ಶಿವಮೊಗ್ಗ: ಜಿಲ್ಲೆಯ ಹೊಸನಗರ ಸಮೀಪದ ಜಯನಗರದ ಚಾಮುಂಡಿ ಬೆಟ್ಟದಲ್ಲಿ ಅಕ್ಟೋಬರ್ 13ರಂದು ಜಾನಪದ ಸಂಭ್ರಮ ಹಾಗೂ ಸಾಹಿತ್ಯ, ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ.
ತಾಲೂಕು ವ್ಯಾಪ್ತಿಯ ಆಯ್ದ ಹದಿಮೂರು ವಿವಿಧ ಜನಪದ ಕಲಾ ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡಗಳು ವೈವಿಧ್ಯಮಯ ಜನಪದ ಕಲಾ ಪ್ರದರ್ಶನ ನೀಡಿದ ನಂತರ ಆ ಕಲೆಯ ಮಹತ್ವ ಕುರಿತು ನಮ್ಮ ಪರಿಣಿತ ಉಪನ್ಯಾಸಕ ತಂಡ ಕಲೆಯ ಕುರಿತು ಮಾಹಿತಿ ನೀಡಲಿದ್ದಾರೆ.
ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ ಕಲಾಪ್ರೇಮಿಗಳು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರುತ್ತೇವೆ. ಈ ಕಾರ್ಯಕ್ರಮದ ಜೊತೆಗೆ ಭದ್ರಾವತಿಯ ಲಕ್ಷ್ಮಣ್ ರಾವ್ ಮತ್ತು ತಂಡದವರ ಚೌಡಿಕೆ ಕಲಾಪ್ರದರ್ಶನ ಏರ್ಪಡಿಸಲಾಗಿದೆ. ಸಂಜೆ ಕನ್ನಡ. ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ತೀರ್ಥಹಳ್ಳಿಯ ಶ್ರೀ ರಾಜರಾಜೇಶ್ವರಿ ನೃತ್ಯ ಕಲಾ ಕೇಂದ್ರ ಅವರಿಂದ ಜಾನಪದ ನೃತ್ಯ ಹಾಗೂ ರೂಪಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಜಾನಪದ ವಿದ್ವಾಂಸರು ಮತ್ತು ಹಿರಿಯ ಸಾಹಿತಿಗಳು, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಗೌರವಾಧ್ಯಕ್ಷ ಡಾ. ಸಣ್ಣರಾಮ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಟಾಕಪ್ಪ ಕಣ್ಣೂರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಭಟ್, ತಾಲೂಕು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಎನ್. ಸತೀಶ್ ಸೇರಿದಂತೆ ಚಾಮುಂಡಿ ಬೆಟ್ಟ ದೇವಸ್ಥಾನ ಸಮಿತಿಯ ಎಲ್ಲರೂ ಭಾಗವಹಿಸಲಿದ್ದಾರೆ.
ತಾಲೂಕು ತಹಶೀಲ್ದಾರ ಚಂದ್ರಶೇಖರ ನಾಯ್ಕ, ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಗೌರವಾಧ್ಯಕ್ಷ ಎನ್. ಮಂಜುನಾಥ ಕಾಮತ್, ದೇವಸ್ಥಾನ ಸಮಿತಿ ಅಧ್ಯಕ್ಷ ಡಿ. ಲಕ್ಷ್ಮಣ್ ಸೇರಿದಂತೆ ಹಲವರು ಭಾಗವಹಿಸದ್ದಾರೆ.
ಕರ್ನಾಟಕ ಜಾನಪದ ಪರಿಷತ್ತು, ಹೊಸನಗರ ತಾಲೂಕು ಸಮಿತಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಹೊಸನಗರ ತಾಲೂಕು ಸಮಿತಿ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ, ಜಯನಗರ ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.
Discussion about this post