ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ಅಧ್ಯಾಪಕರುಗಳು ಭೌದ್ಧಿಕ ಅಹಂಕಾರ ತೋರಿದಲ್ಲಿ ವಿಶ್ವವಿದ್ಯಾಲಯಗಳು ಅಧಃಪತನಕ್ಕೀಡಾಗುತ್ತವೆ ಎಂದು ವಿವಿಯ ಕನ್ನಡ ಭಾರತಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೇಶವಶರ್ಮಾ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯ ಅಧ್ಯಾಪಕರ ಸಂಘದ ವತಿಯಿಂದ ವಿವಿಯ ಮೂವರು ವಯೋನಿವೃತ್ತ ಪ್ರಾಧ್ಯಾಪಕರಿಗೆ ಇಂದು ಪ್ರೊ. ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರುಗಳ ನಡುವೆ, ಅಧ್ಯಾಪಕರು-ವಿದ್ಯಾರ್ಥಿಗಳ ನಡುವೆ ವೈಚಾರಿಕ ಚರ್ಚೆಗಳು ನಡೆಯಬೇಕು. ಈ ಮೂಲಕ ಒಂದು ಭೌದ್ಧಿಕ, ಉತ್ಕೃಷ್ಟ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಲು ಸಾಧ್ಯ. ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯವು ಈ ವಿಚಾರದಲ್ಲಿ ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತದೆ ಎಂದು ಹೇಳಿದರು.
ಭೌದ್ಧಿಕ ಅಹಂಕಾರಗಳನ್ನು ತೊರೆದು ನಾಲ್ಕು ಗೋಡೆಗಳಾಚೆಗೆ ಪಾಠ-ಪ್ರವಚನ, ಚರ್ಚೆಗಳಲ್ಲಿ ಪಾಲ್ಗೊಳ್ಳುವ ಪ್ರಾಧ್ಯಾಪಕರಿಂದ ವಿಶ್ವವಿದ್ಯಾಲಯಗಳು ಬೆಳೆಯುತ್ತವೆ. ಮಾನವಶಾಸ್ತ್ರ ವಿಷಯಗಳಿಗೆ ಸಮಾಜವೇ ಪ್ರಯೋಗಶಾಲೆಯಾಗಿದ್ದು, ಅಧ್ಯಾಪಕರುಗಳು ಕ್ಯಾಂಪಸ್‌ಗಳಾಚೆಗೆ ಬಂದು ಸಮಾಜದಲ್ಲಿ ವೈಚಾರಿಕ ಚಿಂತನೆ, ಚಳವಳಿಗಳಲ್ಲಿ ಭಾಗಿಯಾಗಬೇಕು. ತಮ್ಮ ವಿಷಯತಜ್ಞತೆಯನ್ನು ಬಳಸಿಕೊಂಡು ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಉದ್ದೇಶದೊಂದಿಗೆ ಮಾರ್ಗದರ್ಶನ ನೀಡಬೇಕು. ಈ ಮೂಲಕ ಸಮಾಜ, ಪ್ರದೇಶ ಮತ್ತು ರಾಷ್ಟ್ರಕಟ್ಟುವ ಕೆಲಸವನ್ನು ಕೈಗೊಂಡಾಗ ಸಮಾಜದಲ್ಲಿ ತಮ್ಮದೇ ಗುರುತು ದೊರೆಯುತ್ತದೆ ಎಂದು ತಿಳಿಸಿದರು.
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ವಿಶ್ವವಿದ್ಯಾಲಯ ಮತ್ತು ಸಮಾಜದಲ್ಲಿ ಪ್ರಾಧ್ಯಾಪಕ ಜವಬ್ದಾರಿ ಅತಿದೊಡ್ಡದು ಮತ್ತು ಗೌರವಯುತವಾದದ್ದು, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರುಗಳು ಆಡಳಿತಾತ್ಮಕ ಹುದ್ದೆಗಳಿಗಿಂತ ಬೋಧನೆ-ಸಂಶೋಧನಾ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುತ್ತಾರೆ. ಪ್ರತೀ ಪ್ರಾಧ್ಯಾಪಕನು ತನ್ನ ಹುದ್ದೆಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳು, ಸಂಶೋಧಕರನ್ನು ತಯಾರು ಮಾಡಲು ಬಳಸಿ ಸಮಾಜಿಮುಖಿ ಕೊಡುಗೆ ನೀಡುವುದು ಸಾರ್ಥಕ ಭಾವ ನೀಡುತ್ತದೆ. ಈ ನಿಟ್ಟಿನಲ್ಲಿ ಕುವೆಂಪು ವಿವಿಯ ಬೋಧಕರು ಸದಾ ಮುಂದಿದ್ದಾರೆ ಎಂದು ಶ್ಲಾಘಿಸಿದರು.
ಕನ್ನಡ ಭಾರತಿ ವಿಭಾಗದ ಪ್ರೊ. ಕೇಶವ ಶರ್ಮ, ರಾಜ್ಯಶಾಸ್ತ್ರ ವಿಭಾಗದ ಪ್ರೊ. ಎಸ್. ಎ. ಜಾವೀದ್, ಭೂಗರ್ಭಶಾಸ್ತ್ರ ವಿಭಾಗದ ಪ್ರೊ. ಜಿ. ಚಂದ್ರಕಾಂತ್‌ರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಈ ಸಂಧರ್ಭದಲ್ಲಿ ವಿವಿಯ ಕುಲಸಚಿವ ಪ್ರೊ. ಎಸ್.ಎಸ್. ಪಾಟೀಲ್, ಪರೀಕ್ಷಾಂಗ ಕುಲಸಚಿವ ಪ್ರೊ. ಪಿ. ಕಣ್ಣನ್, ಹಣಕಾಸು ಅಧಿಕಾರಿ ರಾಮಕೃಷ್ಣ, ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಕೇಶವಯ್ಯ, ಕಾರ್ಯದರ್ಶಿ ಡಾ. ಬಿ. ತಿಪ್ಪೇಸ್ವಾಮಿ ಮಾತನಾಡಿದರು. ಸಿಂಡಿಕೇಟ್ ಸದಸ್ಯರಾದ ಬಳ್ಳೆಕೆರೆ ಸಂತೋಷ್, ಧರ್ಮಪ್ರಸಾದ್, ರಾಮಲಿಂಗಪ್ಪ, ನಾಗರಾಜ್, ಡಾ. ಕಿರಣ್ ದೇಸಾಯಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಯ ಎಲ್ಲ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post