ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಿದ್ಯಾರ್ಥಿ ಜೀವನದಲ್ಲಿ ಶಿಸ್ತುಬದ್ಧ ಓದು ಒಳ್ಳೆಯ ಜೀವನವನ್ನು ರೂಪಿಸುತ್ತದೆ ಎಂದು ಕುಮದ್ವತಿ ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿ ಎಲ್. ಖುಷಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಮದ್ವತಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಚರ್ಚಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಮಗೆ ಆಸಕ್ತಿ ಇರುವ ವಿಷಯದಲ್ಲಿ ಪಿಯು ಶಿಕ್ಷಣ ಪಡೆಯುವುದು ಒಳಿತು. ಇದರಿಂದ ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ವಿಜ್ಞಾನ ವಿಷಯ ಆಯ್ಕೆಮಾಡಿಕೊಂಡು ನೀಟ್, ಸಿಇಟಿ ಪರೀಕ್ಷೆ ತೆಗೆದುಕೊಳ್ಳುವಂತೆ ಎಲ್ಲರೂ ಮಾರ್ಗದರ್ಶನ ನೀಡುತ್ತಿದ್ದರು, ಆದರೆ ತಾನು ವಾಣಿಜ್ಯ ವಿಭಾಗದಲ್ಲಿ ಓದಿ ಮೂರನೆಯ ರ್‍ಯಾಂಕ್ ಪಡೆದು ಪ್ರಸ್ತುತ ಸಿಎ ಪದವಿಯ ಗ್ರೇಡ್ ಒನ್ ಪರೀಕ್ಷೆ ಪಾಸಾಗಿದ್ದೇನೆ ಎಂದರು.
Also read: ಬೆಂಗಳೂರು | ಆಸ್ಕರ್ ಕೃಷ್ಣ ಆಯೋಜನೆಯ ಸ್ವರ ಸಂಭ್ರಮ ಯಶಸ್ವಿ ಸಂಪನ್ನ
ಇನ್ನೋರ್ವ ವಿದ್ಯಾರ್ಥಿನಿ ನಂದನ ಮಾತನಾಡಿ, ತಾನೂ ಕೂಡ ಸಿಎ ಗ್ರೇಡ್ ಒನ್ ಪರೀಕ್ಷೆ ಪಾಸಾಗಿದ್ದು, ವಿದ್ಯಾರ್ಥಿ ದೆಸೆಯಲ್ಲಿ ಓದುವ ಪಾಠಗಳು ಮುಂದಿನ ಪರೀಕ್ಷೆಗೆ ಸಹಾಯಕ, ಗುರುಗಳು ಹೇಳುವ ಮಾಹಿತಿಯ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಉಚಿತ ಸಿಎ ಪರೀಕ್ಷೆಯ ತರಗತಿಗಳು ದೊರೆಯುತ್ತದೆ ಎಂದು ಮಾಹಿತಿ ನೀಡಿದರು.
ಪ್ರಾಚಾರ್ಯ ಡಾ, ವೀರೇಂದ್ರ ಮಾತನಾಡಿ, ಈ ಎರಡು ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ಓದಿದವರು. ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಇವರು, ಇಲ್ಲಿ ವಿದ್ಯಾರ್ಥಿಗಳಾಗಿದ್ದಾಗ ಚರ್ಚಾಸ್ಪರ್ಧೆ, ಭಾಷಣ, ರಸಪ್ರಶ್ನೆ , ಹಾಡು ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಿ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದರು ಎಂದು ತಿಳಿಸಿದರು,
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ ಚಂದ್ರಶೇಖರ್ ಮಾತನಾಡಿ, ಕನಸುಗಳನ್ನು ಕಾಣುವುದರ ಜೊತೆಗೆ ನನಸು ಮಾಡುವ ಪ್ರಯತ್ನ ಅತ್ಯಂತ ದೊಡ್ಡದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ದೇವರಾಜ್, ಚಂದ್ರಿಕಾ, ಅರ್ಪಿತಾ, ರಂಜಿತಾ, ಶಿವರಾಜ್ , ಸಂಜೀವ್ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post