ಹೆಲ್ಮೆಟ್ ಸರದಿ ಮುಗಿಯಿತು ಈ ಸೀಟ್ ಬೆಲ್ಟ್ ಸರದಿ. ಎಲ್ಲಿ ನೋಡಿದರಲ್ಲಿ ಪೋಲಿಸರ ದಂಡು ಕಾರು ಚಾಲಕರ ಸೀಟ್ ಬೆಲ್‌ಟ್ ಹುಡುಕಿಕೊಂಡು ಭರ್ಜರಿ ಬೇಟೆ ನಡೆಸುತ್ತಿದೆ.
ಮಾಧ್ಯಮದ ಪ್ರಕಾರವೇ ಕೇವಲ ಮೊದಲ ವಾರವೊಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ದಂಡ ವಸೂಲಾತಿ ಮಾಡಲಾಗಿದೆ. ಇದು ಸಾಧನೆಯೇನಲ್ಲ.
ಸಾರ್ವಜನಿಕರಲ್ಲಿ ಕಾನೂನಿನ ಜಾಗೃತಿ ಮೂಡಿಸಿ ಇರುವ ಕಾನೂನಿನ ಸರಿಯಾದ ಅನುಷ್ಠಾನ ಸಾಧ್ಯವಾಗಿಸಿ ಅದನ್ನು ಪಾಲಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಕರ್ತವ್ಯ ನಿಷ್ಠರಾದಲ್ಲಿ ದಂಡ ಹಾಕುವ ಪ್ರಮೇಯವೇ ಇರದು. ತನ್ಮೂಲಕ ಸಾರ್ವಜನಿಕರಲ್ಲಿ ತಪ್ಪೆಸಗುವ ಹಾಗು ತಪ್ಪಿಸಿಕೊಳ್ಳುವ ತಂತ್ರಗಳಿಗೆ ಕಡಿವಾಣ ಹಾಕಿದಾಗ ಅದನ್ನೊಂದು ಸಾಧನೆಯೆಂದು ಹೇಳಬಹುದು.
ಸೀಟ್ ಬೆಲ್ಟ್ ಕಡ್ಡಾಯ ಬೇಡವೆಂದಲ್ಲ. ನಗರ ಮಿತಿಯೊಳಗೆ ಈ ಸೀಟ್ ಬೆಲ್ಟ್ ಅಗತ್ಯವೇ ಎಂಬುದನ್ನು ಯೋಚಿಸಬೇಕಿದೆ. ಗರಿಷ್ಟ 30 ಕಿಮೀ/ಪ್ರತಿ ಗಂಟೆಗೆ ವಾಹನ ಚಾಲನೆ ಸಾಧ್ಯವಿರದಿದ್ದಾಗ ಸೀಟ್ ಬೆಲ್ಟ್ ಹಾಕದೇ ಇರುವುದರಿಂದ ಆಗಬಹುದಾದ ಅನಾಹುತಗಳು ಅತ್ಯಲ್ಪ.
