ಪೂರ್ವದಲ್ಲಿ ಉದಯಿಸಿದ ಸೂರ್ಯ ಪ್ರಪಂಚಕ್ಕೆ ಸ್ಪೂರ್ತಿಯ ಬೆಳಕನ್ನು ನೀಡಿ ಪಶ್ಚಿಮದಲ್ಲಿ ಅಸ್ತಮಿಸಿ ತನ್ನ ಇರುವಿಕೆಯ ಪ್ರತಿಕ್ಷಣ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿ ಇರುತ್ತಾನೆ. ಅದೇ ರೀತಿ ಮನುಷ್ಯನ ಜೀವನ. ಪ್ರತಿ ಮನೆಯಲ್ಲೂ ಜನಿಸಿದ ಮಕ್ಕಳೂ ತನ್ನ ಬೆಳವಣಿಗೆಯ ಪ್ರತಿಹಂತದಲ್ಲೂ ಮನೆಯ ಮತ್ತು ಸಮಾಜದ ಗುರು ಹಿರಿಯರ ಮನಸ್ಸಿನಲ್ಲಿ ತನ್ನ ಪ್ರತಿಭೆ, ಸಚ್ಚಾರಿತ್ರ್ಯ, ಒಳ್ಳೆಯ ಗುಣ ನಡತೆಯ ಮೂಲಕ ಮನೆಗೆ ಮತ್ತು ತಾನು ಬೆಳೆದ ಸಮಾಜಕ್ಕೆ ಸ್ಪೂರ್ತಿಯ ಬೆಳಕಾಗಿ ಹೊರಹೊಮ್ಮಬೇಕು ಎಂಬುವುದು ಪ್ರತಿ ತಂದೆ ತಾಯಿಯರ ಆಶಯವಾಗಿರುತ್ತದೆ.
ಅದೇ ರೀತಿ ಸಾಧನೆಯ ಹಂಬಲವಿರುವ ಮತ್ತು ತನ್ನ ಹುಟ್ಟಿನಲ್ಲೇ ಕಲೆಯನ್ನು ಮೈಗೂಡಿಸಿಕೊಂಡಿರುವ, ಅಣ್ಣನ ಆಸೆ ಮತ್ತು ನಿರೀಕ್ಷೆ ಎಂಬ ಪುಟ್ಟ ವೃಕ್ಷಗಳಿಗೆ ತನ್ನ ಸಾಧನೆ ಮತ್ತು ಛಲವೆಂಬ ನೀರನ್ನು ಎರೆದು ನೃತ್ಯ ಮತ್ತು ರೂಪದರ್ಶಿ(ಮಾಡೆಲಿಂಗ್) ಕ್ಷೇತ್ರದಲ್ಲಿ ಅಮೋಘ ಸಾಧನೆಯೆಂಬ ಬೃಹದಾಕಾರದ ವೃಕ್ಷವಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಪ್ರತಿಭೆ ನಾನು ಇಂದು ನಿಮಗೆ ಪರಿಚಯಿಸುತ್ತಿರುವ ಉಡುಪಿಯ ಸ್ಪೂರ್ತಿ ಶೆಟ್ಟಿ.

ಮನೆಯೇ ಮೊದಲ ಪಾಠ ಶಾಲೆ ಎಂಬ ಗಾದೆ ಮಾತಿನಂತೆ ತನ್ನ ದೊಡ್ಡ ಅಮ್ಮನ ಮಗ ನೃತ್ಯಗುರು ಅಣ್ಣಮಂಜಿತ್ ಶೆಟ್ಟಿ ಮನೆಯಲ್ಲೇ ದೊರೆತಿರುವುದು ಇವಳ ಅದೃಷ್ಟದ ಜೊತೆಗೆ ಅಣ್ಣನೇ ಇವಳ ನಿರ್ದೇಶಕ ಮತ್ತು ಇವಳ ನಿಜವಾದ ಸ್ಪೂರ್ತಿ.

