ಶಿಕಾರಿಪುರ: ಪೊಲೀಸರ ಕಿರುಕುಳಕ್ಕೆ ಬೇಸತ್ತು ಯುವನೋರ್ವ ಅತ್ಮಹತ್ಯೆ ಮಾಡಿಕೊಂಡಿದ್ದಾನೆ, ಸಂಬಂಧಿಸಿದ ಪೊಲೀಸರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿ, ಹಿತ್ತಲ ಗ್ರಾಮ ಸಂಪೂರ್ಣ ಬಂದ್ ಮಾಡಿದ್ದರು.
ಗ್ರಾಮದ ಸುಧಾಕರ(24) ಎಂಬ ಯುವಕ ಕಳೆದ 31ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆತನನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಚಿಕಿತ್ಸೆ ಫಲಕಾರಿ ಆಗದೆ ಆತ ಶನಿವಾರ ಮೃತಪಟ್ಟಿದ್ದನು.
ಮೃತನ ಶವ ಭಾನುವಾರ ಬೆಳಗ್ಗೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಹೊರವಲಯದಲ್ಲೆ ಅದನ್ನು ನಿಲ್ಲಿಸಿ ರಸ್ತೆ ತಡೆ ನಡೆಸಿದ್ದಲ್ಲದೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಆಗಮಿಸಿ ಸ್ಥಳೀಯ ಬೀಟ್ ಪೊಲೀಸ್, ಗ್ರಾಮಾಂತರ ಠಾಣೆ ಎಸ್‌ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವವರೆಗೂ ರಸ್ತೆ ತಡೆ ಮುಂದುವರೆಸುವುದಾಗಿ ಪ್ರತಿಭಟನಾಕಾರರು ಹೇಳಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮುಂದುವರೆಸಿದರು.
ಸುರಿಯುತ್ತಿದ್ದ ಮಳೆಗೂ ಜಗ್ಗದೆ ಪ್ರತಿಭಟನೆ ಮುಂದುವರೆಯಿತಲ್ಲದೆ, ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರೂ ಪೊಲೀಸರ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು, ಶಿಕಾರಿಪುರ ಹಿತ್ತಲ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುವ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು, ಇಡೀ ಗ್ರಾಮದ ಅಂಗಡಿ, ಮನೆ ಮುಚ್ಚುವ ಮೂಲಕ ಪೊಲೀಸರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಂಜೆ ವೇಳೆಗೆ ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅದೀಕ್ಷಕ ಮುತ್ತುರಾಜ ಆಗಮಿಸಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿ, ಘಟನೆಗೆ ಸಂಬಂಧಿಸಿದಂತೆ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರಲ್ಲದೆ ಮೃತ ಯುವಕನ ಶವ ಸಂಸ್ಕಾರ ನಡೆಸಲಾಯಿತು.
ಘಟನೆ ಹಿನ್ನಲೆ:
ಹಿತ್ತಲ ಗ್ರಾಮದ ಚೌಡೇಶ್ವರಿ ನೃತ್ಯ ಕಲಾ ಸಂಘ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಕಾರ‌್ಯಕ್ರಮ ಮೇ27ರಂದು ಹಿತ್ತಲ ಗ್ರಾಮದ ರಂಗಮಂದಿರದಲ್ಲಿ ನಡೆಯಿತು, ಸದರಿ ಕಾರ‌್ಯಕ್ರಮಕ್ಕೆ ಆಗಮಿಸಿದ್ದ ಕಲ್ಮನೆ ಗ್ರಾಮದ ಯುವಕರು ಕಾರ‌್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹುಡುಗಿಯರಿಗೆ ಚುಡಾಯಿಸಿದರು ಎನ್ನುವ ಕಾರಣಕ್ಕೆ ಎರಡೂ ಗ್ರಾಮದ ಯುವಕರ ನಡುವೆ ಸಣ್ಣ ಗಲಾಟೆ ನಡೆದಿತ್ತು.
ಘಟನೆ ನಡೆದ ಮರುದಿನ ಹತ್ತಕ್ಕೂ ಹೆಚ್ಚು ಯುವಕರ ವಿರುದ್ಧ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು ಆದರೆ ಪ್ರಕರಣದ ಎಫ್‌ಐಆರ್ ದಾಖಲಿಸುವ ಮುನ್ನ ಕೆಲ ಯುವಕರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದರು, ಈ ಹಂತದಲ್ಲಿ ಠಾಣೆಗೆ ಆಗಮಿಸಿದ ಸುಧಾಕರನ ಮೇಲೆ ಪೊಲೀಸರು ಹಲ್ಲೆ ನಡೆಸಿದರು, ಪ್ರಕರಣ ರಾಜಿಯಲ್ಲಿ ಇತ್ಯರ್ಥ ಮಾಡುವುದಕ್ಕಾಗಿ ಹಣದ ಬೇಡಿಕೆ ಇಡಲಾಗಿತ್ತು ಅದನ್ನು ನೀಡುವುದಕ್ಕೆ ಆರ್ಥಿಕ ಶಕ್ತಿ ಇಲ್ಲದ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಎಂದು ಆತನ ಸ್ನೇಹಿತರಾದ ರಾಘವೇಂದ್ರ ಹೇಳುತ್ತಾರೆ.
ಪೊಲೀಸ್ ಪಹರೆ:
ಪೊಲೀಸರ ವಿರುದ್ಧವೆ ಗ್ರಾಮಸ್ಥರು ಪ್ರತಿಭಟನೆ, ರಸ್ತೆ ತಡೆ ನಡೆಸಲು ಆರಂಭಿಸುತ್ತಿದ್ದಂತೆ ಇಡೀ ಗ್ರಾಮದಲ್ಲಿ ಪೊಲೀಸ್ ಪಡೆ ಬೀಡುಬಿಟ್ಟಿತು, 2 ಕೆಎಸ್‌ಆರ್‌ಟಿಸಿ ಬಸ್, 6 ಡಿಆರ್, 1ಕೆಎಸ್‌ಆರ್‌ಪಿ ತುಕಡಿ, 35ಕ್ಯುಆರ್‌ಟಿ ಸ್ಕ್ವಾಡ್, 2ಡಿವೈಎಸ್‌ಪಿ, 4ಸರ್ಕಲ್ ಇನ್‌ಸ್ಪೆಕ್ಟರ್, 10ಸಬ್‌ಇನ್‌ಸ್ಪೆಕ್ಟರ್, 12ಕ್ಕೂ ಹೆಚ್ಚು ಜೀಪ್ ಗ್ರಾಮಕ್ಕೆ ಆಗಮಿಸಿದ್ದವು, ಗ್ರಾಮದಲ್ಲಿ ಇಷ್ಟೊಂದು ಸಂಖ್ಯೆಯ ಪೊಲೀಸರು ಇದೇ ಮೊದಲ ಬಾರಿಗೆ ಆಗಮಿಸಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post