ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು, ಅಕ್ಕಮಹಾದೇವಿ, ಪುರಂದರದಾಸರಂತಹ ಮಹಾನ್‌ಚೇತನಗಳನ್ನು ನೀಡಿರುವ ಶಿವಮೊಗ್ಗ ಜಿಲ್ಲೆಯು ಕನ್ನಡ ಭಾಷೆ, ಸಾಹಿತ್ಯದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ Kuvempu University ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶನದ ಅನ್ವಯ ವಿವಿಯ ಬಸವ ಸಭಾಭವನದಲ್ಲಿ ಶುಕ್ರವಾರ ಬೆಳಿಗ್ಗೆ ಆಯೋಜಿಸಲಾಗಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಶ್ರೇಷ್ಠ, ಪುರಾತನ ಭಾಷೆಗಳಲ್ಲೊಂದಾದ ಕನ್ನಡದ ಲಿಪಿಯ ಮೊದಲ ಅಕ್ಷರಗಳನ್ನು ಶಿವಮೊಗ್ಗ ಜಿಲ್ಲೆಯ ತಾಳಗುಂಡದಲ್ಲಿ ಬರೆಯಲಾಗಿದೆ. ಜ್ಞಾನಪೀಠಿಗಳಾದ ಕುವೆಂಪು ಮತ್ತು ಯು. ಆರ್. ಅನಂತಮೂರ್ತಿಯವರು ಶಿವಮೊಗ್ಗ ಜಿಲ್ಲೆಯವರು. ಒಂದೇ ಜಿಲ್ಲೆಗೆ ಎರಡೆರಡು ಜ್ಞಾನಪೀಠ ಪ್ರಶಸ್ತಿಗಳು ಭಾರತದಲ್ಲಿ ಸಂದಿರುವುದು ಈ ಜಿಲ್ಲೆಗೆ ಮಾತ್ರ. ಅಕ್ಕಮಹಾದೇವಿ, ಪುರಂದರದಾಸ, ರಾಷ್ಟçಕವಿ ಜಿ. ಎಸ್. ಶಿವರುದ್ರಪ್ಪ, ಲಂಕೇಶ್ ಸೇರಿದಂತೆ ಹತ್ತಾರು ಕನ್ನಡ ಕವಿಗಳು, ಸಾಹಿತಿಗಳು, ಕಲಾವಿದರನ್ನು ಶಿವಮೊಗ್ಗ ಜಿಲ್ಲೆ ನೀಡಿದೆ. ಈ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಕುವೆಂಪು ವಿವಿಯಲ್ಲಿ ಕೋಟಿ ಕಂಠ ಗಾಯನವು ಹೆಚ್ಚು ಅರ್ಥಪೂರ್ಣ ಎಂದು ಅವರು ತಿಳಿಸಿದರು.
ಸಭಾಭವನದ ತುಂಬ ನೆರೆದಿದ್ದ ಸಭಿಕರು ಗಾಯಕರ ಜೊತೆಗೂಡಿ ಹಾಡುವುದು, ಚಪ್ಪಾಳೆಯ ಅಲಾಪಗಳನ್ನು ಮಾಡುತ್ತ ದನಿಗೂಡಿಸಿದ್ದು ಕಂಡುಬಂದಿತು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಶಿಳ್ಳೆ, ಕೇಕೆಹಾಕುತ್ತ ನಲಿದ ದೃಶ್ಯಗಳು ಕಂಡುಬಂದವು. ಒಟ್ಟಾರೆ ಕಾರ್ಯಕ್ರಮದಲ್ಲಿ ಸಭಿಕರು ಅತಿ ಉತ್ಸಾಹದಿಂದ ಹಾಗೂ ಭಾಷಾಭಿಮಾನದಿಂದ ಉಲ್ಲಸಿತರಾಗಿದ್ದು ಕಂಡಬಂದಿತು.
ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶದನ್ವಯ ನಾಡಗೀತೆ ಸೇರಿದಂತೆ ಒಟ್ಟು ಆರು ಗೀತೆಗಳನ್ನು ಸಮನ್ವಯ ಟ್ರಸ್ಟ್ ನ ಸ್ವಯಂಸೇವಕರು ಮತ್ತು ಕುವೆಂಪು ವಿವಿಯ ಬೋಧಕೇತರ ಸಿಬ್ಬಂದಿಗಳು ಜೊತೆಯಾಗಿ ಹಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಮುಖ್ಯಸ್ಥರಾದ ಸಮನ್ವಯ ಕಾಶಿ ಗೀತೆಗಳ ಬರಹಗಾರರ ಮತ್ತು ಗೀತೆಗಳ ಹಿನ್ನೆಲೆ ಕುರಿತು ಮಾಹಿತಿ ನೀಡಿದರು. ಗೀತಗಾಯನ ನಂತರ ಸಭಿಕರಿಗೆ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಸತ್ಯಪ್ರಕಾಶ್ ಎಂ. ಆರ್. ಕನ್ನಡ ಸಂಕಲ್ಪ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವೆ ಅನುರಾಧ ಜಿ., ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಕೆ. ನವೀನ್ ಕುಮಾರ್, ಸಿಂಡಿಕೇಟ್ ಸದಸ್ಯರಾದ ರಮೇಶ್ ಬಾಬು, ಡಾ. ಕಿರಣ್ ದೇಸಾಯಿ, ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ವಿವಿಯ ಕಲಾ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post