ಕಠಿಣ ಪರಿಶ್ರಮ ಪಡುವ ವ್ಯಕ್ತಿಗೆ ಯೋಗದ ಜೊತೆ ಜೊತೆಯಲ್ಲಿ ಯೋಗ್ಯತೆಯೂ ತನ್ನಿಂದ ತಾನೇ ಲಭಿಸುತ್ತದೆಯಂತೆ. ಅದರಂತೆ ಇತ್ತೀಚಿಗೆ ಇವಳನ್ನು ಆಕರ್ಷಿಸಿದ ಇನ್ನೊಂದು ಕ್ಷೇತ್ರ ಮಾಡಲಿಂಗ್(ರೂಪದರ್ಶಿ). ಮಾಡಲಿಂಗ್’ಗೆ ಬೇಕಾದ ಶರೀರ, ಬಣ್ಣ, ಎತ್ತರ ಇವಳಿಗಿದೆ. ಅಲ್ಲದೇ ಆಧುನಿಕ ಉಡುಗೆ ತೊಡುಗೆ ಇವಳಿಗೆ ಚೆನ್ನಾಗಿ ಹೊಂದುತ್ತದೆ. ಕಳೆದ ವರ್ಷ ನಡೆದ ಮಿಸ್ ಟೀನ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತಳಾಗಿ ದೆಹಲಿಯಲ್ಲಿ ನಡೆದ ಮಿಸ್ ಟೀನ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸ್ ಟಾಲೆಂಟೆಡ್ ಎಂದು ಪುರಸ್ಕೃತಳಾಗಿದ್ದಾಳೆ. ಜೊತೆಗೆ ಈ ಬಾರಿ ಹೈದರಾಬಾದ್’ನಲ್ಲಿ ನಡೆದ ಟಾಪ್ ಮಾಡೆಲ್ ಇಂಡಿಯಾ 2019 ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಜೊತೆಗೆ ಬೆಸ್ಟ್ ರಾಂಪ್ ವಾಕಿಂಗ್ ಪ್ರಶಸ್ತಿಯನ್ನೂ ಪಡೆದಿರುತ್ತಾಳೆ.


ಪ್ರಶಾಂತವಾದ ಕರಾವಳಿಯ ಈ ಭವ್ಯ ಸೊಬಗನಲ್ಲಿ ಜನಿಸಿದ ಪ್ರತಿಯೊಂದು ವ್ಯಕ್ತಿಯೂ ಭಾಗ್ಯವಂತನೇ. ಇಲ್ಲಿಯ ಮಣ್ಣಿನ ಕಣ ಕಣದಲ್ಲೂ ಸಾಂಸ್ಕೃತಿಕ ವೈಭವದ ಶ್ರೇಷ್ಠತೆಯನ್ನು ಹೊಂದಿದೆ ಮತ್ತು ಈ ಜಗತ್ತಿಗೆ ಅದೆಷ್ಟೋ ಪ್ರತಿಭೆಗಳನ್ನು ಸಾಧಕರನ್ನು ನೀಡಿದ ಪುಣ್ಯ ಭೂಮಿ ಇದು. ಪೊಡವಿಗೆ ಒಡೆಯ ಶ್ರೀ ಕೃಷ್ಣನ ಪುಣ್ಯ ಮಡಿಲಲ್ಲಿ ಜನಿಸಿದ ಈಕೆಗೆ ಭಗವಂತನ ಆಶೀರ್ವಾದದ ಜೊತೆಗೆ ಹೆತ್ತ ತಂದೆ ತಾಯಿ ಅಣ್ಣ ಬಂಧು ಬಳಗ, ಗುರು ಹಿರಿಯರ ಮಾರ್ಗದರ್ಶನ ಜೀವನ ಪೂರ್ತಿ ದೊರೆಯಿತು ಸ್ಪೂರ್ತಿಯ ಬೆಳಕಾಗಿ ಇನ್ನಷ್ಟು ಸಾಧನೆಗೆ ಈ ಲೇಖನ ಪ್ರೇರಣೆಯಾಗಲಿ ಎಂಬ ಅಭಿಲಾಷೆಯೊಂದಿಗೆ.












Discussion about this post