ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ನಡುವೆ ಸಮತೋಲನ ಕಾಯ್ದುಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯಗಳಂತಹ ಮಾನವ ನಿರ್ಮಿತ ದುರಂತಗಳನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು.
ವನ್ಯಜೀವಿ ಅಧ್ಯಯನದ ಪ್ರಾಯೋಗಿಕ ತಂತ್ರಗಳ ಕುರಿತು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗ ಆಯೋಜಿಸಿರುವ ಒಂದು ವಾರದ ಕಾರ್ಯಾಗಾರವನ್ನು ಸೋಮವಾರ ಅವರು ಉದ್ಘಾಟಿಸಿ ಮಾತನಾಡಿದರು.
2021ರ ಅಂತ್ಯದ ವೇಳೆಗೆ ಭಾರತದ ಅರಣ್ಯ ವ್ಯಾಪ್ತಿ 2,261 ಚದುರ ಕಿ.ಮೀ ಇದ್ದು, ಒಟ್ಟಾರೆ ಭೂಭಾಗದ ಶೇ. 24.62ರಷ್ಟಿದೆ ಎಂದು ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಬಿಡುಗಡೆ ಮಾಡಿರುವ ಭಾರತೀಯ ಅರಣ್ಯ ಸಮೀಕ್ಷೆಯ ವರದಿ ತಿಳಿಸಿರುವುದು ಸಂತಸದ ವಿಷಯ. ಆದರೆ, ಸರ್ಕಾರಗಳು ನದಿ ಜೋಡಣೆ, ಬಹು ಉದ್ದೇಶಿತ ಬೃಹತ್ ಅಣೆಕಟ್ಟುಗಳ ನಿರ್ಮಾಣ, ಹೆದ್ದಾರಿಗಳು ಮತ್ತು ರೈಲ್ವೆ ಮಾರ್ಗಗಳ ನಿರ್ಮಾಣ, ಹೀಗೆ ಬೃಹತ್ ಯೋಜನೆಗಳ ಬಗೆಗೇ ಹೆಚ್ಚು ಆಸಕ್ತಿ ತೋರುತ್ತಿರುವುದರಿಂದ ಪರಿಸರ ಸಂರಕ್ಷಣೆಗೆ ವ್ಯತಿರಿಕ್ತವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದರು.
Also read: ಪವರ್ ಕಪ್ ಟೂರ್ನಿಯಲ್ಲಿ ತೀರ್ಥಹಳ್ಳಿ ಪ್ರಥಮ, ಹೊಸನಗರ ದ್ವಿತೀಯ, ಕುಂಸಿ ತೃತೀಯ
ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಈ. ಟಿ. ಪುಟ್ಟಯ್ಯ ಮಾತನಾಡಿ, ಗಣ ಗಾರಿಕೆ, ಕಳ್ಳಬೇಟೆ, ನೈಸರ್ಗಿಕ ವಿಕೋಪಗಳ ಜೊತೆಗೆ ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ, ಬಡಾವಣೆಗಳ ನಿರ್ಮಾಣ, ಬೃಹತ್ ಅಣೆಕಟ್ಟುಗಳು, ಹೀಗೆ ವಿವಿಧ ಮೂಲಸೌಕರ್ಯಗಳ ಯೋಜನೆಗಳು ಜೀವವೈವಿಧ್ಯತೆಯ ಸಂರಕ್ಷಣೆಗೆ ಸವಾಲಾಗಿ ಪರಿಣಮಿಸಿದೆ. ಇಂಥಹಾ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಿಂದ ಒಂದೆಡೆ ಅರಣ್ಯವನ್ನು ಅವಲಂಬಿಸಿರುವ ಸಮುದಾಯಗಳು, ಮತ್ತು ಗ್ರಾಮಸ್ಥರು ನಿರಾಶ್ರಿತರಾದರೆ, ಇನ್ನೊಂದೆಡೆ ಆ ಭಾಗದ ಜೀವ ಸಂಕುಲ ಮತ್ತು ಅರಣ್ಯ ಪ್ರದೇಶವೇ ನಾಶವಾಗುತ್ತದೆ. ಹೀಗಾಗಿ ಅಭಿವೃದ್ಧಿ ಯೋಜನೆಗಳನ್ನು ಸುಸ್ಥಿರ ಪರಿಕಲ್ಪನೆಯಡಿ ಮರುವ್ಯಾಖ್ಯಾನಿಸುವ ಅನಿವಾರ್ಯತೆಯಿದೆ. ಹೀಗಾದಾಗ ಮಾತ್ರ ಜೀವವೈವಿಧ್ಯತೆ, ಮತ್ತು ವನ್ಯಜೀವಿಗಳ ಸಂರಕ್ಷಣೆ ಸಾಧ್ಯ ಎಂದರು.
ವಿಭಾಗದ ಅಧ್ಯಕ್ಷ ಪ್ರೊ. ವಿಜಯಕುಮಾರ ಮಾತನಾಡಿ, ವನ್ಯಜೀವಿಗಳ ಸಂರಕ್ಷಣೆ ಒಟ್ಟಾರೆ ಅರಣ್ಯ ಪ್ರದೇಶದ ಉಳಿವಿಗೆ ನೇರವಾಗಿ ಸಂಬಂಧಪಟ್ಟಿದೆ. ಪರಿಸರದ ಆಡಿಟಿಂಗ್, ಪರಿಣಾಮಗಳ ಅಧ್ಯಯನಗಳನ್ನು ಕೈಗೊಳ್ಳದೆ ಯಾವುದೇ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸೂಕ್ತವಲ್ಲ. ಈ ರೀತಿಯ ವಿದ್ಯಮಾನಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಭಾಗದ ಅಧ್ಯಕ್ಷ ಪ್ರೊ. ವಿಜಯಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುವೆಂಪು ವಿವಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಪ್ರೊ. ಸಿ. ಗೀತಾ, ಪ್ರೊ. ನಾಗರಾಜ್, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಮಹದೇವನ್, ಪ್ರೊ. ಬಿ. ತಿಪ್ಪೇಸ್ವಾಮಿ, ಡಾ. ಪ್ರಮೋದ್, ಡಾ. ಹರೀಶ್, ಡಾ. ರಾಘವೇಂದ್ರ ಗೌಡ, ಡಾ. ಸೌಮ್ಯ, ಇತರೆ ವಿಭಾಗದ ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಂಗಳೂರಿನ ವೈಲ್ಡ್ ಸೋನಿಕ್ ಸಂಸ್ಥೆಯ ಅಭಿ ಮಂಡೇಲಾ, ಹೈದರಾಬಾದ್‌ನ ಪರಿಸರ ತಜ್ಞ ಸಚಿನ್ ಶ್ರೀಧರ ಕಾರ್ಯಾಗಾರ ನಡೆಸಿಕೊಟ್ಟರು. ಮಣ ಪಾಲ ಸಂಸ್ಥೆಯ ಡಾ. ಗುರುರಾಜ ಕೆ.ವಿ, ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆಯ ಡಾ. ಸಿ. ಕೆ. ತಮ್ಮಯ್ಯ, ಚಾಮರಾಜನಗರದ ಎಟಿಆರ್‌ಇಇ ಸಂಸ್ಥೆಯ ಡಾ. ಶ್ರೀನಿವಾಸ್. ಕೆ. ಆರ್, ವಾರಪೂರ್ತಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post