ಶಿವಮೊಗ್ಗ: ಶಾಲಾ ಶಿಕ್ಷಣಕ್ಕಾಗಿ ರಂಗಭೂಮಿ ಅಳವಡಿಕೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆೆಗಳಲ್ಲಿ ನಾಟಕ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಕರ್ನಾಟಕ ರಂಗ ಶಿಕ್ಷಣ ಪದವೀಧರರ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳ ಮೂಲಕ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿರುವ ಸದಸ್ಯರು, ಈಗಾಗಲೇ ರಾಜ್ಯದಲ್ಲಿ 54 ನಾಟಕ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ತೊಡಗಿಸಿಕೊಂಡು ವಿಭಿನ್ನವಾಗಿ ಕಾರ್ಯೋನ್ಮುಖರಾಗಿದ್ದಾರೆ. ಉಳಿದಂತೆ ರಾಜ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆೆಗಳಲ್ಲೂ ನಾಟಕ ಶಿಕ್ಷಕರ ನೇಮಕಾತಿ ಅಗತ್ಯವಿದೆ ಎಂದಿದ್ದಾರೆ.
ಇಂದಿನ ಮಕ್ಕಳು ಮುಂದಿನ ಪ್ರಜೆಗಳಾದ್ದರಿಂದ ಅವರ ಸರ್ವತೋಮುಖ ಬೆಳವಣಿಗೆಯಾಗಬೇಕಾದುದು ತೀರಾ ಅವಶ್ಯ. ಶಿಕ್ಷಣದ ಬಗೆಗಿನ ಗಾಂಧೀಜಿಯವರ ನಯಿತಾಲೀಮ್ ವ್ಯಾಖ್ಯಾನದಂತೆ, ಮಗುವಿನ ದೈಹಿಕ, ಬೌದ್ದಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊರಗೆಳೆಯುವುದಾದರೆ ಶಿಕ್ಷಣದ ಪ್ರಕ್ರಿಯೆಯಲ್ಲಿ ರಂಗಕಲೆ ವಿಧಾನಗಳು, ಚಟುವಟಿಕೆಗಳು ಹೆಚ್ಚಿನ ಅಗತ್ಯ ಮತ್ತು ಅನಿವಾರ್ಯ ಎಂಬುದನ್ನು ಶಿಕ್ಷಣ ತಜ್ಞರು, ಶೈಕ್ಷಣಿಕ ಮನೋವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಸರ್ಕಾರಕ್ಕೆ ಅರ್ಥ ಮಾಡಿಕೊಡಲು ಯತ್ನಿಸಿದ್ದಾರೆ.
ರಂಗಭೂಮಿಯು ಬಹುಮುಖ್ಯವಾಗಿ ಮನಸ್ಸಿನ ಆತಂಕವನ್ನು ದೂರಮಾಡಿ ಶಾಂತಿಯನ್ನು ನೀಡಿ ಸೌಹಾರ್ದ ಬಾಳಿಗೆ ಸೇತುವೆಯಂತೆ ಕೆಲಸ ಮಾಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಬಜೆಟ್‌ನಲ್ಲಿ ಮತ್ತು ಆದ್ಯತೆಯಲ್ಲಿ ರಂಗಭೂಮಿಯನ್ನು ಕಡೆಗಣಿಸುತ್ತಿರುವುದಕ್ಕೂ ಮತ್ತು ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿರುವುದಕ್ಕೂ ಸಂಬಂಧ ಇದೆ. ಆದ್ದರಿಂದಲೇ ಭಾರತ ಸರ್ಕಾರವೂ ಸಹ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು – 2005 (ಎನ್.ಸಿ.ಎಫ್.2005) ಮುಖಾಂತರ ಶಿಕ್ಷಣ ನೀಡುವ ಮತ್ತು ಮೌಲ್ಯಮಾಪನ ಮಾಡುವ ವಿಧಾನಗಳನ್ನು ಗುರುತಿಸುವಲ್ಲಿ ರಂಗಭೂಮಿಯ ಆಯಾಮಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿವೆ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಸರ್ವ ಶಿಕ್ಷಣ ಅಭಿಯಾನದ ಮೂಲಕ ಸಿ.ಸಿ.ಇ ನಿಯಮ (ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ) ಅಳವಡಿಸಿರುವುದು. ಹೀಗೆ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಗಳ ಯಶಸ್ವಿ ಅನುಷ್ಠಾನ ಮತ್ತು ಸಫಲತೆಯಲ್ಲಿ ನಾಟಕ ಶಿಕ್ಷಕರ ಪಾತ್ರ ಶಿಕ್ಷಣ ಪ್ರಕ್ರಿಯೆಯಲ್ಲಿ ಬಹಳ ಮುಖ್ಯವಾಗಿದೆ ಎಂದು ಮನವಿದಾರರು ಉಲ್ಲೇಖಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ 54 ನಾಟಕ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ತೊಡಗಿಸಿಕೊಂಡು ವಿಭಿನ್ನವಾಗಿ ಕಾರ್ಯೋನ್ಮುಖರಾಗಿದ್ದಾರೆ. ಉಳಿದಂತೆ ರಾಜ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆೆಗಳಲ್ಲೂ ನಾಟಕ ಶಿಕ್ಷಕರ ನೇಮಕಾತಿ ಅಗತ್ಯವಿದೆ. ಆದ್ದರಿಂದ ದಯಮಾಡಿ ನಾಟಕ ಶಿಕ್ಷಕರನ್ನು ಶಾಲೆಗಳಿಗೆ ಖಾಯಂ ಆಗಿ ನೇಮಕ ಮಾಡಿಕೊಂಡಲ್ಲಿ, ಈ ಸಂಬಂಧ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ರಾಜ್ಯದಲ್ಲಿರುವ ರಂಗ ಶಿಕ್ಷಣ ಪದವೀಧರರು-ಒಂದು ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಂತಾಗುತ್ತದೆ ಎಂದಿದ್ದಾರೆ.
