ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ರಂಗಾಯಣವು ತಿಂಗಳ ವಾರಾಂತ್ಯ ನಾಟಕ ಪ್ರದರ್ಶನ ಮಾಲಿಕೆಯಡಿ ಸಂಸ್ಕೃತ ಭವನದಲ್ಲಿ ಫೆ. 13 ಮತ್ತು 14ರ ಸಂಜೆ 6:30ಕ್ಕೆ ತಹತಹ ಹಾಗೂ ಹಕ್ಕಿಕಥೆ ನಾಟಕ ಪ್ರದರ್ಶನ ಆಯೋಜಿಸಿದೆ.
ಫೆ.13ರ ಶನಿವಾರ ತಹತಹ:
ಮೈಸೂರಿನ ನಾಟ್ಯಲೇಖ ರಂಗಸಮೂಹ ಹಾಗೂ ದ ನೈಟಿಂಗಲ್ & ದ ರೋಸ್‌ಥಿಯೇಟರ್ ಅಸೋಸಿಯೇಷನ್ ಸಹಯೋಗದಲ್ಲಿ ಆಸ್ಕರ್ ವೈಲ್ಡ್‌ನ ಪ್ರೇಮಪತ್ರಗಳನ್ನು ಹಾಗೂ ಹೆನ್ರಿಕ್‌ಇಬ್ಸನ್‌ನ ಫೋಸ್ಟ್ಸ ನಾಟಕಗಳನ್ನು ಆಧರಿಸಿ ಸಂಗೀತ ಮತ್ತು ನೃತ್ಯವನ್ನು ಪ್ರಧಾನವಾಗಿಟ್ಟು ಕೊಂಡ “ತಹತಹ” ನಾಟಕ ಸುಮಾರು 1.15 ಗಂಟೆಯ ಈ ರಂಗ ಪ್ರಯೋಗವನ್ನು ಅಮಿತ್ ಜೆ.ರೆಡ್ಡಿ ಇವರು ನಿರ್ದೇಶಿಸಿರುತ್ತಾರೆ. ಸಂಗೀತ ಅನುಶ್ ಎ. ಶೆಟ್ಟಿ ಇವರದ್ದಾಗಿರುತ್ತದೆ. ಬೆಳಕಿನ ವಿನ್ಯಾಸವನ್ನು ಮಹೇಶ್‌ಕಲ್ಲತ್ತಿ ಮತ್ತು ಮಂಜುನಾಥ್ ಹಿರೇಮಠ್ ನಿರ್ವಹಿಸಿದ್ದಾರೆ. ಅಪರೂಪದ ಈ ರಂಗಪ್ರಯೋಗವನ್ನು ದಿವ್ಯ ಎನ್. ನಿರ್ಮಿಸಿದ್ದಾರೆ.
ಫೆ.14ರ ಭಾನುವಾರ ಹಕ್ಕಿಕಥೆ:
ಶಿವಮೊಗ್ಗ ರಂಗಾಯಣ ಪ್ರಸ್ತುತಿಯ ‘ಹಕ್ಕಿಕಥೆ’ ನಾಟಕದ ನಿರ್ದೇಶನ ಗಣೇಶ್ ಮಂದಾರ್ತಿ ಮತ್ತು ಶ್ರವಣ್ ಹೆಗ್ಗೋಡು ಇವರದಾಗಿದೆ. ರವಿಕುಮಾರ್ ಬೆಣ್ಣೆ ಮತ್ತು ಎಂ.ಯು. ರಾಘವೇಂದ್ರ ಪ್ರಭು ಇವರ ಸಂಗೀತ ನಿರ್ವಹಣೆ, ಪಪ್ಪೆಟ್ ವಿನ್ಯಾಸ ಮತ್ತು ತಯಾರಿಕೆ ಶ್ರವಣ್ ಹೆಗ್ಗೋಡು ಮತ್ತು ಗಗನ್‌ಕುಮಾರ್, ರಂಗಸಜ್ಜಿಕೆ ಮತ್ತು ಪರಿಕರದಲ್ಲಿ ಮಧುಸೂದನ್ ಕೊಡಗು ಮತ್ತು ಪ್ರಶಾಂತ್‌ಕುಮಾರ್, ಬೆಳಕಿನ ವಿನ್ಯಾಸದಲ್ಲಿ ಪೃಥ್ವಿನ್ ಉಡುಪಿ, ಬೆಳಕಿನ ನಿರ್ವಹಣೆ ಶಂಕರ್ ಕೆ ಬೆಳಲಕಟ್ಟೆ ಇವರದಾಗಿದೆ.
