ಕಲ್ಪ ಮೀಡಿಯಾ ಹೌಸ್ | ಸಂದರ್ಶನ ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ |
ರಾಜ್ಯ ಹಾಗೂ ರಾಷ್ಟ್ರಕ್ಕೆ ಅನೇಕ ಸಾಧಕರು ಮಲೆನಾಡಿನ ಮಡಿಲಿನಿಂದ ಹೊರಹೊಮ್ಮಿದ್ದು ಅನೇಕರು ದೇಶದ ಹಲವು ಕ್ಷೇತ್ರಗಳಲ್ಲಿ ಅಪರಿಮಿತ ಸೇವೆ ಸಲ್ಲಿಸುತ್ತಿದ್ದಾರೆ.
ಸಾಮಾನ್ಯವಾಗಿ ಸಾಧಿಸುವ ಛಲವಿರುವ ಮಂದಿ ಸಾಧನೆಯ ಹಿಂದೆ ಓಡುತ್ತಲೇ ಇರುತ್ತಾರೆ. ಗುರಿ ತಲುಪಲು ಊಟ, ನಿದ್ದೆಗಳನ್ನು ತ್ಯಜಿಸಿ, ಅವಿರತ ಶ್ರಮಿಸುತ್ತಲೇ ಇದ್ದರೂ, ಸಾಧನೆಯನ್ನು ಒಲಿಸಿಕೊಳ್ಳುವಲ್ಲಿ ಹಲವರು ಹಿಂದೆ ಬೀಳುತ್ತಾರೆ. ಆದರೆ, ಎಲ್ಲ ರೀತಿಯ ಅಡೆತಡೆಗಳನ್ನು ಮೆಟ್ಟಿನಿಂತು ಇಂದು ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ಮಲೆನಾಡಿನ ವ್ಯಂಗ್ಯ ಚಿತ್ರಕಾರ ನಂಜುಂಡಸ್ವಾಮಿ ಅವರು ಎಲ್ಲರಿಗೂ ಮಾದರಿ.
ಇಂತಹ ಕಲಾವಿದರು ಚಿತ್ರಿಸಿದ ವ್ಯಂಗ್ಯಚಿತ್ರಗಳ ಪ್ರದರ್ಶನ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್’ನಲ್ಲಿ ನಡೆಯುತ್ತಿದೆ. ಇದನ್ನು ವೀಕ್ಷಿಸಲು ಹೋದಾಗ ಮಾತಿಗೆ ಸಿಕ್ಕ ನಂಜುಂಡಸ್ವಾಮಿ ಅವರು ಮಲೆನಾಡಿನ ಶಿವಮೊಗ್ಗದವರು ಎಂದು ತಿಳಿದಾಗ ಮನಸ್ಸಿನಲ್ಲಿ ಏನೋ ಒಂದು ರೀತಿ ವ್ಯಕ್ತಪಡಿಸಲಾಗದ ಆನಂದ!!

ಕಳೆದ ಎರಡು ದಶಕಗಳಿಂದ ತಮ್ಮ ಆಕರ್ಷಣೀಯ ರೇಖೆಗಳ ಮೂಲಕ ವ್ಯಂಗ್ಯಚಿತ್ರ ರಚಿಸಿಕೊಂಡು ಬಂದಿರುವ ಶಿವಮೊಗ್ಗ ಮೂಲದ ಕಲಾವಿದ ನಂಜುಂಡಸ್ವಾಮಿ ಅವರ ಕಲಾಪ್ರದರ್ಶನ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಲಾಗ್ಯಾಲರಿಯಲ್ಲಿ ನಡೆಯುತ್ತಿದೆ.
90ಕ್ಕೂ ಹೆಚ್ಚು ಸಾಹಿತಿಗಳ ವಿವಿಧ ಭಾವಗಳ ಕ್ಯಾರಿಕೇಚರ್ ಪ್ರದರ್ಶಿಸಲ್ಪಟ್ಟಿವೆ. ವಿಭಿನ್ನ ಮಾಧ್ಯಮಗಳಲ್ಲಿ ರಚಿಸಿರುವ ಚಿತ್ರಗಳು ಪ್ರದರ್ಶನದಲ್ಲಿದೆ.
ನಂಜುಂಡಸ್ವಾಮಿ ಅವರ ರೇಖೆಯಲ್ಲಿನ ಶಕ್ತಿ ಪ್ರತಿಯೊಂದು ಸಾಹಿತಿಗಳ ಭಾವಕ್ಕೆ ಇನ್ನಷ್ಟು ಮೆರಗು ತಂದಿದೆ. ಆಯಾ ಸಾಹಿತಿಗಳಲ್ಲಿ ಕಾಣಬಹುದಾದ ಕೆಲ ವಿಶೇಷ ಗುಣಗಳು ಕಣ್ಣೆದುರು ನಿಲ್ಲುವ ರೀತಿಯಲ್ಲಿ ರಚಿಸಿದ್ದಾರೆ.

