ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ನಟ ನಿರ್ದೇಶಕ ದಿ. ಶಂಕರ್ ನಾಗ್ ರವರು ಬೌದ್ಧಿಕವಾಗಿ ನಮ್ಮ ಬಳಿ ಇಲ್ಲದೇಯಿದ್ದರೂ, ಮಾನಸಿಕವಾಗಿ ನಮ್ಮ ಬಳಿ ಅಮರರಾಗಿದ್ದಾರೆ. ಅವರು ಮರಣ ಹೊಂದಿ 31 ವರ್ಷಗಳು ಕಳೆದಿವೆ ಆದರೆ ಶಂಕರ್ ನಾಗ್ ರವರು 3000 ವರ್ಷಗಳು ಕಳೆದರೂ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ. ಎಸ್. ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಶಂಕರ್ ನಾಗ್ ಬಳಗದಿಂದ ಅಮರ ನಮ್ಮ ಶಂಕರ ಎಂಬ ಶೀರ್ಷಿಕೆಯಡಿ, ಶಂಕರ್ ನಾಗ್ ರವರ 31ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸತ್ತಮೇಲೆ ಶಾಶ್ವತವಾಗಿ ಮಲಗಿ ನಿದ್ದೆ ಮಾಡುವುದು ಇದ್ದೇ ಇದೆ ಬದುಕಿದ್ದಾಗ ಏನಾದರೂ ಸಾಧನೆ ಮಾಡಬೇಕು ಎಂದು ದಿ, ಶಂಕರ್ ನಾಗ್ ಅವರು ದಿನದ 24 ಗಂಟೆಗಳಲ್ಲಿ, ಎರಡು ಮೂರು ಗಂಟೆಯ ಕೋಳಿ ನಿದ್ರೆ ಮಾಡುತ್ತಿದ್ದರು. ಸಂಗೀತ ನಿರ್ದೇಶಕ ಹಂಸಲೇಖ ರವರು ಹೇಳಿದಂತೆ ಅವರು ಶಂಕರ್ ನಾಗ್ ಅಲ್ಲ ಶಂಕರ್ ವೇಗ್ ಎಂಬಂತೆ ಶಂಕರ್ ನಾಗ್ ರವರು ಚಿತ್ರರಂಗದಲ್ಲಿ ಕೇವಲ 13 ವರ್ಷಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ, ನಿರ್ದೇಶನ ನೀಡಿದ್ದಾರೆ ಎಂದರು.
ಹೊಸನಗರ ತಾಲ್ಲೂಕಿನ ಅರಸಾಳಿನಲ್ಲಿ ಮಾಲ್ಗುಡಿ ಡೇಸ್ ಮ್ಯೂಸಿಯಂನ್ನು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರಿಂದ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯ ಸವಿನೆನಪು ಉಳಿಯುವಂತೆ ಮಾಡಲಾಗಿದೆ. ಶಂಕರ್ ನಾಗ್ ರವರು ಮಾಲ್ಗುಡಿ ಡೇಸ್ ಧಾರಾವಾಹಿಯ ನಿರ್ದೇಶನದಿಂದ ಲಂಡನ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯ ಜೊತೆಗೆ 42 ಸಾವಿರ ರೂಪಾಯಿ ಹಣ ನೀಡಲಾಗಿತ್ತು. ಆ ಹಣದಿಂದ ಬೆಂಗಳೂರಿನಲ್ಲಿ ಮೆಟ್ರೋ ರೈಲು ಯೋಜನೆ ಜಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದ್ದರಿಂದ 35 ವರ್ಷಗಳ ನಂತರ ಮೆಟ್ರೋ ರೈಲು ಆರಂಭವಾಗಿದೆ. ಆದ್ದರಿಂದ ಮೆಟ್ರೋ ರೈಲಿಗೆ ಶಂಕರ್ ನಾಗ್ ರವರ ಹೆಸರಿಡಬೇಕು ಎಂದರು.
1954 ರಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಅಜ್ಜರ ಕಾಡು ಎಂಬ ಗ್ರಾಮದಲ್ಲಿ ಜನಿಸಿದ ಅವರು, 1985-86 ರಲ್ಲಿ ಏಷ್ಯಾಖಂಡದಲ್ಲಯೇ ಮೊದಲ ಬಾರಿಗೆ ರೆಸಾರ್ಟ್ ಕ್ಲಬ್, ಕಂಟ್ರಿ ಕ್ಲಬ್ ವ್ಯವಸ್ಥೆ ಮಾಡಲಾಗಿದ್ದು, 1984-85 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ರವರ ಅವಧಿಯಲ್ಲಿ ರಾಜಕೀಯ ಪ್ರವೇಶಿಸಿ ಕೆಲವೇ ಕೆಲವು ದಿನಗಳಲ್ಲಿ ರಾಜಕೀಯ ಕ್ಷೇತ್ರದಿಂದ ದೂರ ಉಳಿದರು. ಶಂಕರ್ ನಾಗ್ ರವರ ಮೊದಲ ಹೆಸರು ಅವಿನಾಶ್, ಭವಾನಿ ಶಂಕರ ನಂತರ ಶಂಕರ್ ನಾಗ್ ಎಂದು ಬದಲಾವಣೆ ಮಾಡಲಾಯಿತು ಎಂದು ತಿಳಿಸಿದರು.
ಶಂಕರನ ಬಳಗದ ಸಂಚಾಲಕ ವಿಠ್ಠಲ ಮಹೇಂದ್ರಕರ್ ಮಾತನಾಡಿ, ಶಂಕರ್ ನಾಗ್ ರವರು ಎಂದೂ ಸ್ವಾರ್ಥಕ್ಕಾಗಿ ಬದುಕಲಿಲ್ಲ. ಈಗಿನ ಕಾಲದಲ್ಲಿ ಒಂದು ಚಿತ್ರ ತೆರೆಗೆ ಬರಲು ನಾಲ್ಕು ವರ್ಷಗಳು ತೆಗೆದುಕೊಳ್ಳುತ್ತಾರೆ. ಆದರೆ ಶಂಕರ್ ನಾಗ್ ರವರು ಒಂದೇ ವರ್ಷದಲ್ಲಿ ನಾಲ್ಕಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ನಿರ್ದೇಶಿಸುತಿದ್ದರು ಎಂದರು.
ಪತ್ರಕರ್ತ ಹುಚ್ರಾಯಪ್ಪ ಮಾತನಾಡಿ, ಚಿತ್ರರಂಗದಲ್ಲಿ ಶಂಕರ್ ನಾಗ್ ರವರು 12 ವರ್ಷಗಳಲ್ಲಿ 96 ಚಿತ್ರಗಳಲ್ಲಿ ನಟಿಸಿ, 70 ಚಿತ್ರಗಳಿಗೆ ಹಾಗೂ 2 ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಮಧುಕೇಶ್ವರ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ಉಪಾಧ್ಯಕ್ಷ ಪಾಪಯ್ಯ, ಛಾಯಾಚಿತ್ರ ಗ್ರಾಹಕ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಉಪಾಧ್ಯಕ್ಷ ಇ. ಹೆಚ್. ಬಸವರಾಜ್, ಶಿಕ್ಷಕರಾದ ಮಂಜಪ್ಪ, ಚೆನ್ನಾಶ್ ಚಂದ್ರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post