ಹಕ್ಕಿಕಥೆ ನಾಟಕದ ಕಥಾ ಸಾರಾಂಶ:
ಪ್ರಕೃತಿಯ ಇತರ ಜೀವಿಗಳ ಸಹಜ ಬದುಕಿನ ಮೇಲೆ ಮನುಷ್ಯನ ಹಸ್ತಕ್ಷೇಪ ಎಂಥದ್ದು ಮತ್ತು ಅದಕ್ಕೆ ಪ್ರಕೃತಿ ಕೊಡುವ ತಿರುಗೇಟಿನ ಉತ್ತರ ಯಾವ ತರಹವಿರಬಹುದು ಎಂಬುದನ್ನು ಈ ನಾಟಕ ನಮಗೆ ಮನಗಾಣಿಸುತ್ತದೆ. ತನ್ನ ಬದುಕು ಮಾತ್ರ ಮನುಷ್ಯನಿಗೆ ಮುಖ್ಯವೆನಿಸಿದಾಗ ಆತ ಉಳಿದ ಜೀವಿಗಳ ಬದುಕನ್ನು ಅಸಡ್ಡೆಯಿಂದ ನೋಡತೊಡಗುತ್ತಾನೆ. ಪ್ರಕೃತಿಯ ಸಹಜತೆಗೆ ಅಡ್ಡಿ ಬರುತ್ತಾನೆ.
ಹಕ್ಕಿಯ ಸುಂದರ ಬದುಕು ಸಹ್ಯಾದ್ರಿಯದಟ್ಟ ಹಸಿರಿನಲ್ಲಿ ಪ್ರಾರಂಭವಾಗುತ್ತದೆ. ಆದರೆ ಆ ಪಶ್ಚಿಮ ಘಟ್ಟಗಳ ಮೇಲಾಗುವ ಮನುಷ್ಯನಯಂತ್ರ ದಾಳಿಗೆ ಹೆದರಿ ಹಕ್ಕಿಗಳು ಕಾಡು ಬಿಡುತ್ತವೆ. ಅಲ್ಲಿಂದ ಶುರುವಾಗುವ ಆ ಜೀವಿಗಳ ಬದುಕು ದಾರುಣ ವಾಗುತ್ತಾ ಬರುವ ಚಿತ್ರಣ ಈ ನಾಟಕದಲ್ಲಿದೆ. ಕಾರ್ಖಾನೆಯ ವಿಷದ ಹೊಗೆ, ಡೈನಾಮೇಟ್‌ಗಳ ಸ್ಫೋಟ, ಮುಳುಗಡೆಯ ಪ್ರದೇಶಗಳಿಂದಾಗುವ ಆವಾಂತರ ಹೀಗೆ ಒಂದಾದ ಮೇಲೊಂದು ಅವಘಡಗಳಿಗೆ ಸಿಲುಕಿ ಹಕ್ಕಿಗಳು ಸಾಯುತ್ತವೆ.
ಕೊನೆಯಲ್ಲಿ ಮರಗಳ ಕೇಡಿಗೆ ಹೆದರಿ ಮೊಬೈಲ್ ಟವರುಗಳ ಮೇಲೆ ಗೂಡುಕಟ್ಟುವ ಸ್ಥಿತಿ, ಮನುಷ್ಯನ ಆಧುನಿಕ ಬದುಕಿನ ಕ್ರೌರ್ಯವನ್ನು ವ್ಯಂಗ್ಯವಾಗಿ ತೋರಿಸುತ್ತದೆ. ಅಲ್ಲಿಗೂ ಬರುವ ಮನುಷ್ಯನ ಸ್ವಾರ್ಥ ಬುದ್ಧಿಗೆ ಪ್ರಕೃತಿ ತನ್ನದೇ ರೀತಿಯಲ್ಲಿ ಉತ್ತರಿಸಿ ಬಿಡುತ್ತದೆ. ಹಕ್ಕಿಯ ಸ್ಥಾನದಲ್ಲಿ ನೀವು ಯಾರನ್ನೇ, ಯಾವುದನ್ನೇ ಇಟ್ಟರೂ ಇದು ಅವರ ಅಥವಾ ಅದರ ಕತೆಯಾಗಿ ಬಿಡುತ್ತದೆ. ಪ್ರೇಮದಿಂದ ಮಾತ್ರ ಪರಿವರ್ತನೆ ಸಾಧ್ಯ. ಬೇರೆ ಮಾರ್ಗವೇ ಇಲ್ಲ ಎಂಬುವುದು ಈ ನಾಟಕದ ಕಥಾ ಸಾರಾಂಶ.
ಈ ನಾಟಕ ಪ್ರದರ್ಶನಕ್ಕೆ 20ರೂ.ಗಳ ಪ್ರವೇಶಧನ ಇರುತ್ತದೆ. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು ಆಗಮಿಸಿ ನಾಟಕವನ್ನು ವೀಕ್ಷಿಸಿ ರಂಗ ಚಟುವಟಿಕೆಗಳನ್ನು ಪ್ರೋತಾಹಿಸಬೇಕೆಂದು ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post