ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಜನರ ಅಗತ್ಯತೆಗಳು, ಅನಿಸಿಕೆಗಳನ್ನು ಸರ್ಕಾರಕ್ಕೆ ತಲುಪಿಸಿ ಕಟ್ಟಕಡೆಯ ವ್ಯಕ್ತಿಯು ಘನತೆಯಿಂದ ಬದುಕುವ ವಾತಾವರಣ ಸೃಷ್ಟಿಸುವ ನಿರಂತರ ಜವಾಬ್ದಾರಿಯನ್ನು ಮಾಧ್ಯಮಗಳು ಹೊರಬೇಕಿದೆ. ಅದುವೇ ಅಭ್ಯುದಯ ಪತ್ರಿಕೋದ್ಯಮ ಎಂದು ಮಾಧ್ಯಮ ತಜ್ಞ, ಅವಧಿ ಸಂಪಾದಕ ಜಿ.ಎನ್. ಮೋಹನ್ ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ ಪತ್ರಿಕೋದ್ಯಮ ವಿಭಾಗ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಮಾಧ್ಯಮ ವಿಶೇಷ ಉಪನ್ಯಾಸ ಸರಣಿಯ ಭಾಗವಾಗಿ ಅಭ್ಯುದಯ ಪತ್ರಿಕೋದ್ಯಮ ವಿಷಯದ ಮೇಲೆ ಮಾಧ್ಯಮ ತಜ್ಞ ಜಿ. ಎನ್. ಮೋಹನ್ ಅವರು ವಿಶೇಷ ಉಪನ್ಯಾಸ ನೀಡಿದರು.
ಜಗತ್ತಿನಾದ್ಯಂತ ಮಾಧ್ಯಮದ ಸ್ಥಿತಿಗತಿ ಅರಿಯುವ ಸಲುವಾಗಿ ವಿಶ್ವಸಂಸ್ಥೆಯು ರಚಿಸಿದ ಮ್ಯಾಕ್‌ಬ್ರೈಡ್ ಕಮಿಷನ್ ವರದಿಯ ಪ್ರಕಾರ ಈಗಾಗಲೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾಧ್ಯಮವು ಬೇರೆಲ್ಲ ದಿನಬಳಕೆ ವಸ್ತುಗಳ ರೀತಿಯಲ್ಲಿ ಕೇವಲ ಒಂದು ಉತ್ಪನ್ನವಾಗಿದೆ. ಅಲ್ಲಿ ಯಾವುದೇ ಸಾಮಾಜಿಕ ಕಳಕಳಿ, ಹಿತಗಳು ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಬರ ಬಂದರೆ ಪರಿಹಾರ ವಿಷಯದಲ್ಲಿ ನಡೆಯುವ ಭ್ರಷ್ಟಾಚಾರ ಮೇಲಾಟಗಳು, ಕೊವಿಡ್ ಸಂದರ್ಭದಲ್ಲಿಯೂ ಪುನರಾವರ್ತನೆಯಾಗಿವೆ. ಚಿಕಿತ್ಸೆ ಸಮಸ್ಯೆ, ವಲಸೆ ಕಾರ್ಮಿಕರ ಪರದಾಟ, ನದಿ ತಟದ ಹೆಣಗಳ ರಾಶಿ, ಆಕ್ಸಿಜನ್ ಮತ್ತು ವೆಂಟಿಲೇಟರ್‌ಗಳ ಖರೀದಿಗಳನ್ನು ಮಾಧ್ಯಮಗಳು ಪ್ರಶ್ನಿಸದೇ ಹೋಗಿದ್ದರೆ, ಸರ್ಕಾರಗಳನ್ನು ಎಚ್ಚರಿಸದಿದ್ದರೆ ಈಗಿನದ್ದಕ್ಕಿಂತ ನಾಲ್ಕು ಪಟ್ಟು ದೊಡ್ಡಮಟ್ಟದ ದುರಂತಗಳು ಸಮಾಜದೊಳಗೆ ನಡೆಯುತ್ತಿದ್ದವು. ಆದ್ದರಿಂದಲೇ ಮಾಧ್ಯಮಗಳು ಸಮಾಜ-ಸರ್ಕಾರಗಳ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಇಂದಿನ ಮಾಧ್ಯಮ ಕ್ರಿಕೆಟ್, ಕ್ರೈಮ್ ಮತ್ತು ಸಿನಿಮಾಗಳ ಹಿಂದೆ ಓಡುತ್ತಿದ್ದು, ಸಾಮಾಜಿಕ ಹೊಣೆಗಾರಿಕೆ ಮರೆಯುತ್ತಿವೆ. ಬಡವರ ನೋವುಗಳನ್ನು ಅನುಕೂಲಸ್ಥರಿಗೆ, ಸರ್ಕಾರಕ್ಕೆ ತಲುಪಿಸಿ ಧನಾತ್ಮಕವಾದ ಸಮಾಜ ಕಟ್ಟುವ ಬದಲು, ಉಳ್ಳವರ, ಸೆಲೆಬ್ರೆಟಿಗಳ ವಿಚಾರಗಳನ್ನು ಬಿತರಿಸುತ್ತ ಕೇವಲ ಅಲಂಕಾರಿಕ ವಸ್ತುಗಳನ್ನು ಮಾರಲು ಸಹಾಯಕವಾಗಿರುವಂತಹ ಸಾಧನಗಳಾಗಿ ಬದಲಾಗಿವೆ. ಭಾರತದಲ್ಲಿ ಜಾಗತೀಕರಣದ ನಂತರ ರಾಜಕಾರಣಿಗಳು, ಬಂಡವಾಳಶಾಹಿಗಳು, ರಿಯಲ್ ಎಸ್ಟೇಟ್ ಧಣಿಗಳು ಮಾಧ್ಯಮದ ಮಾಲೀಕತ್ವ ಹೊಂದುತ್ತಾ ಬಂದಿದ್ದೇ ಇಂದಿನ ಪ್ರವೃತ್ತಿಗೆ ಕಾರಣವಾಯಿತು. ಸುದ್ದಿಯನ್ನು ಬಂಡವಾಳ ಎಂದು ಪರಿಗಣಿಸಿ ಅದರ ಮೂಲಕ ಲಾಭ ಮಾಡುವ ಉದ್ದೇಶ ಹೊಂದಿದ ಮಾಧ್ಯಮಗಳ, ಮಾಲೀಕರ ಕುರಿತು ಎಚ್ಚರ ವಹಿಸಬೇಕು ಎಂದು ಎಚ್ಚರಿಸಿದರು.
ಉಪನ್ಯಾಸದ ನಂತರ ಜಾಗತೀಕರಣ, ಮಾಧ್ಯಮ ಹೊಣೆಗಾರಿಕೆ, ಮಾಲೀಕತ್ವ, ಉದ್ಯಮ ಸ್ವರೂಪ ಕುರಿತು ಸುದೀರ್ಘ ಸಂವಾದ ನಡೆಯಿತು. ಈ ಸಂದರ್ಭದಲ್ಲಿ ವಿಭಾಗದ ಪ್ರಾಧ್ಯಾಪಕರುಗಳಾದ ಡಾ. ಡಿ. ಎಸ್. ಪೂರ್ಣಾನಂದ, ಅಧ್ಯಕ್ಷರಾದ ಡಾ. ಸತೀಶ್ ಕುಮಾರ್ ಮಾತನಾಡಿದರು. ಡಾ. ವರ್ಗೀಸ್, ಡಾ. ಎಂ.ಆರ್. ಸತ್ಯಪ್ರಕಾಶ್ ಸೇರಿದಂತೆ ವಿಭಾಗದ ಹಿರಿಯ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ವಿವಿಧ ಕಾಲೇಜುಗಳ ಪತ್ರಿಕೋದ್ಯಮ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post