ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆ, ರಾಷ್ಟ್ರಪ್ರೇಮ, ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಪ್ರಾಚಾರ್ಯರಾದ ಡಾ. ಕೆ.ಸಿ. ರವೀಂದ್ರ ಅಭಿಪ್ರಾಯಪಟ್ಟರು.
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಮುದ್ದೇನಹಳ್ಳಿಯಲ್ಲಿ ಆಯೋಜಿಸಿದ 11ನೇ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಯಂಪ್ರೇರಿತ ಸೇವೆ, ಸಮುದಾಯದ ಅಭಿವೃದ್ಧಿ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ವಿದ್ಯಾರ್ಥಿಗಳು ಶ್ರಮಿಸಬೇಕು. ಎನ್’ಎಸ್’ಎಸ್ ವಾರ್ಷಿಕ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಹಾನುಭೂತಿ, ನಾಯಕತ್ವದ ಗುಣಗಳು, ತಂಡದ ಕೆಲಸ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತದೆ. ಜೊತೆಯಲ್ಲಿ ವ್ಯಕ್ತಿತ್ವದ ವಿಕಸನ, ಸಾಮಾಜಿಕ ಅರಿವು, ಜೀವನ ಮೌಲ್ಯಗಳು, ರಾಷ್ಟ್ರ ನಿರ್ಮಾಣದ ಪರಿಕಲ್ಪನೆ, ರಾಷ್ಟ್ರೀಯ ಭಾವನೆಗಳ ಜಾಗೃತಿ ಹಾಗೂ ವಿದ್ಯಾರ್ಥಿ ದೆಸೆಯಲ್ಲಿ ಗಾಂಧೀಜಿಯವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಸಹಾಯಕವಾಗಲಿದೆ ಎಂದರು.
ವಿದ್ಯಾರ್ಥಿ ಗ್ರಾಮಾಂತರ ಪ್ರದೇಶದಲ್ಲಿನ ಜನಜೀವನದ ಬದುಕಿನ ಒಡನಾಟದ ಚಿತ್ರಣವನ್ನು ನೇರವಾಗಿ ಕಂಡರಿಯುತ್ತಾನೆ. ಮುಂದೊಂದು ದಿನ ಒಳ್ಳೆಯ ಸ್ಥಾನ ದೊರೆತ ಸಂದರ್ಭದಲ್ಲಿ ಸಾಮಾಜಿಕ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಸಾಮಾಜಿಕ ಸೇವೆ ಸಲ್ಲಿಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಮುದ್ದೇನಹಳ್ಳಿ ಮುಖ್ಯ ಶಿಕ್ಷಕರಾದ ಕೆ.ಎಚ್. ಹುತ್ತೇಶ್ ಅವರು ಮಾತನಾಡಿ, ಇಂದು ಗ್ರಾಮೀಣ ಕಲೆಗಳು, ಹಳ್ಳಿಗಳ ನೈಜ ಬದುಕು ಕಣ್ಮರೆಯಾಗುತ್ತಿವೆ. ನಮ್ಮ ಆಹಾರ ಪದ್ಧತಿ ಬದಲಾಗುತ್ತಿರುವುದು ದುರಂತವಾಗಿದೆ. ಗಾಂಧೀಜಿ ದೇಶದ ಯುವ ಜನತೆಗೆ ಹಳ್ಳಿಗಳಿಗೆ ಹಿಂದಿರುಗಿ ಎಂದು ಕರೆಕೊಟ್ಟಿದ್ದು. ಈ ಹಿನ್ನೆಲೆಯಲ್ಲಿ ಹಳ್ಳಿಗಳ ಉದ್ಧಾರದ ನೆಲೆಯಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಮುದ್ದೇನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಶೀಲಬಾಯಿ ನಾಗರಾಜ್ ನಾಯ್ಕ್ ಮಾತನಾಡಿ, ಸೇವೆ ಎನ್ನುವ ಪದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯಂತ ಮಹತ್ವವನ್ನು ಪಡೆದಿದೆ. ನಮ್ಮಲ್ಲಿರುವ ಶ್ರಮ, ವಿದ್ಯೆ, ಬುದ್ಧಿ, ಜ್ಞಾನ, ಕೌಶಲ್ಯ, ಆರ್ಥಿಕ ಸೌಲಭ್ಯ ಇತ್ಯಾದಿಗಳನ್ನು ಸಮಾಜದ, ದೇಶದ ಒಳಿತಿಗಾಗಿ ಫಲಾಪೇಕ್ಷೆ ಇಲ್ಲದೆ ಅರ್ಪಣಾ ಮನೋಭಾವದಿಂದ ನೀಡುವ ಸಹಾಯವೇ ಸೇವೆ. ಸೇವಾ ಚಟುವಟಿಕೆ ನಮ್ಮ ಜೀವನದ ಅವಿಭಾಜ್ಯ ಭಾಗ ಹಾಗೂ ಸ್ವಭಾವವಾಗಬೇಕು ಎಂದರು.
ಎಸ್’ಡಿಎಂಸಿ ಅಧ್ಯಕ್ಷರಾದ ಹೇಮಾ ನಾಯ್ಕ್, ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರಾದ ಸಾಕಿಬಾಯಿ ಸೇವ್ಯಾನಾಯ್ಕ, ರಮ್ಯಾರಂಗಪ್ಪ, ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಜಿ.ಎಚ್. ರಮೇಶ್, ಜಾನಪದ ಜಿಲ್ಲಾ ಘಟಕ ಅಧ್ಯಕ್ಷರಾದ ಡಾ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಡಾ.ಡಿ.ಬಿ. ವೆಂಕಟೇಶ್, ಶಿಕಾರಿಪುರ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ರಾಜೇಂದ್ರ ಟಿ. ತಗಡಿ, ಕಾರ್ಯದರ್ಶಿಗಳಾದ ಹರ್ಷ, ಡಾ. ರಾಜು ನಾಯ್ಕ, ಕವಿತಾ ಸುಧೀಂದ್ರ, ಪ್ರಕಾಶ್, ಕೃಷ್ಣ ನಾಯ್ಕ, ಮಲ್ಲಿಕಾರ್ಜುನ, ಪ್ರಶಾಂತ್ ಮೊದಲಾದ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಪ್ರಾಧ್ಯಾಪಕರಾದ ಆರ್. ಕೋಟೋಜಿರಾವ್ ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದರು. ಕು. ಲಿಖಿತ ಸ್ವಾಗತಿಸಿ, ಕು. ವರ್ಷಿತಾ ಸಂಗಡಿಗರು ಪ್ರಾರ್ಥಿಸಿದರು. ಕು. ನೇಹಾ ವಂದನಾರ್ಪಣೆ ಮಾಡಿ, ಕು. ಸುಷ್ಮಾ ಮತ್ತು ಚೈತನ್ಯ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















