ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕಲ್ಮನೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, #Keladi Shivappanayaka VV ಇರುವಕ್ಕಿ, ಶಿವಮೊಗ್ಗದ ಬಿ.ಎಸ್ಸಿ ಕೃಷಿ (ಹಾನರ್ಸ್) ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ, ಪ್ರೌಢಶಾಲೆಯ ಬಲಭಾಗದಲ್ಲಿ ಬೆಳೆ ಸಂಗ್ರಹಾಲಯ ವನ್ನು ಅತ್ಯಂತ ಸಡಗರ ಹಾಗೂ ವಿಜ್ಞಾನಾತ್ಮಕ ವಿನ್ಯಾಸದೊಂದಿಗೆ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಗ್ರಾಮೀಣ ಕೃಷಿಗೆ ಹೊಸ ದಿಕ್ಕು ತೋರಿಸುವ ಉದ್ದೇಶದಿಂದ ‘ಕೃಷಿ ಲೋಕ’ ಎಂಬ ವಿನೂತನ ಕಲ್ಪನೆಯಡಿ ವಿವಿಧ ಬೆಳೆಗಳ ಮತ್ತು ಪದ್ಧತಿಗಳ ಪ್ರಾತ್ಯಕ್ಷಿಕೆಯನ್ನು ರೂಪಿಸಿದ್ದರು. ಈ ಬೆಳೆ ಸಂಗ್ರಹಾಲಯದಲ್ಲಿ ರೈತರಿಗೆ ಉಪಯುಕ್ತವಾಗುವಂತೆ ಪ್ರತ್ಯೇಕ ಬ್ಲಾಕ್‌ಗಳನ್ನು ನಿರ್ಮಿಸಿ, ವೈವಿಧ್ಯಮಯ ಬೆಳೆಗಳನ್ನು ಬೆಳೆಸಿ ಪ್ರದರ್ಶಿಸಲಾಯಿತು.
ಇಲ್ಲಿ ಸಿರಿಧಾನ್ಯಗಳ ಬ್ಲಾಕ್, ಎಣ್ಣೆಬೀಜಗಳ ಬ್ಲಾಕ್, ಕಾಳುಬೆಳೆಗಳ ಬ್ಲಾಕ್, ಧಾನ್ಯಗಳ ಬ್ಲಾಕ್, ಮೇವು ಬೆಳೆಗಳ ಬ್ಲಾಕ್ ಹಾಗೂ ತರಕಾರಿ ಬೆಳೆಗಳ ಬ್ಲಾಕ್ಗಳನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿತ್ತು. ಪ್ರತಿಯೊಂದು ಬ್ಲಾಕ್‌ನಲ್ಲೂ ಬೆಳೆಗಳ ವೈಶಿಷ್ಟ್ಯ, ಬೆಳೆಯುವ ವಿಧಾನ, ಲಾಭಗಳು ಹಾಗೂ ರೈತರಿಗೆ ದೊರೆಯುವ ಆರ್ಥಿಕ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸಮಗ್ರ ಕೃಷಿ ಪದ್ಧತಿ ಅನ್ನು ಪ್ರಾತ್ಯಕ್ಷಿಕವಾಗಿ ಪ್ರದರ್ಶಿಸಲಾಯಿತು. ಇದರಡಿ ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ,ಅಡಿಕೆ ಸಿಪ್ಪೆ ಗೊಬ್ಬರದ ತೊಟ್ಟಿ, ಅಜೋಲಾ ಹೊಂಡ,ಅಡಿಕೆ ತೋಟದಲ್ಲಿ ಅಂತರಬೆಳೆ, ತರಕಾರಿ ತೋಟ ಮತ್ತು ಮೇವಿನ ಬೆಳೆಗಳ ತೋಟಗಳನ್ನು ಸಮನ್ವಯಗೊಳಿಸಿ, ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಪಡೆಯುವ ಮಾದರಿಯನ್ನು ರೈತರಿಗೆ ಪರಿಚಯಿಸಲಾಯಿತು.
ಈ ಬೆಳೆ ಸಂಗ್ರಹಾಲಯವನ್ನು ಹಿತ್ತಲ ಸೊಸೈಟಿ ಅಧ್ಯಕ್ಷರಾದ ಸುರೇಶ್ ಗುಡ್ಡಳ್ಳಿ ಹಾಗೂ ಸಂಯೋಜಕರಾದ ಡಾ. ಸಹನಾ ಎಸ್. ಅವರು ಉದ್ಘಾಟಿಸಿ, ವಿದ್ಯಾರ್ಥಿಗಳ ಶ್ರಮ ಹಾಗೂ ಕೃಷಿ ಶಿಕ್ಷಣವನ್ನು ಪ್ರಾಯೋಗಿಕವಾಗಿ ರೈತರಿಗೆ ತಲುಪಿಸುವ ಇಂತಹ ಕಾರ್ಯಕ್ರಮಗಳು ಗ್ರಾಮೀಣ ಅಭಿವೃದ್ಧಿಗೆ ಅತ್ಯಂತ ಅಗತ್ಯವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ. ಹೊನ್ನಪ್ಪ ಹೆಚ್.ಎಂ., ಡಾ. ಕಿರಣ್ ಕುಮಾರ್ ಪಾಟೀಲ, ಡಾ. ಪ್ರದೀಪ್ ಕುಮಾರ್ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಮಾರ್ಗದರ್ಶನ ನೀಡಿದರು.
ಗ್ರಾಮದ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಬೆಳೆ ಸಂಗ್ರಹಾಲಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಜ್ಞಾನ, ರೈತರ ಅನುಭವ ಮತ್ತು ವಿಜ್ಞಾನಾತ್ಮಕ ಕೃಷಿಯ ಸಮನ್ವಯಕ್ಕೆ ಉತ್ತಮ ವೇದಿಕೆಯಾಯಿತು ಎಂದು ಪ್ರಶಂಸಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