ನೂರಾರು ಚಿತ್ರಗಳು ನಂಜುಂಡಸ್ವಾಮಿಯವರ ಕುಂಚದಲ್ಲಿ ಅಚ್ಚುಕಟ್ಟಾಗಿ ಚಿತ್ರಸಲ್ಪಟ್ಟಿದ್ದು, ಇದು ಅವರ ಕಲಾ ನೈಪುಣ್ಯತೆ, ವಿನೂತನ ಶೈಲಿ ಹಾಗೂ ಕಲಾವಿದ ತನ್ನ ಕುಂಚದಲ್ಲಿ ಹೇಗೆ ಅರಳಿಸಬಲ್ಲ ಎಂಬುದಕ್ಕೆ ಇವರ ಚಿತ್ರೀಗಳೇ ಸಾಕ್ಷಿ, ಇಂತಹ ವಿಶೇಷ ರೇಖಾಚಿತ್ರಗಳನ್ನು ಎಲ್ಲರೂ ಹೋಗಿ ಒಮ್ಮೆ ನೋಡಿ ಬರಬೇಕು ಎಂಬುದು ಕಲ್ಪ ಮೀಡಿಯಾ ಹೌಸ್ ಆಶಯ.

ಕಲ್ಪ ಮೀಡಿಯಾ ಹೌಸ್: ನಿಮ್ಮ ಪರಿಚಯ ತಿಳಿಸಿ?
ನಂಜುಂಡಸ್ವಾಮಿ: ನಾನು ಶಿವಮೊಗ್ಗದಲ್ಲಿ 1964ರ ನವೆಂಬರ್ 4ರಂದು ಜನಿಸಿದೆ. ನನ್ನ ತಂದೆ ಶ್ರೀ ವೈ.ಕೆ. ಶ್ರೀಕಂಠಯ್ಯ ಹಾಗೂ ತಾಯಿ ಶ್ರೀಮತಿ ಲಕ್ಷ್ಮೀದೇವಿ.
ಕಲ್ಪ ಮೀಡಿಯಾ ಹೌಸ್: ನಿಮ್ಮ ಈ ಕಲೆಗೆ ಗುರು ಯಾರು?
ನಂಜುಂಡಸ್ವಾಮಿ: ನನ್ನ ಈ ಚಿತ್ರಕಲೆಗೆ ತಂದೆಯೇ ಮೊದಲ ಗುರುಗಳು. ನಂತರ ಶಿಲ್ಪಿ ಕೆ. ಜ್ಞಾನೇಶ್ವರ್ ಅವರಲ್ಲಿ ಹೆಚ್ಚಿನ ತರಬೇತಿ ಪಡೆದೆ. ಆನಂತರ ವ್ಯಂಗ್ಯಚಿತ್ರರಚನೆಗೆ ಹಿರಿಯ ವ್ಯಂಗ್ಯ ಚಿತ್ರಕಾರ ಗುಜ್ಜಾರ್ ಮಾರ್ಗದರ್ಶನ ಮಾಡಿದ್ದಾರೆ.
ಕಲ್ಪ ಮೀಡಿಯಾ ಹೌಸ್: ನಿಮ್ಮ ವಿದ್ಯಾಭ್ಯಾಸ?
ನಂಜುಂಡಸ್ವಾಮಿ: ಕಮರ್ಷಿಯಲ್ ಆರ್ಟ್ಸ್, ಫೈನ್ ಆರ್ಟ್ಸ್, ಸಾಂಪ್ರದಾಯಿಕ ಕಲೆ.
ಕಲ್ಪ ಮೀಡಿಯಾ ಹೌಸ್: ಎಷ್ಟನೇ ವಯಸ್ಸಿನಿಂದ ಚಿತ್ರಕಲೆ ರಚನೆ ಆರಂಭಿಸಿದಿರಿ?
ನಂಜುಂಡಸ್ವಾಮಿ: ನನ್ನ 17ನೇ ವಯಸ್ಸಿನಿಂದಲೇ ಈ ಕಲೆಯನ್ನು ವೃತ್ತಿಯಾಗಿ ಸ್ವೀಕರಿಸಿದ್ದೇನೆ.
ಕಲ್ಪ ಮೀಡಿಯಾ ಹೌಸ್: ಯಾವೆಲ್ಲಾ ಪತ್ರಿಕೆಗಳಲ್ಲಿ ನಿಮ್ಮ ವ್ಯಂಗ್ಯ ಚಿತ್ರಗಳು ಪ್ರಕಟಗೊಂಡಿವೆ?
ನಂಜುಂಡಸ್ವಾಮಿ: ತರಂಗ, ಸುಧಾ, ತುಷಾರ, ಮಯೂರ, ವಿಜಯವಾಣಿ, ವಿಶ್ವ ವಾಣಿ, ವಿಜಯಕರ್ನಾಟಕ, ಸಂಯುಕ್ತ ಕರ್ನಾಟಕ, ಹಲವು ಪತ್ರಿಕೆಗಳಲ್ಲಿ ಹಾಗು ಹಲವು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಕಲ್ಪ ಮೀಡಿಯಾ ಹೌಸ್: ಯಾವೆಲ್ಲಾ ಪ್ರಶಸ್ತಿಗಳು ನಿಮಗೆ ಸಂದಿವೆ?
ನಂಜುಂಡಸ್ವಾಮಿ: ಪ್ರತಿಷ್ಠಿತ ಮಾಯಾ ಕಾಮತ್ ಪ್ರಶಸ್ತಿ ಅಲ್ಲದೆ ಹಲವು ಪ್ರಶಸ್ತಿಗಳು, ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಬಹುಮಾನಗಳು ಬಂದಿರುತ್ತೆ. ಅನೇಕ ಶಿಬಿರಗಳಲ್ಲಿ ಭಾಗವಹಿಸಿದ್ದೇನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post