ಶಿವಮೊಗ್ಗ: ಮಲೆನಾಡಿನ ಜನರ ಆರೋಗ್ಯ ಸುಧಾರಣೆಯ ಗುರಿ ಹೊಂದಿರುವ ವಿ ಕೇರ್ ಡಯಾಬಿಟಿಕ್ ಸೆಂಟರ್ ನಗರದಲ್ಲಿ ಇತ್ತೀಚೆಗೆ ಉದ್ಘಾಟನೆಯಾಯಿತು.
ಗೋಪಾಳದಲ್ಲಿರುವ ವಿ ಕೇರ್ ಡಯಾಬಿಟಿಕ್ ಸೆಂಟರನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಅವರು, ಇಂದಿನ ಕಾಲಮಾನದಲ್ಲಿ ಡಯಾಬಿಟಿಕ್ ಒಂದು ಗಂಭೀರ ಕಾಯಿಲೆಯೇನಲ್ಲ. ಡಯಾಬಿಟೀಸ್ ಹೊಂದಿರುವವರು ಮಾನಸಿಕ ಒತ್ತಡಕ್ಕೆ ಒಳಗಾಗದೇ, ಅಗತ್ಯ ಜಾಗ್ರತೆ ಹಾಗೂ ಚಿಕಿತ್ಸೆಯನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಇಂತಹ ವ್ಯಕ್ತಿಗಳಿಗೆ ಮಾನಸಿಕ ಹಾಗೂ ವೈದ್ಯಕೀಯ ಸಹಕಾರ ನೀಡುವ ಗುರಿಯನ್ನು ಹೊಂದುವ ಮೂಲಕ ವಿಕೇರ್ ಡಯಾಬಿಟಿಕ್ ಸೆಂಟರ್ ಇಂದು ಉದ್ಘಾಟನೆಯಾಗಿರುವುದು ಸಂತಸದ ವಿಚಾರ ಎಂದರು.

ಜನರ ಆರೋಗ್ಯ ರಕ್ಷಣೆ ಹಾಗೂ ಸುಧಾರಣೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬದ್ದವಾಗಿದ್ದು, ಇದಕ್ಕಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿವೆ ಇದನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದವರು ಕರೆ ನೀಡಿದರು.
ಮಧುಮೇಹ ತಜ್ಞ ಡಾ.ವೀಕ್ಷಾ ಜಯರಾಮ್ ಮತ್ತು ನರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಸಾತ್ವಿಕ್ ನೇತೃತ್ವದಲ್ಲಿ ಈ ಕೇಂದ್ರವನ್ನು ಆರಂಭಿಸಲಾಗಿದೆ.
ಖ್ಯಾತ ಹಿರಿಯ ನರರೋಗ ತಜ್ಞ ಡಾ.ಶಿವರಾಮ ಕೃಷ್ಣ, ಗೋಪಾಳಗೌಡ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೂರ್ಯನಾರಾಯಣ, ಗೋಪಾಳ ವನಶ್ರೀ ಸಂಘದ ಅಧ್ಯಕ್ಷ ಡಾ. ಶ್ರೀನಿವಾಸ ರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

















