ಶಿಕಾರಿಪುರ: ವಿವಿಧ ಮೂಲಗಳಿಂದ ಪಟ್ಟಣದ ಪುರಸಭೆ ಪ್ರಸಕ್ತ ಸಾಲಿನಲ್ಲಿ 9.42 ಕೋಟಿ ಅಂದಾಜು ಆದಾಯ ಸಂಗ್ರಹಿಸಿ 9.22 ಕೋಟಿ ಯನ್ನು ವಿವಿಧ ಅಭಿವೃದ್ದಿ ಕಾಮಗಾರಿಗೆ ವಿನಿಯೋಗಿಸಿ 19.70 ಲಕ್ಷ ಉಳಿತಾಯದ ಬಜೆಟನ್ನು ಪುರಸಭಾಧ್ಯಕ್ಷೆ ಪದ್ಮಾ ಗಜೇಂದ್ರ ಮಂಡಿಸಿದರು.
ಪುರಸಭೆಯ ಸಭಾಂಗಣದಲ್ಲಿ ನಡೆದ 2019-20 ನೆಯ ಸಾಲಿನ ಬಜೆಟ್ ಮಂಡಿಸಿದ ಪುರಸಭಾಧ್ಯಕ್ಷೆ ಪದ್ಮಾ, ಸರ್ಕಾರದ ಅನುದಾನ, ಸಿಬ್ಬಂದಿ ವೇತನ, ಎಸ್‌ಟಿಪಿ ಟಿಎಸ್‌ಪಿ, ಸ್ಥಳೀಯ ವಾಣಿಜ್ಯ ಮಳಿಗೆ, ಕರ ಸಂಗ್ರಹ ಮತ್ತಿತರ ವಿವಿಧ ಮೂಲಗಳಿಂದ ಪ್ರಸಕ್ತ ಸಾಲಿನಲ್ಲಿ ಅಂದಾಜು 9.42 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ರಸ್ತೆ, ಕಲ್ಲುಹಾಸು, ಪಾದಚಾರಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ದುರಸ್ತಿಗೆ 3 ಕೋಟಿ, ಬೀದಿ ದೀಪ ನಿರ್ವಹಣೆ ಹಾಗೂ ದುರಸ್ತಿಗೆ 66 ಲಕ್ಷ, ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕಾಗಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ 12 ಲಕ್ಷ, ನೈರ್ಮಲ್ಯ ಘನ ತ್ಯಾಜ್ಯ ವಸ್ತು ನಿರ್ವಹಣೆ ಯಂತ್ರೋಪಕರಣ ಇತರೆ ಸ್ಥಿರಾಸ್ತಿಗಳಿಗೆ 1 ಕೋಟಿ, ನೀರು ಸರಬರಾಜು ಮತ್ತಿತರ ಅಗತ್ಯ ನಾಗರಿಕ ಸೌಲಭ್ಯಕ್ಕಾಗಿ 1.80 ಕೋಟಿ, ಉದ್ಯಾನವನ ತೋಟ ನಿರ್ವಹಣೆಗೆ 45 ಲಕ್ಷ, ನಗರ ಬಡನತ ನಿರ್ಮೂಲನೆ ಮತ್ತು ಸಮಾಜ ಕಲ್ಯಾಣ, ಪ.ಜಾತಿ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಯೋಜನೆಯಡಿ ಸಮುದಾಯ ಭವನ, ಕಾಂಪೌಂಡ್ ನಿರ್ಮಾಣಕ್ಕೆ 40 ಲಕ್ಷ ಸಹಿತ 9.22 ಕೋಟಿ ಹಣವನ್ನು ವಿನಿಯೋಗಿಸಿ ಅಂದಾಜು 19.70 ಲಕ್ಷ ಉಳಿತಾಯದ ಗುರಿಯನ್ನು ಹೊಂದಲಾಗಿದೆ ಎಂದು ಘೋಷಿಸಿದರು.
