ ವಿದ್ಯಾರ್ಥಿನಿಲಯದ ಪೋಷಣೆಯಲ್ಲಿ ಪ್ರಥಮ ವರ್ಗ, ಪ್ರಥಮ ಶ್ರೇಣಿ ಅಲ್ಲದೆ ಆಲ್ ಆನರ್ಸ್ ಚಿನ್ನದ ಪದಕ ಸಹ ಪಡೆದರು. ಎರಡು ವರ್ಷಗಳ ಕಾಲ ಬೆಂಗಳೂರು, ತುಮಕೂರು, ಕೋಲಾರದ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ, ಮತ್ತೆ ರಜೆ ಹಾಕಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಪದವಿಯನ್ನು ಪ್ರಥಮ ಸ್ಥಾನದೊಂದಿಗೆ 1957ರಲ್ಲಿ ಗಳಿಸಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಇವರು ಕುವೆಂಪು ಪುತೀನ ಹಾಗೂ ರಾಘವಾಚಾರಂತ ಕನ್ನಡದ ಮಹಾ ಸಾಹಿತಿಗಳ ಪ್ರಭಾವಕ್ಕೊಳಗಾದ ಚಿಮೂ, ಎಂಎ ಓದುವಾಗಲೇ ಡಿ.ಎಲ್. ನರಸಿಂಹಾಚಾರ್ಯರ ಸೂಚನೆಯ ಮೇರೆಗೆ ಪಂಪನಿಗೆ ಹಿನ್ನೆಲೆಯಾಗಿದ್ದ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪುನಃರಚಿಸುವ ಪ್ರಯತ್ನಕ್ಕೆ ಮೂರ್ತಿಗಳು ತೊಡಗಿದರು. ಅದರ ಫಲವಾಗಿ ಬಂದ ಲೇಖನ ಪಂಪಕವಿ ಮತ್ತು ಮೌಲ್ಯಪ್ರಸಾರ’. ಆ ಮೂಲಕ ಶಾಸನಕ್ಷೇತ್ರದೆಡೆಗೆ ಹೊರಳಿದ ಮೂರ್ತಿಗಳು ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ನಿಬಂಧ ಸಿದ್ಧಪಡಿಸಿ ತೀ.ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ 1964ರಲ್ಲಿ ಪಿಎಚ್’ಡಿ ಪದವಿ ಪಡೆದರು. ಈ ನಿಬಂಧ ಕನ್ನಡ ಸಂಶೋಧನ ಕ್ಷೇತ್ರದ ಮಹತ್ವಪೂರ್ಣ ಕೃತಿಯಾಗಿದೆ.
ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಚಿದಾನಂದಮೂರ್ತಿ ಅವರದು ಚಿರಸ್ಮರಣೀಯವಾದ ದೊಡ್ಡ ಹೆಸರು. ಸುಮಾರು ನಾಲ್ಕು ದಶಕಗಳವರೆಗೆ ಅವರು ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಸಂಶೋಧನೆಗಳ ಕುರಿತಾದ ಮಹತ್ವದ ಬರಹಗಳನ್ನು ಪ್ರಕಟಿಸಿದ್ದಾರೆ. ಇಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ, ನಾನೂರಕ್ಕೂ ಹೆಚ್ಚು ಸಂಪ್ರಬಂಧಗಳನ್ನೂ ಪ್ರಕಟಿಸಿರುವ ಇವರು, ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕರ್ಣಾಟಕ ಇತಿಹಾಸ ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.
ಚಿದಾನಂದಮೂರ್ತಿ ಜಾನಪದ ಕ್ಷೇತ್ರದಲ್ಲೂ ಕೆಲಸ ಮಾಡಿದ್ದು, ಗ್ರಾಮೀಣ ಹಾಗೂ ಪಗರಣ ಮತ್ತು ಇತರ ಸಂಪ್ರಯದಾಯಗಳು ಎಂಬ ಎರಡು ಪುಸ್ತಕಗಳಲ್ಲಿ ಅವರ ಈ ಸಂಬಂಧವಾದ ಸಂಪ್ರಬಂಧಗಳು ಸಂಗ್ರಹಗೊಂಡಿವೆ. ಜಾನಪದ ವಿಜ್ಞಾನದ ದೃಷ್ಟಿಯಿಂದ ಈ ಲೇಖನಗಳು ಮಹತ್ವಪೂರ್ಣವಾಗಿವೆ. ದೂಡ್ಡ ಸಂಶೋಧಕರಾಗಿ ವಿದ್ವಾಂಸರಾಗಿ ಹೆಸರು ಗಳಿಸಿದ್ದು ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರಿಂದಲೇ. ಸಂಶೋಧನ ತರಂಗ’ದ ಎರಡೂ ಸಂಪುಟಗಳಲ್ಲಿ ಇಂಥ ಲೇಖನಗಳಿವೆ. ಅವರ ಪಿಎಚ್’ಡಿ ಪ್ರಬಂಧವಾದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನದ ಬಗ್ಗೆ ಇದೊಂದು ಸಂಸ್ಕೃತಿಯ ವಿಶ್ವಕೋಶ.
ಚಿದಾನಂದ ಮೂರ್ತಿಯವರ ಕೃತಿಗಳು:
- ವೀರಶೈವ ಧರ್ಮ
- ವಾಗರ್ಥ
- ವಕಾನ ಸಾಹಿತ್ಯ
- ಸಂಶೋಧನೆ
- ಸಂಶೋಧನಾ ತರಂಗ ಸರಸ
- ಪುರಾಣ ಸೂರ್ಯಗ್ರಹಣ
- ಪಾಂಡಿತ್ಯ ರಸ, ಕನ್ನಡ ವಿಶ್ವವಿದ್ಯಾಲಯ
- ಸೂನ್ಯ ಸಂಪಾದನೆಯನ್ನು ಕುರಿತು
- ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪ್ರಶ್ಯತೆ, ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗ
- ಲಿಂಗಾಯತ ಅಧ್ಯಯನಗಳು, ವಾಗ್ದೇವಿ ಪುಸ್ತಕಗಳು
- ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ
- ಕರ್ನಾಟಕ ಸಂಸ್ಕೃತಿ, ಕನ್ನಡ ಸಾಹಿತ್ಯ ಪರಿಷತ್ತು
- ಕರ್ನಾಟಕ-ನೇಪಾಳ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ
- ಕನ್ನಡಾಯಣ
- ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ
- ಹೊಸತು ಹೊಸತು, ಕನ್ನಡ ವಿಶ್ವವಿದ್ಯಾಲಯ
- ಗ್ರಾಮೀಣ, ಬಪ್ರೋ ಪ್ರಕಾಶನ
- ಚಿದಾನಂದ ಸಮಗ್ರ ಸಂಪುಟ
- ಬಸವಣ್ಣ
ಚಿಮೂ ಸಾಹಿತ್ಯ ಕೃಷಿಗೆ ಸಂದ ಗೌರವಗಳು
- ರಾಜ್ಯೋತ್ಸವ ಪ್ರಶಸ್ತಿ
- ಹೊಸತು ಹೊಸತು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಪಂಪ ಪ್ರಶಸ್ತಿ, 2002
- ಆಳ್ವಾಸ್ ನುಡಿಸಿರಿ ಪ್ರಶಸ್ತಿ, 2006
Get in Touch With Us info@kalpa.news Whatsapp: 9481252093
Discussion about this post