ಇದರ ಬದಲಾಗಿ ಕಾನೂನುಗಳನ್ನು ಗಾಳಿಗೆ ತೂರಿ ಅಪಾಯಕಾರಿ ಹಾಗೂ ಮಿತಿ ಮೀರಿದ ಅತಿ ವೇಗದ ಚಾಲನೆ, ಹೆಲ್ಮೆಟ್ ಇಲ್ಲದೇ ವಾಹನ ಚಾಲನೆ, ಮೊಬೈಲ್ ಹಿಡಿದು ಮಾತನಾಡುತ್ತ ವಾಹನ ಚಾಲನೆ, ಸಿಗ್ನಲ್ ಜಂಪ್, ಟ್ರಾಫಿಕ್ ಜಾಮ್ ಗೆ ಕಾರಣವಾಗುವ ರಸ್ತೆ ತಿರುವುಗಳು, ಯೂ ತಿರುವುಗಳು ಇತ್ಯಾದಿಗಳಲ್ಲಿ ಅತಿ ವೇಗದಿಂದ ಮುನ್ನುಗ್ಗುವುದು, ನೋ ಪಾರ್ಕಿಂಗ್ ಜಾಗಗಳಲ್ಲಿ ಅನಧಿಕೃತ ಪಾರ್ಕಿಂಗ್ ಮಾಡುವುದು ಹೀಗೆ ಇನ್ನೂ ಹತ್ತು ಹಲವಾರು ದಿನನಿತ್ಯದ ಸಮಸ್ಯೆಗಳಿಗೆ ಸರಿಯಾದ ಮಾರ್ಗ ಕಂಡುಕೊಳ್ಳದ ಪೋಲಿಸ್ ಇಲಾಖೆ ಹುಣ್ಣಿಮೆಯ ಚಂದ್ರ ಕಾಣಿಸಿಕೊಂಡಂತೆ ಎಂದಾದರೊಮ್ಮೆ ರಸ್ತೆ ಬದಿ ಕಾಣಿಸಿಕೊಂಡು ಕಂಡ ಕಂಡಲ್ಲಿ ದಂಡ ಹಾಕುವ ಪೊಲೀಸರ ವರ್ತನೆಗಳು, ತಪ್ಪೆಸಗುವ ಸಾರ್ವಜನಿಕರಿಗೆ ಬೆದರಿಕೆ ಹುಟ್ಟಿಸುವ ಬದಲು ತಪ್ಪಿಸಿಕೊಳ್ಳುವ ಮಾರ್ಗ ತೋರಿಸುತ್ತವೆ. ಪೋಲೀಸರೆಂದರೆ ದಂಡ ಹಾಕುವ ದಂಡ ವ್ಯವಸ್ಥೆಯ ಪ್ರತಿನಿಧಿಗಳು ಎಂಬ ಬಾವನೆ ಜನರಲ್ಲಿ ಈಗಾಗಲೇ ಮೂಡಿದೆ. ಜನರ ಈ ಭಾವನೆಯನ್ನು ಹೋಗಲಾಡಿಸುವಲ್ಲಿ ಇಲಾಖೆ ಚಿಂತಿಸಿದರೆ ಒಳಿತು.
ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಾಗೂ ಅದೇ ಪ್ರಮಾಣದಲ್ಲಿ ಆಗುತ್ತಿರುವ ಕಾನೂನು ಉಲ್ಲಂಘನೆ ಮತ್ತು ಇದಕ್ಕೆ ಪರಿಹಾರ ಮಾರ್ಗಗಳು ಇಂದಿನ ಬಹು ಮುಖ್ಯ ವಿಷಯ. ಹತ್ತಾರು ವರ್ಷಗಳಿಂದ ಇರುವ ರಸ್ತೆಗಳ ಅಗಲವಷ್ಟೇ. ಆದರೆ ವಾಹನಗಳ ಸಂಖ್ಯೆ ಮಾತ್ರ ಮಿತಿ ಮೀರಿದೆ. ಲಕ್ಷ್ಮೀ ಟಾಕೀಸ್ ವೃತ್ತದಿಂದ ಟಿ ಎಸ್ ಬಿ (ಗೋಪಿ) ವೃತ್ತದವರೆಗೆ ಕಾರಿನಲ್ಲಿ ಬರುವುದೆಂದರೆ ಅದೊಂದು ಸಾಹಸವೇ ಎಂಬಂತಿರುವಾಗ ಇನ್ನು ಅಪಘಾತದ ಮಾತೆಲ್ಲಿ? ಒಂದಕ್ಕೊಂದು ವಾಹನಗಳು ಸ್ಪರ್ಶಗೊಂಡು ಉಂಟಾಗುವ ಘರ್ಷಣೆಗಳು ಬಹುಶಃ ಪೊಲೀಸ್ ಇಲಾಖೆಗೆ ಅಪಘಾತಗಳಂತೆ ಕಂಡಿರಬೇಕು.