ಪಟ್ಟಣದ ವಿವಿದೆಡೆ ಚರಂಡಿ ಭರ್ತಿಯಾಗಿ ಮ್ಯಾನ್‌ಹೋಲ್’ಗಳಿಂದ ತ್ಯಾಜ್ಯ ರಸ್ತೆಯಲ್ಲಿ ಹರಿಯುತ್ತಿದ್ದು ಈ ಬಗ್ಗೆ ಸಂಬಂದಿಸಿದ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದರೆ ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ನಾಗರಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗಿದೆ ಎಂದು ಸದಸ್ಯ ನಾಗರಾಜಗೌಡ ಆರೋಪಿಸಿ ತುರ್ತು ಅಗತ್ಯ ಕಾಮಗಾರಿ ಬಗ್ಗೆ ಟೆಂಡರ್ ಮತ್ತಿತರ ನೆಪ ಹೇಳದಂತೆ ತಾಕೀತು ಮಾಡಿ ಕ್ರಮ ಕೈಗೊಳ್ಳಲು ಅಸಾದ್ಯವಾದಲ್ಲಿ ಮ್ಯಾನ್‌ಹೋಲ್‌ಗಳನ್ನು ಖಾಯಂ ಮುಚ್ಚುವಂತೆ ಸಲಹೆ ನೀಡಿದರು.
ಕೂಡಲೇ ಮುಖ್ಯಾಧಿಕಾರಿ ಸುರೇಶ್ ಮ್ಯಾನ್‌ಹೋಲ್ ಹಾಳಾದ ಬಗ್ಗೆ ಫೋಟೋ ತೆಗೆದು ಸಂಬಂದಿಸಿದ ಇಲಾಖೆಯ ಎಇಇ ಗೆ ರವಾನಿಸಿ ಕೂಡಲೇ ಸರಿಪಡಿಸುವುದಾಗಿ ಬರವಸೆ ನೀಡಿದರು.
ಬೇಸಿಗೆ ಆರಂಭವಾಗುತ್ತಿದ್ದು ಈಗಾಗಲೇ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ ಕೂಡಲೇ ಮುಖ್ಯ ಪೈಪ್‌ನಲ್ಲಿ ದುರಸ್ತಿ, ಮುಚ್ಚಳ ಮತ್ತಿತರ ಸಮಸ್ಯೆ ಬಗ್ಗೆ ಹೆಚ್ಚಿನ ನಿಗಾವಹಿಸಿ ಜನತೆ ನೀರಿನ ತೊಂದರೆಯಿಂದ ಬಳಲದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸದಸ್ಯ ರವಿ ದೂಪದಹಳ್ಳಿ ಸೂಚಿಸಿದರು.
ಪಟ್ಟಣದ ಹಲವೆಡೆ ಭೂಗತ ವಿದ್ಯುತ್ ತಂತಿ ಅಳವಡಿಕೆ ಕಾಮಗಾರಿಗೆ ಪುರಸಭೆಯ ಗಮನಕ್ಕೆ ಬಾರದಂತೆ ಕಾಂಕ್ರೀಟ್ ರಸ್ತೆ, ಇಂಟರ್‌ಲಾಕ್ ಟೈಲ್ಸ್ ಕಿತ್ತುಹಾಕಿ ಸಂಬಂದಿಸಿದ ಏಜೆನ್ಸಿ ಕೋಟ್ಯಾಂತರ ಆಸ್ತಿಯನ್ನು ಹಾಳುಗೆಡವಿದ್ದಾರೆ. ಅರೆಬರೆ ಕಾಮಗಾರಿಯಿಂದಾಗಿ ಜನತೆ ತೀವ್ರವಾಗಿ ಪರಿತಪಿಸುವಂತಾಗಿದೆ ಈ ಬಗ್ಗೆ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಮೆಸ್ಕಾಂ ಹಾಗೂ ಏಜೆನ್ಸಿ ಮಾಲಿಕರನ್ನು ಕರೆಯಿಸಿ ಎಚ್ಚರಿಕೆಯನ್ನು ನೀಡುವಂತೆ ಸದಸ್ಯ ಮಹೇಶ್ ಹುಲ್ಮಾರ್, ನಾಗರಾಜ ಗೌಡ ಮತ್ತಿತರು ಆಗ್ರಹಿಸಿದಾಗ ಏಜೆನ್ಸಿ ಮಾಲಿಕ ಪುರಸಭೆಯ ಸದಸ್ಯರಿಗೆ ಲಕ್ಷಾಂತರ ಹಣ ನೀಡಿ ಕಾಮಗಾರಿಯನ್ನು ವಹಿಸಿಕೊಂಡಿರುವುದಾಗಿ ಸದಸ್ಯರ ಗೌರವಕ್ಕೆ ಚ್ಯುತಿ ತಂದಿದ್ದಾರೆ ಕೂಡಲೇ ಸಭೆಗೆ ಕರೆಯಿಸಿ ನಿಖರವಾದ ಮಾಹಿತಿಯನ್ನು ಪಡೆದು ಸತ್ಯ ಸಂಗತಿಯನ್ನು ಬಹಿರಂಗಪಡಿಸುವಂತೆ ಸದಸ್ಯ ಗೋಣಿ ಮಾಲತೇಶ್, ಟಿ.