ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ಉತ್ತರ ಕರ್ನಾಟಕದ ಸಂಪರ್ಕ ಬೆಸೆಯುವ ಕೊಂಡಿಯಾಗಿರುವ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗದ ನಿರ್ಮಾಣಕ್ಕಾಗಿ 2021-22ನೆಯ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ 100 ಕೋಟಿ ರೂ.ಗಳನ್ನು ಕಾಯ್ದಿರಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಭಾಗದ ಜನರ ಬಹುದಿನಗಳ ಕನಸಾಗಿರುವ ಈ ರೈಲು ಮಾರ್ಗದ ನಿರ್ಮಾಣ ಕಾರ್ಯಕ್ಕೆ ಅಗತ್ಯವಾಗಿರುವ ಭೂಮಿಯನ್ನು ಕೆಐಡಿಬಿ ಸಂಸ್ಥೆಯ ಮೂಲಕ ಭೂಸ್ವಾದೀನ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದವರು ತಿಳಿಸಿದ್ದಾರೆ.
ಈ ರೈಲು ಮಾರ್ಗದ ನಿರ್ಮಾಣ ಸಂಬಂಧ ಕೇಂದ್ರ ರೈಲ್ವೇ ಸಚಿವರೊಂದಿಗೆ ನಿರಂತರ ಸಂಪರ್ಕಿಸಿ, ಸಮಾಲೋಚನೆ ನಡೆಸಲಾಗಿತ್ತು ಎಂದು ತಿಳಿಸಿರುವ ಅವರು, 2019-20ರ ಕೇಂದ್ರ ಮುಂಗಡಪತ್ರದಲ್ಲಿ ಶಿವಮೊಗ್ಗ ಭಾಗದಲ್ಲಿ ರೈಲು ಸಂಚಾರವನ್ನು ಹೆಚ್ಚಿಸಲು ಮೂಲ ಅಗತ್ಯವೆನಿಸಿರುವ ಕೋಚಿಂಗ್ ಡಿಪೋವನ್ನು ಶಿವಮೊಗ್ಗ ಸಮೀಪದ ಕೋಟೆಗಂಗೂರಿನಲ್ಲಿ ನಿರ್ಮಿಸಲು ಅಗತ್ಯ ಅನುದಾನ ಮಂಜೂರಾಗಿದೆ. ಅಲ್ಲದೇ ಇದಕ್ಕೆ ಬೇಕಾಗಿರುವ ಹೆಚ್ಚುವರಿ ಭೂಮಿಯನ್ನು ಖಾಸಗಿಯವರಿಂದ ಭೂಸ್ವಾದೀನಪಡಿಸಿಕೊಳ್ಳುವ ಪ್ರಕ್ರಿಯೆಯೂ ಚಾಲ್ತಿಯಲಿದೆ. ರೈಲ್ವೇ ಇಲಾಖೆಯು ಆರಂಭಿಕ ಕಾಮಗಾರಿ ಅನುಷ್ಠಾನಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಅದಕ್ಕಾಗಿ ಮುಂಗಡ ಪತ್ರದಲ್ಲಿ 12 ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದವರು ತಿಳಿಸಿದ್ದಾರೆ.
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ರೈಲ್ವೇ ಮೂಲ ಸೌಲಭ್ಯ ಅಭಿವೃಧ್ಧಿಪಡಿಸುವುದು ಬಹುಮುಖ್ಯವಾದ ಕ್ರಮ ಎಂದು ತಿಳಿಸಿರುವ ಅವರು, ಈ ಅನುದಾನ ತರುವಲ್ಲಿ ಶ್ರಮಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾನ್ ಹಾಗೂ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರನ್ನು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post