ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ನಾವುಗಳು ಮಿನುಗುವ ಭವಿಷ್ಯದ ತಾರೆಗಳಾಗಿದ್ದು, ಇಂದಿನ ದಿನ ನಮ್ಮದೇ ಎಂದು ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ವಿದ್ಯಾರ್ಥಿ ಸಂಘದ ನಾಯಕಿ ಗೌರಿ ವಿ ಪಾಟೀಲ್ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ದೈವ ಸ್ವರೂಪ. ದೇಶದ ಸಂಪತ್ತು ಮಕ್ಕಳು. ಮಕ್ಕಳಿರವ್ವ ಮನೆ ತುಂಬಾ ಎಂಬ ಹಿರಿಯರ ಮಾತು ಸತ್ಯ. ದೇಶದ ಪ್ರಗತಿಯಲ್ಲಿ ಇಂದಿನ ಯುವಕರ ಶಕ್ತಿ ಅಗಾಧವಾಗಿದೆ. ದೇಶದ ಯುವ ಸಮೂಹ ನಾಡ ಕಟ್ಟಲು ಶ್ರಮಿಸಬೇಕು. ಈ ಮೂಲಕ ದೇಶದ ಸೇವೆ ಮಾಡಿದಂತಾಗುತ್ತದೆ ಎಂದರು.
ಕೋ- ಆರ್ಡಿನೇಟರ್ ಪ್ರಭುರವರು ಮಾತನಾಡಿ, ದೇಶದ ಮೊದಲ ಪ್ರಧಾನಿ ನೆಹರುರವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಅವರ ಆದರ್ಶ ಜೀವನ ನಮಗೆ ಮಾದರಿಯಾಗಬೇಕು ಎಂದರು.
ಶಾಲೆಯ ಪ್ರಾಚಾರ್ಯರಾದ ಎಚ್.ಡಿ. ಪ್ರಶಾಂತ್ ಮಾತನಾಡಿ, ಇಂದಿನ ಆಧುನಿಕತೆಯಲ್ಲಿ ಯುವಕರ ವಿದ್ಯಾರ್ಥಿಗಳ ಪಾತ್ರ ದೊಡ್ಡದು. ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಮೈಗೂಡಿಸಿಕೊಂಡು ಉನ್ನತ ನಾಗರೀಕರಾಗಿ ದೇಶದ ಭವಿಷ್ಯದ ಶಿಲ್ಪಿಗಳಾಗಿ ಎಂದರು.
ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕ ಸಂತೋಷ ಉಪಸ್ಥಿತರಿದ್ದರು. ಸವಿತಾ ಮತ್ತು ಸಂಗಡಿಗರು ಪ್ರಾರ್ಥನೆ ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ಸಹಶಿಕ್ಷಕಿಯರಾದ ಸಾಹಿತ್ಯರವರು ಸ್ವಾಗತಿಸಿ, ಎಚ್.ವಿ. ಕಾವ್ಯ ವಂದಿಸಿ, ಕೆ. ಪೂಜಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