ಎಸ್ ಮೋಹನ್ ಮತ್ತಿತರರು ಪಟ್ಟು ಹಿಡಿದರು. ಮುಖ್ಯಾಧಿಕಾರಿ ಸುರೇಶ್ ಏಜೆನ್ಸಿ ಮಾಲಿಕರು, ಮೆಸ್ಕಾಂ ಎಇಇ ಅವರನ್ನು ಕರೆಯಿಸಿ ಸಮಜಾಯಿಷಿ ಪಡೆಯುವುದಾಗಿ ಭರವಸೆ ನೀಡಿದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕಾಗಿ ಪುರಸಭೆಯ ಹಲವು ವಾಣಿಜ್ಯ ಮಳಿಗೆಗಳನ್ನು ಖಾಲಿಗೊಳಿಸಿ ಮುಂಗಡ ಹಣ ವಾಪಾಸು ನೀಡದಿರುವುದರಿಂದ ಹಲವರು ತೀವ್ರ ತೊಂದರೆಗೊಳಗಾಗಿದ್ದಾರೆ ಎಂದು ಸದಸ್ಯೆ ರೂಪಕಲಾ ಹೆಗ್ಡೆ ಸಭೆಯ ಗಮನ ಸೆಳೆದಾಗ ಮುಖ್ಯಾಧಿಕಾರಿ, ಹಲವರು ಮುಂಗಡ ಹಣಕ್ಕಿಂತ ಅಧಿಕ ಬಾಡಿಗೆ ಬಾಕಿ ಉಳಿಸಿಕೊಂಡಿದ್ದು ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅಂಗಡಿ ಪರವಾನಿಗೆ ನವೀಕರಣ ಬಗ್ಗೆ ಸಂಬಂದಿಸಿದ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದು ಇದರಿಂದಾಗಿ 1.5 ಸಾವಿರಕ್ಕಿಂತ ಅಧಿಕವಾಗಿರುವ ಅಂಗಡಿಗಳಲ್ಲಿ ಕೇವಲ 625 ಅಂಗಡಿಗಳಲ್ಲಿ ಮಾತ್ರ ಕರ ಸಂಗ್ರಹಿಸಲಾಗುತ್ತಿದೆ ಎಂದು ಸದಸ್ಯ ಪಾಲಾಕ್ಷಪ್ಪ ಆರೋಪಿಸಿ ತುರ್ತು ಕ್ರಮದ ಮೂಲಕ ಪುರಸಭೆಯ ಆದಾಯ ಹೆಚ್ಚಳಕ್ಕೆ ನಿಗಾವಹಿಸುವಂತೆ ತಿಳಿಸಿದರು.
ಯೋಧರ ಕುಟುಂಬದ ಕಲ್ಯಾಣ ನಿಧಿಗೆ ಬಾಕಿಯುಳಿದ ಅವಧಿಯ ಸದಸ್ಯರ ವೇತನವನ್ನು ಹಸ್ತಾಂತರಿಸಲು ಸಭೆಯಲ್ಲಿ ಸದಸ್ಯ ಟಿ.ಎಸ್. ಮೋಹನ್ ಮನವಿಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಸದಸ್ಯ ಎಲ್ಲಪ್ಪ, ಮಧು, ನಿಜಲಿಂಗಪ್ಪ, ಅಂಗಡಿ ಜಗದೀಶ, ಸೈಯದ್‌ಪೀರ್, ರತ್ನಮ್ಮ, ಶಭಾನಾ ಭಾನು, ವೀಣಾ, ಜಬೀನಾ, ಗೌರಮ್ಮ, ಫಯಾಜ್, ಸಂಗಮೇಶ್ ಮತ್ತಿತರರು ಉಪಸ್ಥಿತರಿದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post