ಶಿವಮೊಗ್ಗ: ಹುಡುಗಿಯರನ್ನು ಚುಡಾಯಿಸಬೇಡ ಎಂದು ಬುದ್ದಿವಾದ ಹೇಳಿದ್ದರಿಂದ ಕೆರಳಿದ ಹುಡುಗರ ಗುಂಪೊಂದು ವಿದ್ಯಾರ್ಥಿಯೊಬ್ಬರಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಸಹ್ಯಾದ್ರಿ ಕಾಲೇಜು ಬಳಿ ಇಂದು ಘಟನೆ ನಡೆದಿದ್ದು, ಬಿಎಸ್‌ಸಿ ವಿದ್ಯಾರ್ಥಿ ಗೋಕುಲ್ ಹಾಗೂ ಆತನ ಸ್ನೇಹಿತರು ಅಂತಿಮ ಬಿಎಸ್‌ಸಿ ವಿದ್ಯಾರ್ಥಿ ಅವಿನಾಶ್‌ಗೆ ಚೂರಿಯಿಂದ ಇರಿದಿದ್ದಾರೆ ಎಂದು ಹೇಳಲಾಗಿದೆ.

ಗೋಕುಲ್ ಕೆಲ ದಿನಗಳ ಹಿಂದೆ ಕಾಲೇಜಿನ ಹುಡುಗಿ ಚುಡಾಯಿಸಿದ್ದ. ಆಗ ವಿದ್ಯಾರ್ಥಿಗಳೆಲ್ಲ ಸೇರಿ ಉಪನ್ಯಾಸಕರ ಎದುರು ಒಂದೆರಡು ಹೊಡೆತ ಕೊಟ್ಟು ಬುದ್ಧಿವಾದ ಹೇಳಿದ್ದರು. ಇದೇ ಕಾರಣದಿಂದ ಇಂದು ಗೆಳೆಯರ ಜೊತೆ ಬಂದು ಚೂರಿಯಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.
ಗಾಯಗೊಂಡಿರುವ ಅವಿನಾಶ್ ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯಿಂದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ, ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಕೋಟೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

















