ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹಿರಿಯ ಪತ್ರಕರ್ತರಾಗಿದ್ದ ದಿ. ಪ್ರಮೋದ್ ಮಳ್ಳಿಗಟ್ಟಿಯವರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠವನ್ನು ಸ್ಥಾಪಿಸಿ, ಈ ಮೂಲಕ ಮುಂದಿನ ತಲೆಮಾರು, ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿ, ಸಮರ್ಥರಾಗಿ ತೊಡಗಿಕೊಳ್ಳುವಂತೆ ಪ್ರೇರೇಪಿಸಲು ಅನುವು ಮಾಡಿಕೊಡುವಂತೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದೆ.
ಇಂದು ಬೆಳಿಗ್ಗೆ ಸೋಗಾನೆ ಬಳಿ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆಯ ವೇಳೆ, ನಗರದ ಪತ್ರಕರ್ತರು, ಮಾಧ್ಯಮದ ಪ್ರತಿನಿಧಿಗಳ ಸಮ್ಮುಖದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಯಿತು.
ಶಿವಮೊಗ್ಗೆಯಲ್ಲಿ ಪ್ರಮೋದ್ ಮಳ್ಳಿಗಟ್ಟಿಯವರು, ಪತ್ರಕರ್ತರಾಗಿ ತಮ್ಮದೇ ಛಾಪು ಮೂಡಿಸಿದವರು. ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯವನ್ನು ಆರಂಭಿಸಿದ ಇವರು, ನಂತರ ಡೆಕ್ಕನ್ ಹೆರಾಲ್ಡ್ ಹಾಗೂ ದ ಹಿಂದೂ ಪತ್ರಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸಿದವರು. ವಿಶೇಷವೆಂದರೆ, ದ ಹಿಂದೂ ಪತ್ರಿಕೆಯಲ್ಲಿ ಸುದೀರ್ಘವಾದ ಸೇವಾ ಅವಧಿಯನ್ನು ಅವರು ಶಿವಮೊಗ್ಗೆಯಲ್ಲಿಯೇ ಕಳೆದಿದ್ದರು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಕಳಕಳಿಯ ವರದಿಗಾರಿಕೆಗೆ ಹೆಸರಾಗಿದ್ದ ಪ್ರಮೋದ್‌ರವರು, ಅಂದು ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆಯನ್ನು ನಿಷೇಧಗೊಳಿಸುವಲ್ಲಿ ಇವರ ವರದಿಗಾರಿಕೆಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿತ್ತು ಎಂದರೆ ಖಂಡಿತಾ ಉತ್ರ್ಪೇಕ್ಷೆಯಲ್ಲ. ರಾಜಕೀಯ ವಿಶ್ಲೇಷಣೆ, ವಿಶೇಷ ಲೇಖನಗಳ ಮಾಲೆ ಹಾಗೂ ಬಹಳ ಮುಖ್ಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ವರದಿಗಾರಕೆಗೂ ಸಹ ಇವರು ಹೆಸರುವಾಸಿಯಾಗಿದ್ದರು. ಅನೇಕಾನೇಕ ಪ್ರತಿಭೆಗಳನ್ನು ಪ್ರಮೋದ್‌ರವರು ತಮ್ಮ ಲೇಖನಗಳ ಮೂಲಕ ನಾಡಿಗೆ ಪರಿಚಯಿಸಿದ್ದರು ಎಂದಿದ್ದಾರೆ.
ಸಾಮಾಜಿಕ ಕಳಕಳಿಯ ಹಾಗೂ ನೈಜ ಪತ್ರಕರ್ತ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿ, ಇಂದಿನ ತಲೆಮಾರಿನ ಪತ್ರಕರ್ತರಿಗೆ ಆದರ್ಶರಾಗಿದ್ದ ಪ್ರಮೋದ್ ಮಳ್ಳಿಗಟ್ಟಿಯವರ ಹೆಸರಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಿ, ಆ ಮೂಲಕ ಭವಿಷ್ಯದ ಪತ್ರಕರ್ತರ eನದ ಉನ್ನತೀಕರಣ, ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪೂರಕವಾದ ಶೈಕ್ಷಣಿಕ ವಾತಾವರಣ ಸೃಷ್ಟಿಸಲು ಅನುವು ಮಾಡಿಕೊಡುವಂತೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವಿನಂತಿಸಿದೆ.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಕೂಡಾ ಪ್ರತೀ ವರ್ಷ ಛಾಯಾಚಿತ್ರಕ್ಕಾಗಿ ವಿಶೇಷ ಸಾಧನೆ ಮಾಡಿದ ಪತ್ರಕರ್ತರನ್ನು ಗುರುತಿಸಿ, ಪ್ರಮೋದ್ ಮಳ್ಳಿಗಟ್ಟಿಯವರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಬಹುಮುಖ ವರದಿಗಾರಿಕೆಯ ಇವರ ಸಾಧನೆಯನ್ನು ಗುರುತಿಸಿ, ಪ್ರಮೋದ್‌ರವರಿಗೆ ಮಾಧ್ಯಮ ಅಕಾಡೆಮಿಯು ಪ್ರಶಸ್ತಿ ನೀಡಿ ಗೌರವಿಸಿದೆ ಎನ್ನಲಾಗಿದೆ.
ಈ ಬಾರಿಯ ಮುಂಗಡ ಪತ್ರದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಅಗತ್ಯ ಅನುದಾನವನ್ನು ಪ್ರಕಟಿಸಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಮೋದ್ ಮಳ್ಳಿಗಟ್ಟಿ ಅಧ್ಯಯನ ಪೀಠವನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದ್ದಾರೆ. ಹಾಗೂ ಈ ಪೀಠ ಸ್ಥಾಪನೆ ಮತ್ತು ಅದರ ಸಮಗ್ರ ರೂಪು ರೇಷೆ ಸಿದ್ದಪಡಿಸುವಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸರ್ಕಾರ ಹಾಗೂ ಕುವೆಂಪು ವಿಶ್ವವಿದ್ಯಾಲಯದೊಂದಿಗೆ ಕೈಜೋಡಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್. ರವಿಕುಮಾರ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ, ಹಿರಿಯ ಪತ್ರಕರ್ತ ಎನ್. ಆರ್. ವೆಂಕಟೇಶ್, ಸಂಪಾದಕರ ಸಂಘದ ಎಚ್.ಎನ್. ಮಂಜುನಾಥ್ ಸೇರಿದಂತೆ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಪದಾಧಿಕಾರಿಗಳು, ನಗರದ ಬಹುತೇಕ ಎಲ್ಲ ಪತ್ರಕರ್ತರು, ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post