ಶಿವಮೊಗ್ಗ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿಮಾ ಸಂಭ್ರಮದಲ್ಲಿ, ಲೆಬಾನಾನ್ ದೇಶದ 2007 ರ ಅಂತ್ಯದಲ್ಲಿ ತೆರೆಕಂಡು ಸೂಡಾನ್ಸ್ ಚಿತ್ರೋತ್ಸವ ಮತ್ತು ವೆನ್ನಿಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ವೀಕ್ಷಕರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದ “ಅಂಡರ್ ದಿ ಬಾಂಬ್” ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾ ಭವನದ ಎರಡನೇ ಮಹಡಿಯ ಮಿನಿಚಿತ್ರಮಂದಿರಲ್ಲಿ ಜ. 05 ರಂದು ಸಂಜೆ 5.30ಕ್ಕೆ ಆರಂಭವಾಗಲಿದೆ.
ಅಂಡರ್ ದಿ ಬಾಂಬ್ ಚಿತ್ರದು 2006ನಲ್ಲಿ ನಡೆದ ಲೆಬನಾನ್ ಯುದ್ದದ ಹಿನ್ನೆಲೆಯನ್ನೊಳಗೊಂಡ ಚಿತ್ರ. ಜಿಯಾ ಲೆಬೆನಾನ್ ನಲ್ಲಿ ಬೆಳೆದ ಮಹಿಳೆಯಾದರೂ ತನ್ನ ಗಂಡನೊಂದಿಗೆ, ದುಬೈನಲ್ಲಿ ತನ್ನ 6 ವರ್ಷದ ಮಗನೊಂದಿಗೆ ವಾಸಿಸುತ್ತಿರುತ್ತಾಳೆ. ಬೇಸಿಗೆ ರಜೆಗಾಗಿ ತನ್ನ ಮಗನನ್ನು ಲೆಬೆನಾನ್‌ನ ಬೇಹೈರತ್ ನಗರದಲ್ಲಿರುವ ತನ್ನ ಸಹೋದರಿಯ ಮನೆಗೆ ಕಳುಹಿಸಿರುತ್ತಾಳೆ. 2006ನ ಲೆಬೆನಾನ್ ಯುದ್ದ ಆರಂಭವಾಗಿರುವ ವಿಷಯ ತಿಳಿದು, ತನ್ನ ಮಗನನ್ನು ಕರೆದೊಯ್ಯಲು ಜಿಯಾ ದುಬೈ ನಿಂದ ಬೇಹೈರತ್ ನಗರಕ್ಕೆ ಟರ್ಕಿ ಮೂಲಕ ಪಯಣಿಸುತ್ತಾಳೆ. ತನ್ನ ಮಗನನ್ನು ಹುಡುಕಲು, ಜಿಯಾ ಲೆಬೆನಾನ್ ಕ್ರೈಸ್ತ ಟಾಕ್ಸಿ ಚಾಲಕ ಟೋನಿಯ ಸಹಾಯ ಪಡೆದು, ದಕ್ಷಿಣ ಲೆಬೆನಾನ್ ಕಡೆಗೆ ಪಯಣಿಸುತ್ತಾಳೆ. ತನ್ನ ಪಯಣದಲ್ಲಿ ಯುದ್ದಕ್ಕೆ ಸಂಬಂಧಿಸಿದ ಹಲವು ಸತ್ಯಗಳ ಅನಾವರಣವಾಗುತ್ತದೆ. ಕಡೆಗೆ ಜಿಯಾ ತನ್ನ ಮಗನನ್ನು ಸೇರಿದಳೇ? ಎಂಬುದು ಚಿತ್ರದ ಕಥಾ ವಸ್ತು.
ಚಿತ್ರದಲ್ಲಿ ನಾದಾ, ಜರ‍್ಜಿಯಸ್ ಮುಂತಾದವರಿದ್ದು ಚಿತ್ರಕ್ಕೆ ಫಿಲಿಪೇ ಆರಟ್ಟಿಂಗಿಯ ದಕ್ಷ ನಿರ್ದೇಶನವಿದೆ. ಪ್ರದರ್ಶನ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲು ಕೋರಲಾಗಿದೆ. ಚಿತ್ರದ ಒಟ್ಟು ಅವಧಿ 98 ನಿಮಿಷಗಳು. ಚಿತ್ರಕ್ಕೆ ಇಂಗ್ಲೀಷ್ ಸಬ್ ಟೈಟಲ್ ಇದೆ.
(ವರದಿ: ಡಾ.ಸುಧೀಂದ್ರ)
Discussion about this post