ಶಿರಡಿ: ಮಹಾರಾಷ್ಟçದ ಪವಿತ್ರ ಯಾತ್ರಾಸ್ಥಳ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕೇವಲ 11 ದಿನದಲ್ಲಿ 14.54 ಕೋಟಿ ರೂ. ಕಾಣಿಕೆ ಹಣ ಸಂಗ್ರಹವಾಗುವ ಮೂಲಕ ಹೊಸ ದಾಖಲೆ ಬರೆದಿದೆ.
2018ರ ಡಿಸೆಂಬರ್ 22ರಿಂದ ಹೊಸ ವರ್ಷದ ದಿನದವರೆಗೂ ಅಂದರೆ ಸುಮಾರು 11 ದಿನದಲ್ಲಿ ಇಷ್ಟು ದೊಡ್ಡ ಮೊತ್ತದ ಕಾಣಿಕೆ ಹಣ ಸಂಗ್ರಹವಾಗಿದೆ.
ಇನ್ನು, ಈ 11 ದಿನಗಳ ಅವಧಿಯಲ್ಲಿ ಸುಮಾರು 4.5 ಲಕ್ಷ ಭಕ್ತರು ಸಾಯಿಬಾಬಾ ದರ್ಶನ ಪಡೆದಿದ್ದಾರೆ ಎಂದು ವರದಿಯಾಗಿದ್ದು, ಇದು ಸಾಮಾನ್ಯ ರಜಾ ದಿಗಳಲ್ಲಿನ ಭಕ್ತ ಸಂಖ್ಯೆಗಿಂತಲೂ ಅಧಿಕ ಎನ್ನಲಾಗಿದೆ.
ಸಂಗ್ರಹವಾಗಿರುವ 14.54 ಕೋಟಿ ರೂ.ಗಳಲ್ಲಿ ಸುಮಾರು 30 ಲಕ್ಷ ರೂ.ಗಳು ಸುಮಾರು 18 ವಿವಿಧ ದೇಶಗಳಿಂದ ಸಂದಾಯವಾಗಿರುವ ಕಾಣಿಕೆಯಾಗಿದೆ. ಕಾಣಿಕೆ ಡಬ್ಬಿಯಲ್ಲೇ 8.5 ಕೋಟಿ ರೂ. ಸಂಗ್ರಹವಾಗಿದ್ದು, ಡೊನೇಶನ್ ಕೌಂಟರ್ ನಲ್ಲಿ 3 ಕೋಟಿ ರೂ. ಡಿಡಿ ಮೂಲಕ ಸಂಗ್ರಹವಾಗಿದೆ.
ಹಣದ ರೂಪದಲ್ಲಿ ಮಾತ್ರವಲ್ಲದೇ 507 ಗ್ರಾಂ ಚಿನ್ನ ಹಾಗೂ 16.5 ಕೆಜಿ ಬೆಳ್ಳಿಯೂ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.
Discussion about this post