ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಂತ್ರಜ್ಞಾನವನ್ನು ವಿದ್ಯಾರ್ಥಿಗಳ ಮೂಲಕ ರೈತರಿಗೆ ತಲುಪಿಸುವುದು ಈ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗದ ವಿಸ್ತರಣಾ ನಿರ್ದೇಶಕ ಡಾ. ಜಿ. ಕೆ. ಗಿರಿಜೇಶ್ ಹೇಳಿದರು.
ಶಿಕಾರಿಪುರ ತಾಲೂಕು, ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಕೃಷಿ ಸಿಂಚನ ತಂಡದ ಮಾಹಿತಿ ಕೇಂದ್ರ ಮತ್ತು ಕೈತೋಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಆರ್ಥಿಕತೆಯ ಮೂಲ ಕೃಷಿ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಕೃಷಿ , ಇಂದು ಪರಂಪರೆ ಹಾಗೂ ವಿಜ್ಞಾನ ಎರಡನ್ನು ಹೊತ್ತಿರುವ ಕ್ಷೇತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಮುಂತಾದ ಆಧುನಿಕ ತಂತ್ರಜ್ಞಾನಗಳು ಬರುತ್ತವೆ. ಆದರೆ ಅವೆಲ್ಲವೂ ರೈತರಿಗೆ ತಲುಪುತ್ತಿಲ್ಲ ಅದರ ಸಲುವಾಗಿ ಈ ತಂತ್ರಜ್ಞಾನವನ್ನು ವಿದ್ಯಾರ್ಥಿಗಳ ಮೂಲಕ ರೈತರಿಗೆ ತಲುಪಿಸುವುದು ಈ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಡಾ. ನಾರಾಯಣ್. ಎಸ್. ಮಾವರ್ಕರ್ ಮಾತನಾಡಿ, ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮವು ಕೃಷಿ ಪದವಿಯ ಪ್ರಮುಖ ಹಂತವಾಗಿದ್ದು, ಇಲ್ಲಿ ವಿದ್ಯಾರ್ಥಿಗಳ ಗ್ರಾಮೀಣ ಜೀವನ, ರೈತರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಳ್ಳಲು ಇದೊಂದು ಅದ್ಭುತ ಅವಕಾಶವಾಗಿದೆ ಎಂದರು.
ನಂತರ ಅಧ್ಯಕ್ಷೀಯ ಭಾಷಣ ಮಾಡಿದ ಚುರ್ಚುಗುಂಡಿ ಗ್ರಾಮ ಪಂಚಾಯಿತಿಯ ಸದಸ್ಯ ಚಂದ್ರಪ್ಪ ಮಾತನಾಡಿ, ಕೃಷಿ ವಿದ್ಯಾರ್ಥಿಗಳು ಮಾಡಿರುವ ಮಾಹಿತಿ ಕೇಂದ್ರ ಮತ್ತು ಕೈತೋಟ ಬಹಳ ಚೆನ್ನಾಗಿದ್ದು,ರೈತರಿಗೆ ಎಲ್ಲಾ ರೀತಿಯ ಕೃಷಿ ಸಂಬಂಧಿತ ಮಾಹಿತಿ ದೊರೆಯುತ್ತದೆ ಅದಕ್ಕಾಗಿ ಎಲ್ಲಾ ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮತ್ತು ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕರು ಹಾಗೂ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಸಂಯೋಜಕರಾದ ಡಾ. ಸಹನಾ ರವರು ವಿದ್ಯಾರ್ಥಿಗಳು ನಡೆಸಿಕೊಡುವ ಎಲ್ಲಾ ಕೃಷಿ ಸಂಬಂಧಿತ ಕಾರ್ಯಕ್ರಮಗಳಿಗೆ ರೈತರು ಹೀಗೆ ಸಹಕಾರ ಮಾಡಬೇಕೆಂದು ಹಾಗೂ ತಮ್ಮಲ್ಲಿರುವ ಕೃಷಿಯ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕೆಂದು ರೈತರಿಗೆ ತಿಳಿಸಿದರು.
ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಶ್ರೀ.ಎಸ್.ಟಿ.ವೀರೇಶ್ ರವರು ಮಾತನಾಡಿ ವಿದ್ಯಾರ್ಥಿಗಳು ಗ್ರಾಮದಲ್ಲಿ ಮಾಡಿರುವ ಮಾಹಿತಿ ಕೇಂದ್ರ ಕೈತೋಟ ರೈತರಿಗೆ ಅತ್ಯಂತ ಮಾಹಿತಿಯುಕ್ತವಾಗಿದೆ ಎಂದು ಹೇಳಿದರು ಗ್ರಾಮದ ರೈತರದ ಶ್ರೀ ರವಿ ಮತ್ತು ಶಾಂತಪ್ಪ ರವರು ತಮ್ಮ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಹ ಸಂಯೋಜಕರಾದ ಡಾ. ಕಿರಣ್ ಪಾಟೀಲ್ ಮತ್ತು ಡಾ. ಪ್ರದೀಪ್ ಹಾಗೂ ಗ್ರಾಮಸ್ಥರಾದ ಭೂದಪ್ಪ ,ಯೋಗೇಶಪ್ಪ, ಹೇಮಾ ಕೊಟ್ರೇಶ್, ಹರೀಶಪ್ಪ, ಲೋಕೇಶ್ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















