ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕಲ್ಮನೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಅಂತಿಮ ವರ್ಷದ ಬಿ.ಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಶುಂಠಿ ಮತ್ತು ಭತ್ತದ ಸುಧಾರಿತ ತಳಿಗಳು ಎಂಬ ವಿಷಯದ ಕುರಿತು ಗುಂಪು ಚರ್ಚೆ ಕಾರ್ಯಕ್ರಮವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಅನುವಂಶೀಯತೆ ಮತ್ತು ಸಸ್ಯತಳಿ ಅಭಿವೃದ್ಧಿ ಶಾಸ್ತ್ರ ವಿಭಾಗದ ಡಾ. ಮಹಿಬೂಬಸಾ ಅವರು ರೈತರಿಗೆ ಹೊಸ ತಳಿಗಳ ಪರಿಚಯ, ಉತ್ಪಾದನಾ ಸಾಮರ್ಥ್ಯ ಹಾಗೂ ರೋಗ ನಿರೋಧಕ ಗುಣಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಶುಂಠಿಯ ಪ್ರಮುಖ ಸುಧಾರಿತ ತಳಿಗಳಾದ ವರದಾ. ಮಹಿಮಾ, ರೇಜತಾ, ವಜ್ರ-ಭಾರತೀಯ ಸಾಂಬಾರು ಪದಾರ್ಥಗಳ ಸಂಶೋಧನೆ ಸಂಸ್ಥೆಯಿಂದ ಅಥಿರಾ, ಅಸವತಿ ಕೇರಳ ಕೃಷಿ ವಿಶ್ವವಿದ್ಯಾಲಯದಿಂದ, ಹುಮನಾಬಾದ ಲೋಕಲ್ ತಳಿಯು ಬೀದರದಿಂದ, ಹಿಮಾಚಲ ಹಿಮಾಚಲ ಪ್ರದೇಶದಿಂದ, ಬಿಡುಗಡೆ ಮಾಡಿರುವ ಹಾಗೂ ರಿಗೋಡಿ (ರಿಯೋ-ಡಿ-ಜನೈರೋ), ಬ್ರೆಜಿಲ್‌ನಿಂದ ಪರಿಚಯಸಲ್ಪಟ್ಟ ಇತ್ಯಾದಿ ತಳಿಗಳ ವೈಶಿಷ್ಟ್ಯಗಳ ಬಗ್ಗೆ, ಮಾಹಿತಿ ನೀಡಿ, ಹವಾಮಾನಕ್ಕೆ ತಕ್ಕಂತೆ ತಳಿ ಆಯ್ಕೆ ಮಾಡುವ ಮಹತ್ವವನ್ನು ವಿವರಿಸಿದರು.
ಅದೇ ಸಂದರ್ಭದಲ್ಲಿ ಶುಂಠಿ ಬೆಳೆಗಳಲ್ಲಿ ಸಾಮಾನ್ಯವಾಗಿ ಈ ಭಾಗದಲ್ಲಿ ಕಾಣಿಸಿಕೊಳ್ಳುವ ಎಲೆಚುಕ್ಕೆ ರೋಗ, ಹಸಿರುಗೊಳೆ, ಕೆಂಪುಗೊಳೆ, ಬೆಲ್ಲದ ರೋಗ ಹೀಗೆ ಮುಂತಾದ ರೋಗಗಳನ್ನು ಗುರುತಿಸುವ ವಿಧಾನಗಳು, ಅವುಗಳ ನಿರ್ವಹಣೆಗೆ ಅಗತ್ಯವಾದ ಜೈವಿಕ, ಯಾಂತ್ರಿಕ ಮತ್ತು ರಾಸಾಯನಿಕ ಕ್ರಮಗಳು ಸೇರಿದಂತೆ ಸಮಗ್ರ ನಿರ್ವಹಣಾ ತಂತ್ರಗಳನ್ನು ರೈತರಿಗೆ ತಿಳಿಸಿದರು.
ಹಾಗೆಯೇ ಭತ್ತದ ತಳಿಗಳ ಬಗ್ಗೆಯೂ ಮಾಹಿತಿಯನ್ನು ನೀಡಿದರು. ಸಹ್ಯಾದ್ರಿ ಸರಣಿಯ ಜಾತಿಗಳಾದ ಸಹ್ಯಾದ್ರಿ ಸಿರಿ, ಸಹ್ಯಾದ್ರಿ ಸಿಂದೂರಾ, ಸಹ್ಯಾದ್ರಿ ಮೇಗಾ, ಸಹ್ಯಾದ್ರಿ ಕೆಂಪುಮುಕ್ತಿ, ಜೊತೆಗೆ BPT ಸೋನಾ ಹಾಗೂ ಅಭಿಲಾಷಾ ಜಾತಿಗಳ ಬಗ್ಗೆ ವಿವರಿಸಿದರು. ಪ್ರತಿ ಜಾತಿಯ ಉತ್ಪಾದನಾ ಸಾಮರ್ಥ್ಯ, ಧಾನ್ಯ ಗುಣಮಟ್ಟ, ರೋಗ-ಹೆಚ್ಚುದಾಣಗಳಿಗೆ ಪ್ರತಿರೋಧ, ಹಾಗೂ ವಿಭಿನ್ನ ಮಣ್ಣಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಗುಣಗಳನ್ನು ತಿಳಿಸಿ, ರೈತರಿಗೆ ಸರಿಯಾದ ಜಾತಿ ಆಯ್ಕೆ ಮಾಡಲು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರು ಹೊಸ ತಂತ್ರಜ್ಞಾನ, ಜಾತಿ ಆಯ್ಕೆ ಹಾಗೂ ಬೆಳೆ ರೋಗ ನಿರ್ವಹಣೆ ಕುರಿತು ಹೆಚ್ಚಿನ ತಿಳುವಳಿಕೆಯನ್ನು ಪಡೆದುಕೊಂಡು ವ್ಯಕ್ತಪಡಿಸಿದರು.
ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಇದೇ ರೀತಿಯ ಜಾಗೃತಿ ಕಾರ್ಯಕ್ರಮಗಳು ರೈತರ ಕೃಷಿ ಉತ್ಪಾದಕತೆ ಹೆಚ್ಚಿಸಲು ನೆರವಾಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















