ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿವಿಯ Kuvempu University ನೂತನ ಕುಲಪತಿಯಾಗಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಶರತ್ ಅನಂತಮೂರ್ತಿ Dr. Sharath Ananthamurthy ಅವರು ಗುರುವಾರ ಬೆಳಿಗ್ಗೆ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ರಾಜ್ಯಪಾಲ ಡಾ. ತಾವರ್ ಚಂದ್ ಗೆಹ್ಲೋಟ್ Governor Thawarchand Gehlot ಅವರು ಫೆಬ್ರವರಿ 05ರಂದು ಡಾ. ಶರತ್ ಅವರನ್ನು ಪೂರ್ಣಾವಧಿ ಕುಲಪತಿಯಾಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದರು.
ಪ್ರೊ. ಶರತ್ ಅನಂತಮೂರ್ತಿ ಕರ್ನಾಟಕದ ಖ್ಯಾತ ಸಾಹಿತಿ ಹಾಗೂ ಜ್ಞಾನಪೀಠ ಪುರಸ್ಕೃತ ಡಾ. ಯು ಆರ್ ಅನಂತಮೂರ್ತಿ ಅವರ ಪುತ್ರರಾಗಿದ್ದಾರೆ. ಇವರು ಅಮೆರಿಕಾದ ಪ್ರತಿಷ್ಠಿತ ಅಯೋವಾ ಸ್ಟೇಟ್ ವಿಶ್ವವಿದ್ಯಾಲಯದಿಂದ ಪಿಹೆಚ್. ಡಿ. ಪದವಿ ಪಡೆದಿದ್ದಾರೆ. ಪ್ರೊ. ಶರತ್ ಬೆಂಗಳೂರು ವಿವಿಯಲ್ಲಿ 2017ರವರೆಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ನಂತರ ಹೈದರಾಬಾದ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು.
Also read: ಅಪಘಾತದಲ್ಲಿ ಎರಡೂ ಕೈ ಕಳೆದುಕೊಂಡಿದ್ದ ವ್ಯಕ್ತಿಗೆ `ಕಸಿ’ ಯಶಸ್ವಿ | ಕೈ ದಾನ ಮಾಡಿದ ಮಹಾನ್ ತಾಯಿ ಈಕೆ
ಅವರು 35ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಶೋಧನಾ ಜರ್ನಲ್ ಗಳಲ್ಲಿ ಪ್ರಕಟಿಸಿದ್ದಾರೆ. ಇವರ ಲೇಖನಗಳು 350ಕ್ಕೂ ಹೆಚ್ಚು ಸಂಶೋಧನಾ ಮರು ಉಲ್ಲೇಖಗಳನ್ನು ಪಡೆದುಕೊಂಡಿವೆ. 2006ರಲ್ಲಿ ಇವರ ಶೈಕ್ಷಣಿಕ ಸಾಧನೆಗಾಗಿ ಕಾಮನ್ವೆಲ್ತ್ ವಿಶ್ವವಿದ್ಯಾಲಯಗಳು ಒಕ್ಕೂಟದ ವತಿಯಿಂದ ‘ಕಾಮನ್ವೆಲ್ತ್ ಶೈಕ್ಷಣಿಕ ಸಿಬ್ಬಂದಿ ಫೆಲೋಶಿಪ್’ ಗೌರವವನ್ನು ನೀಡಲಾಗಿದೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಕುವೆಂಪು ಹೆಸರಿನ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡಿರುವುದು ಅತ್ಯಂತ ಹೆಮ್ಮೆಯ ವಿಷಯ. ಅವರ ವೈಚಾರಿಕತೆ, ಆದರ್ಶಗಳೇ ನನಗೆ ಮಾರ್ಗದರ್ಶಿ. ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ವಾತಾವರಣವನ್ನು ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ, ಸಂವಾದಗಳು ನಡೆಯಬೇಕು. ವಿವಿಯನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಕೇಂದ್ರಿತವನ್ನಾಗಿಸಿ ಮುಕ್ತ ಮತ್ತು ನಿರ್ಭಿಡೆಯ ವಾತಾವರಣ ನಿರ್ಮಿಸುವುದರತ್ತ ಗಮನಹರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಯ ನಿಕಟಪೂರ್ವ ಪ್ರಭಾರ ಕುಲಪತಿ ಪ್ರೊ. ಎಸ್ ವಿ ಕೃಷ್ಣಮೂರ್ತಿ, ಕುಲಸಚಿವ ಎ ಎಲ್ ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್ ಎಂ ಗೋಪಿನಾಥ್, ಹಣಕಾಸು ಅಧಿಕಾರಿ ಜಿ. ಬಂಗಾರಪ್ಪ, ಪ್ರೊ. ಗುರುಲಿಂಗಯ್ಯ, ಡಾ. ಸತ್ಯಪ್ರಕಾಶ್. ಎಂ. ಆರ್ ಮತ್ತಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post