ಶಿಕಾರಿಪುರ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರ ರದ್ದುಗೊಳಿಸಿರುವ ವಿಶ್ವವಿದ್ಯಾಲಯದ ಆದೇಶ ವಿರೋಧಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಕಳೆದ ಏಳು ವರ್ಷಗಳ ಹಿಂದೆ ಪಟ್ಟಣದ ಪದವಿ ಕಾಲೇಜಿನಲ್ಲಿ ಆರಂಭಗೊಂಡಿದ್ದ ಕನ್ನಡ ಅಲ್ಲಮ ಸ್ನಾತಕೋತ್ತರ ಕೇಂದ್ರ ರದ್ದುಗೊಳಿಸಿ ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದ್ದು ಈ ಕೇಂದ್ರ ಪುನರ್ ಆರಂಭಿಸಬೇಕು ಇಲ್ಲವಾದಲ್ಲಿ ನಿರಂತರ ಹೋರಾಟ ನಡೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಬೆಣ್ಣೆ ಪ್ರವೀಣ್ ಮಾತನಾಡಿ, ಹೊಸ ಕಟ್ಟಡ, ಉಪನ್ಯಾಸಕರ ನೇಮಕಾತಿ ಸೇರಿ ಅಗತ್ಯ ಮೂಲ ಸೌಕರ‌್ಯದೊಂದಿಗೆ ಆರಂಭಗೊಂಡ ಸ್ನಾತಕೋತ್ತರ ಕೇಂದ್ರ ಹಲವು ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಆಗಿತ್ತು, ಕೇಂದ್ರದ ಸಂಯೋಜಕ ಕುಂಸಿ ಉಮೇಶ್ ಬೇಜವಾಬ್ದಾರಿತನ, ನಿರ್ಲಕ್ಷ್ಯ ಕಾರಣಕ್ಕೆ ಸ್ನಾತಕೋತ್ತರ ಕೇಂದ್ರ ರದ್ದಾಗಿದ್ದು ಅವರನ್ನೂ ಬೇರೆಡೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಪದವಿ ಕಾಲೇಜಿನಿಂದ ಪಟ್ಟಣ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ತಹಸೀಲ್ದಾರ್ ಕಚೇರಿ ಎದುರು ಸಭೆ ನಡೆಸಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿನಿಯರಾದ ರಶ್ಮಿ, ಸಿಂಧು, ಉದಯ್, ಗೋಕುಲ್, ಜಗದೀಶ, ಪ್ರದೀಪ್, ಹರ್ಷಿತ, ಸಲೀಂ, ಸೈಯದ್, ಮುಫ್ತಿಯಾರ್, ಸಂಜಯ್, ಪೂಜಾ, ರಂಜಿತಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
















