ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
12ನೇ ಶತಮಾನದಲ್ಲಿನ ಮೂಢನಂಬಿಕೆಗಳು, ಜಾತಿ ಪದ್ಧತಿ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕಾಯಕ ಶರಣರ ಕೊಡುಗೆ ಅಪಾರವಾದುದು ಎಂದು ಶಿಕ್ಷಕ ಪ್ರಶಾಂತ ಕುಬಸದರವರು ತಿಳಿಸಿದರು.
ಶಿರಾಳಕೊಪ್ಪ ಅಂಬೇಡ್ಕರ್ ವಸತಿ ನಿಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ್ ಹೋಬಳಿ ಘಟಕ ಶಿರಾಳಕೊಪ್ಪದ ವತಿಯಿಂದ ಹಮ್ಮಿಕೊಂಡಿದ್ದ ದಿ.ಶೇಖರಯ್ಯ ಮತ್ತು ದ್ರಾಕ್ಷಾಯಣಮ್ಮ ದಂಪತಿಗಳ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಶಿವಶರಣರು ಸಮಾಜಕ್ಕೆ ನೀಡಿದ ಕೊಡುಗೆ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸತ್ಯ, ಶುದ್ಧ ಕಾಯಕದ ಮೂಲಕ ಜೀವನ ನಡೆಸುವ ಕುರಿತಂತೆ ಅಂದಿನ ಅನೇಕ ವಚನಕಾರರು ತಮ್ಮ ಪರಿಣಾಮಕಾರಿಯಾದ ವಚನಗಳನ್ನು ರೂಪಿಸುವ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ್ದರು. ಅವರ ವಚನಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ. ಅವರು ನೀಡಿರುವ ಸಂದೇಶಗಳನ್ನು ಎಲ್ಲರೂ ಪಾಲಿಸಿದ್ದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.
ಅಂದಿನ ಅನುಭವ ಮಂಟಪವೇ ಇಂದಿನ ಸಂಸತ್‌ಗೆ ಮಾದರಿಯಾಗಿದೆ.ಶರಣ ಸಂಸ್ಕತಿ ಅಂದರೆ ಕಾಯಕ ಮತ್ತು ದಾಸೋಹ. ತ್ಯಾಗ ಮತ್ತು ಸೇವೆ ಶರಣರು ಕೊಟ್ಟ ಚಿರಂತನ ಮೌಲ್ಯಗಳಾಗಿವೆ. ಶರಣರು ಸರಳತೆಯ ಪ್ರತೀಕ. ಯಾವುದು ಸರಳವಾಗಿರುತ್ತದೆ ಅದು ಸುಂದರವಾಗಿರುತ್ತದೆ. ಸತ್ಯವೇ ದೇವರು. ವರ್ಗ, ವರ್ಣ, ಜಾತಿ ಬೇಧವನ್ನು ಅಳಿಸಿ ಸರ್ವರೂ ಸಮಾನರು ಎಂದು ಸಾರಿದ ಶರಣರು 12ನೇ ಶತಮಾನದಲ್ಲಿಯೇ ಕಲ್ಯಾಣ ಕರ್ನಾಟಕದ ಪರಿಕಲ್ಪನೆ ಹುಟ್ಟು ಹಾಕಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿಕ್ಷಕರಾದ ರಮೇಶ್.ಬಿ ರವರು ದಿ.ಮೂಕಾಂಬಿಕಾ ಎಣ್ಣೆ ರಾಮಪ್ಪ ಸ್ಮರಣಾರ್ಥ ನೀಡಿದ ದತ್ತಿನಿಧಿ ಕಾರ್ಯಕ್ರಮದಲ್ಲಿ ಧರ್ಮ ಮತ್ತು ಸಾಹಿತ್ಯ ಕುರಿತು ಧರ್ಮ ಮತ್ತು ಸಾಹಿತ್ಯವು ಇತಿಹಾಸದುದ್ದಕ್ಕೂ ಆಳವಾದ ಸಹಜೀವನದ ಸಂಬಂಧವನ್ನು ಹೊಂದಿದ್ದು, ಪರಸ್ಪರ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ತಿಳುವಳಿಕೆಯನ್ನು ವೃದ್ಧಿಸಿವೆ. ಧಾರ್ಮಿಕ ನಂಬಿಕೆಗಳು ಸಾಹಿತ್ಯಕ್ಕೆ ಸ್ಫೂರ್ತಿಯಾದರೆ, ಸಾಹಿತ್ಯವು ಧರ್ಮದ ಸಂದೇಶಗಳನ್ನು ಸಂಕೇತಗಳ ಮೂಲಕ ಜನರಿಗೆ ತಲುಪಿಸುತ್ತದೆ. ಮಹಾಕಾವ್ಯಗಳು, ವಚನಗಳು ಮತ್ತು ಪುರಾಣಗಳು ಧರ್ಮ ಮತ್ತು ಸಾಹಿತ್ಯದ ಸಮ್ಮಿಲನಕ್ಕೆ ಸಾಕ್ಷಿಯಾಗಿವೆ. ಸಾಹಿತ್ಯವು ಧರ್ಮವನ್ನು ಮರುಶೋಧಿಸಲು ಮತ್ತು ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ನವೀಕರಿಸಲು ಸಹಾಯ ಮಾಡುತ್ತದೆ. ಇವೆರಡೂ ಸೇರಿ ಸಮಾಜದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜೀವನವನ್ನು ಶ್ರೀಮಂತಗೊಳಿಸುತ್ತವೆ. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕ ಸಾ ಪ ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀ ಟಿ.ಎಂ.ಮಂಜಣ್ಣ ವಹಿಸಿದ್ದರು. ವಸತಿ ನಿಲಯದ ನಿಲಯ ಪಾಲಕರಾದ ಪ್ರಭು.ಬಿ.ಹೆಚ್ ಕಾರ್ಯಕ್ರಮ ಉದ್ಘಾಟಿಸಿದರು. ಕೋಶ್ಯಾಧ್ಯಕ್ಷರಾದ ಚಂದ್ರಶೇಖರ್ ಸುರಹೊನ್ನೆ ಪ್ರಾಸ್ತಾವಿಕ ಮಾತನಾಡಿದರು.ಡಾ.ಗಂಗಾಧರ್ ನಾಯರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವಸತಿ ನಿಲಯದ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಕ ಸಾ ಪ ಸದಸ್ಯರು ಉಪಸ್ಥಿತರಿದ್ದರು. ದೀಪ ಪ್ರಾರ್ಥಿಸಿ, ಮಾರುತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮೌನೇಶ್ ರವರು ಸ್ವಾಗತಿಸಿ, ನಿವೃತ್ತ ಸೇನಿಕರಾದ ಕೃಷ್ಣಮೂರ್ತಿ ವಂದಿಸಿ, ನಿವೃತ್ತ ಶಿಕ್ಷಕರಾದ ಪಾಂಡುರಂಗ ಜನ್ನು ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















