ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಮಾನವ ಹಾಗೂ ಭವ್ಯ ಭಾರತ ನಿರ್ಮಾಣ ಇಂದಿನ ಶಿಕ್ಷಣದ ಪ್ರಮುಖ ಆಶಯವಾಗಿದ್ದು, ಜಾಗತಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಲ್ಲಿ ಶಿಕ್ಷಣದ ಪಾತ್ರ ಮಹತ್ವವಾಗಿದೆ ಎಂದು ಶಿವಮೊಗ್ಗ ಕ್ಷೇತ್ರದ ಸಂಸದರು ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವೈ. ರಾಘವೇಂದ್ರರವರು ಹೇಳಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಎಲ್ಲಾ ಅಂಗಸಂಸ್ಥೆಗಳಾದ ಸಂಯುಕ್ತಾಶ್ರಯದಲ್ಲಿ ನಡೆದ ಕುಮದ್ವತಿ ಸಾಂಸ್ಕೃತಿಕ ಉತ್ಸವ-2025 ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾರುವ ಹಕ್ಕಿಗೆ ರೆಕ್ಕೆ ಹೇಗೆ ಮುಖ್ಯವೋ ಹಾಗೇ ಮೌಲ್ಯ ಮತ್ತು ಶಿಕ್ಷಣ ಅಷ್ಟೇ ಮುಖ್ಯವಾಗಿದೆ. ಮನೆ ಹಾಗೂ ಶಾಲೆಯು ಜೊತೆಗೆ ಕೈಜೊಡಿಸಿದಾಗ ಮಾತ್ರ ವಿದ್ಯಾರ್ಥಿಗಳ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳನ್ನು ಕೇವಲ ಅಂಕಗಳಿಗೆ ಸಿಮೀತಗೊಳಿಸದೇ ಕೌಶಲ್ಯಭರಿತರನ್ನಾಗಿ ರೂಪಿಸುವಲ್ಲಿ ಗಮನಹರಿಸಬೇಕಿದೆ. ಬದಲಾಗುತ್ತಿರುವ ವಿಜ್ಞಾನದ ಕ್ರಾಂತಿಗನುಗುಣವಾಗಿ ನಮ್ಮ ಸಂಸ್ಥೆ ದೇಶದ ಉತ್ತಮ ಪ್ರಜೆಗಳ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಪ್ರತಿನಿಧಿಗಳು ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಜಿ.ಎಸ್. ಶಿವಕುಮಾರ್ ಅವರು ವರದಿಯನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಶಿಕಾರಿಪುರದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಾಮಟ್ಟದ ಶಿಕ್ಷಣವನ್ನು ನೀಡಲು ಸಂಸ್ಥೆಯನ್ನು ಕಟ್ಟಿ ಬೆಳಸಿ, ಮೂವತ್ತು ವರ್ಷಗಳಿಂದಲೂ ಉತ್ತಮ ಶಿಕ್ಷಣವನ್ನು ನೀಡಲು ಕಾರಣೀಭೂತರಾದ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರಿಗೆ ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿವಿಧ ಅಂಗ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ. ಶಿವಕುಮಾರ್, ನಿರ್ದೇಶಕರಾದ ತೇಜಸ್ವಿನಿ ರಾಘವೇಂದ್ರ, ಜಾನ್ಸಿಕೀಯ ಸಂಸ್ಥೆಯ ಮುಖ್ಯಸ್ಥರಾದ ಬಿ.ಆರ್. ಸುಭಾಷ್, ಶ್ರವಣಾ, ಬಿ.ಆರ್. ಭಗತ್, ಸಂಸ್ಥೆಯ ಆಡಳಿತ ಸಮನ್ವಯಾಧಿಕಾರಿ ಕೆ. ಕುಬೇರಪ್ಪ, ಗುರುಮೂರ್ತಿ ಹಾಗೂ ಎಲ್ಲಾ ಅಂಗ ಸಂಸ್ಥೆಯ ಮುಖ್ಯಸ್ಥರು, ಪ್ರಾಚಾರ್ಯರು, ಬೋಧಕ, ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಕೆಆರ್’ಸಿಎಸ್ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕಿ ಆರೀಫಾ ಸ್ವಾಗತಿಸಿದರು. ಕಾವ್ಯ ವಂದಿಸಿ, ಸಂಗೀತಾ ಗೊಂದಿ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