ಖಾಯಂ ನೇಮಕಾತಿ ಆಗುವವರೆಗೆ ತಾತ್ಕಾಲಿಕವಾಗಿ ಏಜೆನ್ಸಿಗಳ ಮೂಲಕ ನೇಮಕ ಮಾಡಿಕೊಳ್ಳುವುದಾದರೆ, ತತ್ಸಂಬಂಧ ವಿದ್ಯಾರ್ಹತೆ ಹೊಂದಿರುವವರಿಗೆ ಮತ್ತು ಗುಣಾತ್ಮಕ ಸಂಸ್ಥೆಗೆ ತಾತ್ಕಾಲಿಕ ನೇಮಕಾತಿ ಜವಾಬ್ದಾರಿ ನೀಡಬಹುದಾಗಿದೆ.
ಈ ಸಂಬಂಧ ರಾಜ್ಯದ ಎಲ್ಲ ರಂಗ ಸಂಸ್ಥೆಗಳು, ಪ್ರಸಿದ್ದ ರಂಗಕರ್ಮಿಗಳು, ರಂಗ ಶಿಕ್ಷಕರು, ರಂಗಭೂಮಿಯಲ್ಲಿ ತೊಡಗಿಸಿಕೊಂಡವರು ಹಾಗೂ ಪೋಷಕರು ಬೆಂಬಲ ವ್ಯಕ್ತಪಡಿಸಿರುತ್ತಾರೆ. ಆದ್ದರಿಂದ ನಾಟಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ವಿನಂತಿಸಲಾಗಿದೆ.
ಮನವಿದಾರರ ಬೇಡಿಕೆಗಳು
- ರಾಜ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ರಂಗ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು.
- ನೀನಾಸಂ-ಹೆಗ್ಗೋಡು, ಶಿವಕುಮಾರ ರಂಗಶಿಕ್ಷಣ ಕೇಂದ್ರ-ಸಾಣೇಹಳ್ಳಿ, ರಂಗ ಅಧ್ಯಯನ ಕೇಂದ್ರ-ಕುಂದಾಪುರ ಮತ್ತು ರಂಗಾಯಣ, ಮೈಸೂರು ರಂಗಶಾಲೆಗಳಲ್ಲಿ ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ರಂಗ ಶಿಕ್ಷಣ ಪಡೆದವರನ್ನೇ ನೇಮಕಾತಿ ಮಾಡಿಕೊಳ್ಳಬೇಕು. ಇದಕ್ಕಾಗಿ ವೃಂದ ಮತ್ತು ನೇಮಕಾತಿ ನಿಯಮಗಳ ಸೂಕ್ತ ತಿದ್ದುಪಡಿ ಮಾಡಬೇಕು.
- ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ರಂಗಶಿಕ್ಷಕರಿಗೆ ಶಾಲಾ ವೇಳಾಪಟ್ಟಿಯಲ್ಲಿ ಅವಧಿಯನ್ನು ನಿಗದಿಪಡಿಸಬೇಕು.
- ರಾಜ್ಯದ ಪ್ರತೀ ಶಾಲೆಯ ಮಕ್ಕಳು ವರ್ಷಕ್ಕೊಂದು ಪರಿಪೂರ್ಣ ನಾಟಕ ಕಲಿತು ಪ್ರದರ್ಶಿಸುವಂತೆ ಅನುದಾನ ನೀಡಬೇಕು ಹಾಗೂ ರಂಗ ಪದವೀಧರರು ಮತ್ತು ನುರಿತ ರಂಗ ತಜ್ಞರನ್ನು ಇದಕ್ಕಾಗಿ ಬಳಸಿಕೊಳ್ಳಬೇಕು.
- ರಂಗಭೂಮಿಯಲ್ಲಿ ಉನ್ನತ ಪದವಿ ಹಾಗೂ ವ್ಯಾಸಂಗ ಮಾಡಿದವರನ್ನು ‘‘ಜಿಲ್ಲಾ ಡಯಟ್’’ನಲ್ಲಿ ರಂಗಭೂಮಿ ಪ್ರಶಿಕ್ಷಕರಾಗಿ ನೇಮಕಮಾಡಬೇಕು.
Discussion about this post