ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಿದ್ಯಾರ್ಥಿಗಳು ಪರೀಕ್ಷೆ ಎಂಬ ಆತಂಕ ಮತ್ತು ಅಳುಕನ್ನು ಬಿಟ್ಟು, ಸ್ವಾಭಾವಿಕವಾಗಿ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಸಾಧ್ಯ ಎಂದು ಶಾಲಾ ಪ್ರಾಚಾರ್ಯರಾದ ಪಿ. ವಿಶ್ವನಾಥ ತಿಳಿಸಿದರು.
ನಗರದ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಸರಸ್ವತಿ ಪೂಜೆ ಮತ್ತು ಹತ್ತನೆಯ ತರಗತಿಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನಸ್ಸಿನ ದೌರ್ಬಲ್ಯಗಳನ್ನು ದೂರವಿಟ್ಟು ಪರೀಕ್ಷೆ ಎದುರಿಸಲು ಸರಿಯಾದ ಸಮಾಲೋಚನೆ ನಡೆಸಿದರೆ ಪರೀಕ್ಷೆ ಬರೆಯಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಲಿ ಮತ್ತು ಸಮಾಜ ಮತ್ತು ರಾಷ್ಟ್ರಕ್ಕೆ ಉತ್ತಮ ಕೊಡುಗೆಯಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ಪತ್ರಕರ್ತ ಜಿ.ಕೆ. ಹೆಬ್ಬಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸುತ್ತಾ, ಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಉಜ್ವಲ ಭವಿಷ್ಯ ಹೊಂದಲು ನಾಂದಿಯಾಗುತ್ತದೆ. ಇದರಿಂದ ಇತರರ ಬದುಕು, ಬವಣೆಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದರು.
ಇಂದು ನಿಮಗೆ ಶಾಲೆಯಲ್ಲಿ ನೀಡಿರುವ ಈ ದೀಪದಾನವು ನಿಮ್ಮ ಬಾಳಿನಲ್ಲಿ ಉಜ್ವಲವಾಗಿ ಬೆಳೆಯಲಿ, ಈ ಶಾಲೆಯಲ್ಲಿ ಸಿಗುತ್ತಿರುವ ಸಂಸ್ಕಾರಯುತ ಶಿಕ್ಷಣವು ಇಂದು ವಿದ್ಯಾರ್ಥಿಗಳು ಮಾತನಾಡುತ್ತಿರುವ ರೀತಿಯಲ್ಲಿ ಗೊತ್ತಾಗುತ್ತಿದೆ. ನಾವು ಈ ರೀತಿಯ ಶಿಕ್ಷಣದಿಂದ ವಂಚಿತರಾಗಿದ್ದೇವೆ. ಅವಕಾಶ ಈಗಲೂ ಸಿಕ್ಕರೂ ನಾವು ಕಲಿಯಲು ಸಿದ್ದರಿದ್ದೇವೆ ಎಂದು ಶಾಲೆ ಮತ್ತು ಶಾಲೆಯಲ್ಲಿ ಸಿಗುತ್ತಿರುವ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Also read: ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಒತ್ತು: ಸಚಿವ ಮಧು ಬಂಗಾರಪ್ಪ
ಸಂಸ್ಥೆಯ ಆಡಳಿತ ಸಮನ್ವಯಾಧಿಕಾರಿ ಕುಬೇರಪ್ಪ ಮಾತನಾಡಿ, ಸಂಸದರಾದ ಬಿ.ವೈ. ರಾಘವೇಂದ್ರ ಅವರು ತಮ್ಮ ತಾಯಿಯವರಾದ ಮೈತ್ರಾದೇವಿಯವರ ಹೆಸರಿನಲ್ಲಿ ಪ್ರಾರಂಭವಾದ ಶಾಲೆಯಾಗಿದೆ.ಇಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮವಾದ ಶಿಕ್ಷಣ ನೀಡುವುದು ಈ ಶಾಲೆಯ ಉದ್ದೇಶವಾಗಿದೆ. ಅದೆ ಕಾರ್ಯಕ್ರಮ ನಿರ್ವಹಿಸುತ್ತಿರುವ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಂಸ್ಕಾರಯುತವಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಿರೇಂದ್ರ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು ತಿಳಿಸುತ್ತಾ ಪರೀಕ್ಷೆಯನ್ನು ಆತ್ಮ ಮನೋಭಾವದಿಂದ ಎದುರಿಸಿ ಎಂದು ಸಲಹೆ ನೀಡಿದರು.
ಶಾಲೆಯ ಹಿರಿಯ ಶಿಕ್ಷಕಿ ರೇಷ್ಮಾ ಬಾನು ಅವರು ಪ್ರಾಸ್ತಾವಿಕ ಮಾತನಾಡಿದರು. ಕೆಆರ್’ಸಿಎಸ್ ಪ್ರಾಚಾರ್ಯ ಸಿದ್ದೇಶ್ವರ, ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರತಿ ವರ್ಷದಂತೆ ಹತ್ತನೆಯ ವಿದ್ಯಾರ್ಥಿಗಳಿಗೆ ದೀಪದ ಕಾಣಿಕೆಯನ್ನು ಶಾಲೆಯ ನೆನಪಿಗಾಗಿ ನೀಡಲಾಯಿತು. ಚೇತನ ಮತ್ತು ತಂಡದವರು ಪ್ರಾರ್ಥಿಸಿ, ಪಿ.ಕೆ. ವೈಷ್ಣವಿ ಸ್ವಾಗತಿಸಿದರು. ಶೈಯದಾ ಅಫೀಪಾ ವಂದಿಸಿ, ಲಕ್ಷ್ಮಿ ಮತ್ತು ಉಷಾ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post