ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಭಾರತೀಯ ಸಂಸ್ಕ್ರತಿಯಲ್ಲಿ ಹತ್ತು ಹಲವು ಹುಳುಕುಗಳಿದ್ದರೂ, ಭಾರತೀಯ ಪರಂಪರೆಯ ಅತ್ಯುತ್ತಮ ಅಂಶಗಳನ್ನು ಜಗತ್ತಿಗೆ ಪರಿಚಯಿಸಿದ ಕರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಕೋವಿಡ್ ಮಾರ್ಗದರ್ಶಿ ಸೂಚನೆಗಳು ಜಾರಿಯಲ್ಲಿರುವುದರಿಂದ ಬುಧವಾರ ಬೆಳಿಗ್ಗೆ ವಿಶ್ವವಿದ್ಯಾಲಯದಲ್ಲಿ ಸರಳವಾಗಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೂ ಧರ್ಮದ ಸಹಿಷ್ಣುತೆ ಗುಣ,ಮನುಷ್ಯರ ನಿಲುವುಗಳನ್ನ ಜಗತ್ತಿಗೆ ತಿಳಿಸಿಕೊಡುವುದರ ಜೊತೆಗೆ, ಹಿಂದೂ ಧರ್ಮ ಹೇಗೆ ಸರ್ವಧರ್ಮಗಳ ತಳಹದಿಯಾಗಬಲ್ಲದು ಎಂದು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಪ್ರತಿಪಾದಿಸಿದ್ದರು ಎಂದರು.
ಕುಲಸಚಿವರಾದ ಜಿ. ಅನುರಾಧ ಅವರು ಮಾತನಾಡಿ, ಸ್ವಾಮಿ ವಿವೇಕಾನಂದ ಜನ್ಮದಿನವನ್ನು ರಾಷ್ಟ್ರೀಯ ಯುವದಿನವೆಂದು ಆಚರಿಸಲಾಗುತ್ತಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನಿಯ ಬೆಳವಣಿಗೆಯಾಗಿದೆ. ಯುವ ಜನತೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ರೂಢಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು.
ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಉಪಕುಲಸಚಿವ ಡಾ. ಶ್ರೀಶೈಲ, ಪ್ರಾಧ್ಯಾಪಕರು, ಅಧಿಕಾರಿ ವರ್ಗದವರು, ಅಧ್ಯಾಪಕೇತರ ನೌಕರರು ಈ ಸಂರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post