ಕಲ್ಪ ಮೀಡಿಯಾ ಹೌಸ್
ಶಿಕಾರಿಪುರ: ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳಲಾಗುತ್ತಿದೆ ಇಂತಹಾ ದೇವರ ಕೆಲಸ ಮಾಡಲು ಸುಸಜ್ಜಿತ ಕಟ್ಟಡವನ್ನು ಹೊಂದಿರುವ ದೇವಾಲಯ ನಿರ್ಮಾಣ ಮಾಡಿ ಉತ್ತಮ ಸೇವೆ ನೀಡಲು ಅರ್ಚಕರ ರೂಪದಲ್ಲಿ ನೌಕರರಿಗೆ ನೇಮಕ ಮಾಡಿ ಇಲಾಖೆಗಳಿಗೆ ಬರುವಂತಹ ಸಾರ್ವಜನಿಕರ ಅಗತ್ಯವಿರುವ ಕೇಲಸ ಕಾರ್ಯಗಳನ್ನು ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ದೇವಾಲಯಗಳಂತೆ ನಿರ್ಮಾಣ ಮಾಡಲಾಗಿರುವ ಸುಸಜ್ಜಿತ ಕಟ್ಟಡಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಬುದ್ದಿಜೀವಿಗಳಾಗಿರುವ ಅನೇಕ ಅಧಿಕಾರಿಗಳು ಆಡಳಿತ ಸಿಬ್ಬಂದಿಗಳು ವಿಫಲರಾಗಿದ್ದಾರೆ.
ಹೌದು ಪಟ್ಟಣದ ತಾಲ್ಲೂಕು ಕಛೇರಿ ಸಮೀಪದ ಆಡಳಿತ ಸೌಧದಲ್ಲಿ ಇಂತಹ ಒಂದು ಎಡಬಿಡಂಗಿ ಕೆಲಸ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ತಾಲ್ಲೂಕಿನ ರೈತರಿಗೆ ಕೃಷಿ ಕಾರ್ಮಿಕರಿಗೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಕೋಟಿ ರೂಪಾಯಿಗಳ ಅನುದಾನದಡಿ ವಿವಿಧ ಇಲಾಖೆಗಳ ಆಡಳಿತ ಮಂಡಳಿಯನ್ನು ಒಂದೇ ಸೂರಿನಡಿ ತರಲೆಂದು ಭವ್ಯವಾದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿ 2012ರ ಮೇ 5ರಂದು ಇದರ ಉದ್ಘಾಟನೆ ನೆರವೇರಿಸಿದ್ದರು.
ಈ ಕಟ್ಟಡವು ಆರಂಭದಲ್ಲಿ ನೋಡುಗರಿಗೆ ಆಕರ್ಷಕವಾಗಿ ಕಾಣುತ್ತಿತ್ತಾದರೂ, ಕೆಲ ವರ್ಷಗಳ ನಂತರ ಇದರ ಕಳೆ ಕುಂದಲಾರಂಭಿಸಿತು. ಇಲ್ಲಿ ಧೂಮಪಾನ ಮದ್ಯಪಾನ ಹಾಗೂ ವಿವಿಧ ರೀತಿಯ ಅಸಭ್ಯವಾದ ಚಟುವಟಿಕೆಗಳಿಗೆ ಅನುಕೂಲವಾಗುವ ಎಲ್ಲಾ ಲಕ್ಷಣಗಳು ಆರಂಭವಾದವು. ಇಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, ಬುದ್ಧಿ ಜೀವಿಗಳು, ಡಿ ಗ್ರೂಪ್ ಸಿಬ್ಬಂದಿಗಳು ಜರ್ದಾ, ಗುಟ್ಕಾ, ತಾಂಬೂಲ ಪ್ರಿಯರೇ ಹೆಚ್ಚಾಗಿದ್ದು, ಅವರಿಗೆ ತಿಂದಿರುವ ತಾಂಬೂಲಗಳನ್ನು ಹೊರ ಉಗಿಯಲು ಅನೇಕ ಮೆಟ್ಟಿಲುಗಳನ್ನು ಇಳಿದು ಬರಬೇಕಿತ್ತು, ಇದು ಕಷ್ಟಕರವಾದ ಕಾರಣ ಅಲ್ಲಿಯೇ ಹತ್ತಿರದಲ್ಲಿದ್ದ ಗೋಡೆಗಳಿಗೆ, ಶೌಚಾಲಯದ ಬೇಸಿನ್‌ಗಳಲ್ಲಿ ಅಥವಾ ಕಿಟಕಿ ಮೂಲಕ ಉಗುಳುವ ಪದ್ಧತಿ ರೂಢಿಸಿಕೊಂಡರು, ಹಾಗೆಯೇ ಕಛೇರಿ ವೇಳೆಯಲ್ಲಿಯೋ ಅಥವಾ ರಜಾ ದಿನಗಳಲ್ಲಿಯೋ ಇಲ್ಲಿ ಮದ್ಯೆ ಪಾನ ಮಾಡಿ ಬಾಟಲಿ ಅಥವಾ ರ್‍ಯಾಪರ್‌ಗಳನ್ನು ಕಟ್ಟಡದ ಕಿಟಕಿ ಮೂಲಕ ಹೊರಹಾಕಲಾಗುತ್ತಿದೆ.
ಅದೇರೀತಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಂದರ್ಭದಲ್ಲಿ ಬೆಳಿಗ್ಗಿನ ತಿಂಡಿ ತಿನಿಸುಗಳನ್ನು ತಿಂದು ಬಳಕೆ ಮಾಡಿದ ಪ್ಲಾಸ್ಟಿಕ್ ತಟ್ಟೆ, ಟೀ ಕಾಫಿ ಮೊದಲಾದವುಗಳನ್ನು ಕುಡಿದ ಲೋಟಗಳನ್ನು ಸಹ ಕಿಟಕಿ ಮೂಲಕ ಹೊರಹಾಕಲಾಗುತ್ತಿದೆ. ಈ ಕಟ್ಟಡವು ಅಸ್ವಚ್ಚತೆಯಿಂದ, ದುರ್ವಾಸನೆಯಿಂದ ಹಲವು ಸಾಂಕ್ರಾಮಿಕ ರೋಗಗಳನ್ನು ಹರಡುವ ಹಾಗೂ ಅನೇಕ ವೈರಸ್ ಅಥವಾ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುವ ಎಲ್ಲಾ ಲಕ್ಷಣಗಳು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಇಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾಗಿರುವ ಶೌಚಾಲಯಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದ ಪೈಪ್‌ಗಳು ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಹೋಗಿದೆ. ನೀರು ಹರಿಸುವ ಪ್ರಯತ್ನ ಮಾಡಿದರೆ ಎಲ್ಲಾ ನೀರು ಮೇಲಿನಿಂದ ಕೆಳಕ್ಕೆ ಬಿದ್ದು ಹರಿದು ಹೋಗುತ್ತಿದೆ. ಇದರಿಂದ ಇಲ್ಲಿನ ಶೌಚಾಲಯಗಳು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಅಥವಾ ಉಸಿರು ಕಟ್ಟಿಕೊಂಡು ಶೌಚಾಲಯ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಶೌಚಾಲಯಗಳ ಆಸುಪಾಸಿನಲ್ಲಿ ವಿವಿಧ ಇಲಾಖೆಗಳ ಆಡಳಿತ ಮಂಡಳಿಯವರೂ ಸಹ ಮೂಗು ಮುಚ್ಚಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ತಪ್ಪಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಈ ಶೌಚಾಲಯಗಳ ಬಾಗಿಲಿಗೆ ಬೀಗ ಹಾಕಿದ್ದರಿಂದ ಶೌಚಾಲಯಗಳ ಆಸುಪಾಸಿನ ವಿವಿಧ ಇಲಾಖೆಗಳಲ್ಲಿ ದುರ್ವಾಸನೆ ಕಡಿಮೆಯಾಗಿದೆ.
ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿರುವ ಸಂದರ್ಭದಲ್ಲಿಯೇ ಇದರ ಪಕ್ಕದಲ್ಲೇ ಕೂಗಳತೆಯಷ್ಟು ದೂರ ಇರುವ ತಾಲ್ಲೂಕು ಪಂಚಾಯಿತಿ (ಗ್ರಾಮೀಣ ಸೌಧ) ಕಟ್ಟಡ ಕೂಡ ಇದೇ ಸಮಯದಲ್ಲಿ ಉದ್ಘಾಟನೆಯಾಗಿತ್ತು. ತಾಲ್ಲೂಕು ಪಂಚಾಯಿತಿಯ ಕಟ್ಟಡವು ಉತ್ತಮ ಸ್ಥಿತಿಯಲ್ಲಿದ್ದು, ಆದರೆ ಆಡಳಿತ ಸೌಧಾ ಸಂಪೂರ್ಣ ಹದಗೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮೇಂಟೆನೆನ್ಸ್ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ನಂತರ ಅಸ್ವಚ್ಚತೆಯ ಬಗ್ಗೆ ಅನೇಕ ಪತ್ರಿಕೆಗಳಲ್ಲಿ ಹಲವಾರು ಬಾರಿ ಸುದ್ದಿ ಪ್ರಕಟವಾದ ನಂತರ ಇಲ್ಲಿ ಪುರಸಭೆಯಿಂದ ಸ್ವಚ್ಚಗೊಳಿಸಲಾಗಿತ್ತು. ಈಗ ಮತ್ತೆ ಅದೇ ಪರಿಸ್ಥಿತಿ ಬಂದೊದಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ತಾಲ್ಲೂಕು ಕಛೇರಿಯ ತಹಶೀಲ್ದಾರ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ ಎನ್ನಲಾಗುತ್ತಿದೆ.
ಏನೇ ಆದರೂ ಎರಡನೇ ಹಂತದ ಕೊರೋನ ಹಿನ್ನೆಲೆಯ ಈಗಿನ ಪರಿಸ್ಥಿತಿಯಲ್ಲಿ ಇಲ್ಲಿನ ಆಡಳಿತ ಅಧಿಕಾರಿಗಳಾಗಲೀ, ಮೇಲಧಿಕಾರಿಗಳಾಗಲೀ ಈ ಆಡಳಿತ ಸೌಧ ಶುಚಿಗೊಳಿಸಿ ಬಣ್ಣದ ಲೇಪನ ಮಾಡಿಸಿದರೆ ಮುಖ್ಯಮಂತ್ರಿ ಹಾಗೂ ಸಂಸದರ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿದಂತಾಗುತ್ತದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ವಿಶೇಷ ವರದಿ: ರಾಜಾರಾವ್ ಜಾಧವ್, ಶಿಕಾರಿಪುರ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post