ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ. ಪ್ರತಿಯೊಂದು ಮಗುವಿನಲ್ಲಿ ಒಂದೊಂದು ಪ್ರತಿಭೆ ಹುಟ್ಟಿನಿಂದಲೇ ಬಂದಿರುತ್ತದೆ ಅದನ್ನು ಗುರುತಿಸಿ ಅನಾವರಣಗೊಳಿಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರು ಆಗಿರುತ್ತದೆ ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿಗಳಾದ ಡಾ. ಶಿವಕುಮಾರ್ ತಿಳಿಸಿದರು.
ನಗರದ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಮತ್ತು ಕರ್ನಾಟಕ ಸರ್ಕಾರದ ನಿಕಟಪೂರ್ವ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಬಿ.ಎಸ್ . ಯಡಿಯೂರಪ್ಪರವರ ಜನ್ಮದಿನದ ಅಂಗವಾಗಿ ತಾಲ್ಲೂಕು ಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಬರಿ ಪುಸ್ತಕಗಳ ವಾಚನ ಮಾಡಿದರೆ ಸಾಲದು ಅದರ ಜೊತೆ ಜೊತೆಗೆ ಆಟ , ಪ್ರದರ್ಶನ, ಮನರಂಜನೆ ಕೂಡಾ ಮುಖ್ಯವಾದದು. ಪ್ರತಿಯೊಂದು ಮಗುವಿನಲ್ಲೂ ವಿಜ್ಞಾನದ ಅರಿವು ಇದ್ದೆ ಇರುತ್ತದೆ. ಅದನ್ನು ಹೊರಹಾಕುವಂತ ಕೆಲಸವನ್ನು ನಾವೆಲ್ಲರು ಮಾಡಬೇಕು. ಇಂತಹ ಒಂದು ಉತ್ತಮ ಕಾರ್ಯವನ್ನು ಮೈತ್ರಿ ಮತ್ತು ಕುಮದ್ವತಿ ಶಾಲೆಯ ಶಿಕ್ಷಕರು ಮಾಡುತ್ತಿದ್ದಾರೆ. ವಿಜ್ಞಾನ ಎಂಬುದು ಪ್ರತಿಯೊಂದು ಮನೆಯಲ್ಲೂ ಪ್ರತಿಯೊಂದು ವಿಷಯದಲ್ಲು ಇದೆ. ವಿಜ್ಞಾನವಿಲ್ಲದೆ ಏನು ಇಲ್ಲ ಜೀವನ ಮತ್ತು ವಿಜ್ಞಾನ ಒಂದು ನಾಣ್ಯದ ಎರಡು ಮುಖ ಗಳಿದ್ದಂತೆ ಈ ತರಹದ ರಸಪ್ರಶ್ನೆ ಕಾರ್ಯಕ್ರಮ ಮಕ್ಕಳಿಗೆ ಬಹು ಉಪಯೋಗ ಅವರಲ್ಲಿ ಉತ್ಸಕತೆ ಬೆಳೆಯುತ್ತದೆ.ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದೆ ಎಂದರು.
