ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸೇವೆ ಎಂದರೆ ಸುಲಭದ ಕೆಲಸವಲ್ಲ. ಅದು ಭ್ರಾತೃತ್ವವನ್ನು ಬೆಳೆಸುವ ಮಹತ್ಕಾರ್ಯವಾಗಿದೆ ಎಂದು ಕುವೆಂಪು ವಿವಿ ಎನ್’ಎಸ್’ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಶುಭ ಮರವಂತೆ ಅಭಿಪ್ರಾಯಪಟ್ಟರು.
ಇಲ್ಲಿನ ತರಲಘಟ್ಟ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ #KumadvatiCollegeOfEducation ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು.
ಸೇವೆಯನ್ನು ಮಾಡುವುದು ಸುಲಭದ ಕೆಲಸವಲ್ಲ. ಇಲ್ಲಿ ಭ್ರಾತೃತ್ವವನ್ನು ಬೆಳೆಸುವುದಾಗಿರುತ್ತದೆ. ಗಾಂಧೀಜಿಯವರು ಕಂಡಂತಹ ಗ್ರಾಮದ ಸ್ವರಾಜ್ಯವನ್ನು ಕಂಡುಕೊಳ್ಳುವುದಾಗಿದೆ ಎಂದರು.

ಗ್ರಾಮದ ಪರಿಕಲ್ಪನೆಗಳನ್ನು ಅರಿತಂತಹ ವಿದ್ಯಾರ್ಥಿಗಳು ಮುಂದಿನ ತಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಎನ್’ಎಸ್’ಎಸ್ ಕಾರ್ಯಕ್ರಮದಿಂದ ನನಗಲ್ಲ ನಿನಗೆ ಎಂಬ ಧ್ಯೇಯವಾಕ್ಯವನ್ನು ಸಾಕಾರಗೊಳಿಸಲು ಅತ್ಯಂತ ಉತ್ತಮ ವೇದಿಕೆಯು ಇದಾಗಿದೆ ಎಂದರು.
ಶಿಬಿರದ ನಿರ್ದೇಶಕರು, ಕಾಲೇಜಿನ ಪ್ರಾಂಶುಪಾಲರೂ ಆದ ಡಾ.ಜಿ.ಎಸ್. ಶಿವಕುಮಾರ್ ಮಾತನಾಡಿ, ಇಂದು ನಾವು ಸ್ವಾರ್ಥದ ಬದುಕನ್ನು ಕಟ್ಟಿಕೊಳ್ಳುವ ಸಂದರ್ಭವನ್ನು ಕಾಣುತ್ತಿದ್ದೇವೆ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಸಮಾಜದ ಸಾಮಾಜಿಕ, ಆರ್ಥಿಕ, ಮತ್ತು ನಾಗರೀಕ ಸಮಸ್ಯೆಗಳನ್ನು ಅರಿಯುವ ಮತ್ತು ಸಹಬಾಳ್ವೆ ಮತ್ತು ನಾಯಕತ್ವಗುಣಗಳನ್ನು ಮೈಗೂಡಿಸಿಕೊಳ್ಳಲು ನೆರವಾಗುತ್ತದೆ ಎಂದರು.
ಇಂತಹ ಶಿಬಿರಗಳಿಂದ ಜೀವನ ಕೌಶಲ್ಯ ಮತ್ತು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಅಹಂಕಾರ, ಅನುಮಾನ, ಅಸೂಯೆ ಎಂಬುವ ಮಾನವನ ಮೂರು ಮುಖ್ಯ ಮಾನಸಿಕ ರೋಗಗಳನ್ನು ನಾವು ತೊಡೆದುಹಾಕಬೇಕು. ಚಿಂತೆ ಮತ್ತು ಚಿತೆಗಳ ನಡುವಿನ ವ್ಯತ್ಯಾಸವನ್ನು ಅರಿಯುವ ಮೂಲಕ ಶುದ್ಧವಾಗಿಟ್ಟುಕೊಳ್ಳಬೇಕು ಎಂದರು. 
ಈ ಸಂದರ್ಭದಲ್ಲಿ ತರಲಘಟ್ಟ ಗ್ರಾಮದ ಮುಖಂಡರುಗಳು ಊರಿನ ನಾಗರೀಕ ಬಂಧುಗಳು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ವಿಯಾಗಿ ಮೂಡಿಬಂದಿತು.
ಸುಮ ಮತ್ತು ಸಂಗಡಿಗರು ಪ್ರಾರ್ಥಿಸಿ, ಸಹಾಯಕ ಪ್ರಾಧ್ಯಾಪಕ ಡಾ.ವೈ. ದೇವರಾಜ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಎಚ್. ರವಿ ವಂದನಾರ್ಪಣೆ ಮಾಡಿ, ಪ್ರಶಿಕ್ಷಣಾರ್ಥಿಗಳಾದ ಎಚ್. ನಯನ ಮತ್ತು ಎಸ್. ಕಲ್ಪನಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post