ದಂಡ ಹಾಕಲೇಬೇಕೆಂದಾದಲ್ಲಿ ಈ ಕೆಳಗೆ ಹೇಳಲಾದ ಕೆಲವು ಉಲ್ಲಂಘನೆಗಳಿಗೆ ಹಾಕಿ. ಅಪಘಾತಗಳನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು.
- ನಗರ ಮಿತಿಯೊಳಗೆ ಹೈ ಬೀಮ್ ಹೆಡ್ ಲೈಟ್ ಬಳಸಿದಲ್ಲಿ (ಸಾಕಷ್ಟು ಜನರಿಗೆ ಇದು ತಿಳಿದಿಲ್ಲ)
- ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದಲ್ಲಿ
- ಅನಧಿಕೃತ ಪಾರ್ಕಿಂಗ್ ಮಾಡಿದಲ್ಲಿ
- ನಗರ ಮಿತಿಯಲ್ಲಿ ಅತಿ ವೇಗದ ಚಾಲನೆ ಹಾಗೂ ಕರ್ಕಶ ಹಾರ್ನ್ ಬಳಸಿದಲ್ಲಿ
- ಹೆಲ್ಮೆಟ್ ಬಳಸದಿದ್ದಲ್ಲಿ
- ರ್ಕಿಂಗ್ ಜಾಗಗಳಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿದವರಿಗೆ
- ಟ್ರಾಫಿಕ್ ಜಾಮ್ ಗೆ ಕಾರಣವಾಗುವ ವ್ಯಕ್ತಿಗಳಿಗೆ, ವಾಹನಗಳಿಗೆ
- ಏಕಮುಖ ಸಂಚಾರದಲ್ಲಿ ವಿರುದ್ದ ದಿಕ್ಕಿನಲ್ಲಿ ಬರುವವರಿಗೆ
- ಸಿಗ್ನಲ್ ಜಂಪ್ ಮಾಡುವವರಿಗೆ
- ದ್ವಿಚಕ್ರ ವಾಹನದಲ್ಲಿ ತ್ರಿಬ್ಬಲ್ ರೈಡ್ ಮಾಡಿದವರಿಗೆ, ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ,
- ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದವರಿಗೆ
- ಮೋಜಿಗಾಗಿ ಎಲ್ಇಡಿ ಹೆಡ್ ಲೈಟ್ ಬದಲಾಯಿಸಿದವರಿಗೆ
ಹೀಗೆ ಇನ್ನೂ ಹತ್ತು ಹಲವಾರು ಉಲ್ಲಂಘನೆಗಳನ್ನು ಹೆಸರಿಸಬಹುದು. ಇವುಗಳು ಪೊಲಿಸ್ ಇಲಾಖೆಗೆ ತಿಳಿಯಲಾರದವೇನೂ ಅಲ್ಲ. ಆದರೆ ಸರ್ಕಲ್ ಗಳಲ್ಲಿ ಮೊಬೈಲ್ ಹಿಡಿದು ಸಮಯ ವ್ಯರ್ಥ ಮಾಡುವ ಪೋಲೀಸರು ಕಾನೂನಿನ ಅನುಷ್ಠಾನಕ್ಕೆ ಪ್ರಯತ್ನಿಸಿದಲ್ಲಿ ಮತ್ಯಾವ ಹೊಸ ಕಾನೂನಿನ ಅಗತ್ಯವಿರುವುದಿಲ್ಲ.ಪೊಲೀಸ್ ಇಲಾಖೆಯಿಂದ ನಾವಿದನ್ನು ನಿರೀಕ್ಷಿಸಬಹುದೇ?
ವಿಶೇಷ ಲೇಖನ: ರೋ. ನಾಗರಾಜ ಶೆಟ್ಟರ್, ಶಿವಮೊಗ್ಗ
Discussion about this post