ಇಂದಿನ ಯುವ ಜನತೆ ಸಣ್ಣ ಸಣ್ಣ ಅನ್ವೇಷಣೆ ಮಾಡುವುದರ ಮೂಲಕ ತಮ್ಮಲ್ಲಿರುವ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು.ಮೈತ್ರಿ ಮತ್ತು ಕುಮದ್ವತಿ ಪ್ರೌಢಶಾಲೆ ಯ ವಿದ್ಯಾರ್ಥಿಗಳು ಪ್ರತಿ ವರ್ಷ ಇನ್ಸ್ಪೈರ್ ಅವಾರ್ಡ್ ನಲ್ಲಿ ಆಯ್ಕೆಯಾಗಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಕು.ಮೇಘನ,ಕು.ವಿದ್ಯಾಲಕ್ಷ್ಮೀ ಮತ್ತು ಕು.ಭವಾನಿ .ಪಿ ಈ ವಿದ್ಯಾರ್ಥಿಗಳು 2023-2024ನೆ ಸಾಲಿಗೆ ಆಯ್ಕೆಯಾಗಿದ್ದು ಇವರಿಗೆ ಮತ್ತು ಪ್ರಾಚಾರ್ಯರಿಗೆ , ಶಿಕ್ಷಕರಿಗೆ ಸಂಸ್ಥೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯ ಪ್ರಾಚಾರ್ಯ ವಿಶ್ವನಾಥ ಮಾತನಾಡಿ, ವಿಜ್ಞಾನದ ಹೊಸ ಹೊಸ ಆವಿಷ್ಕಾರವನ್ನು ನಮ್ಮ ತರಗತಿಯಲ್ಲಿ ಎಷ್ಟು ಮಾಡುತ್ತೇವೂ ಅವಾಗ ನಮ್ಮ ವಿದ್ಯಾರ್ಥಿಗಳು ವಿಜ್ಞಾನಿಯಾಗಲು ಒಂದೊಂದೆ ಹೆಜ್ಜೆಯನ್ನು ಇಡಲು ಪ್ರಾರಂಭಿಸುತ್ತಾರೆ. ಹೀಗೆ ಒಂದೊಂದೆ ಮೆಟ್ಟಿಲನ್ನು ಏರುತ್ತಾ ಮುಂದೆ ವಿಜ್ಞಾನಿಯಾಗಿ ಇಲ್ಲವೆ ವಿಜ್ಞಾನದ ವಿಚಾರದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.
ವಿಜ್ಞಾನದ ಬಳಕೆ ಬಹಳ ಮುಖ್ಯವಾಗಿದೆ ಅದನ್ನ ಬೆಳಸಬೇಕು ವಿಜ್ಞಾನವನ್ನು ನಾವು ಎಷ್ಟು ಬೆಳೆಸುತ್ತೇವೊ ಅಷ್ಟೇ ಪರಿಸರದ ಸಮತೋಲನದ ಬಗ್ಗೆ ಅಷ್ಟೇ ಒತ್ತನ್ನು ನೀಡಬೇಕು. ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಬೇಕು. ಪ್ರತಿಯೊಂದು ವಿಜ್ಞಾನದ ಒಳಗೆ ಒಂದು ವೈಜ್ಞಾನಿಕ ವಿಚಾರಗಳಿವೆ. ನಾವು ಮೊದಲು ಅದನ್ನು ತಿಳಿದುಕೊಳ್ಳಬೇಕು. ಈ ತಿಳಿಸುವಿಕೆಯನ್ನು ನಾವು ಮೊದಲು ಮನೆ, ಶಾಲಾ ಹಂತದಲ್ಲಿ ಮಾಡಿದಾಗ ಮಾತ್ರ ಮಕ್ಕಳಿಗೆ ಉತ್ತಮ ವಿಜ್ಞಾನದ ಬಗ್ಗೆ ತಿಳಿಸಿಕೊಡಲು ಸಾಧ್ಯ. ವಿಜ್ಞಾನದ ಮನೋಭಾವನೆಯನ್ನು ಮಾಡಿಸುವುದು ರಸಪ್ರಶ್ನೆ ಕಾರ್ಯಕ್ರಮದ ಗುರಿಯಾಗಿದೆ ಎಂದರು.
ಇಂತಹ ಮಹತ್ಕಾರ್ಯವನ್ನು ನಮ್ಮ ಶಾಲೆಯಲ್ಲಿ ಪ್ರತಿವರ್ಷ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದು ತಮ್ಮ ಅನಿಸಿಕೆಯನ್ನು ತಿಳಿಸಿದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಸಪ್ರಶ್ನೆಯ ಸಂಪನ್ಮೂಲ ವ್ಯಕ್ತಿಗಳಾದ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಕುಮಾರಸ್ವಾಮಿ.ಬಿ.ಎಂ, ಕಸಬಾ 2 ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿಗಳಾದ ಗಣೇಶ್.ಎಸ್ ಮೈತ್ರಿ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಪ್ರಶಾಂತ ಕುಬಸದ ಹಾಗೂ ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕು. ಪ್ರಣತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಕು.ಎಂ.ಜಿ. ಚಂದನ್ ಸ್ವಾಗತಿಸಿ, ಲಕ್ಷ್ಮೀ ವಂದಿಸಿ, ವಿದ್ಯಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post